

ಪುಣೆ: ವೃತ್ತಿಜೀವನದ ಕೊನೆಯ ಟೆನಿಸ್ ಋತುವಿನಲ್ಲಿ ಕಣಕ್ಕಿಳಿದಿರುವ ಲಿಯಾಂಡರ್ ಪೇಸ್, ನಿವೃತ್ತಿಯ ನಂತರ ರಾಹುಲ್ ದ್ರಾವಿಡ್ ಮತ್ತು ಪುಲ್ಲೇಲಾ ಗೋಪಿಚಂದ್ ಅವರಂತೆ ಚಾಂಪಿಯನ್ ಆಟಗಾರರನ್ನು ರೂಪಿಸುವತ್ತ ಗಮನ ಹರಿಸುವುದಾಗಿ ಹೇಳಿದ್ದಾರೆ.
ದ್ರಾವಿಡ್ 19 ವಯೋಮಿತಿ ಮತ್ತು ಭಾರತ ಎ ತಂಡದ ಕೋಚ್ ಆಗಿ ಪ್ರತಿಭಾನ್ವಿತ ಆಟಗಾರರಿಗೆ ಮಾರ್ಗದರ್ಶನ ನೀಡಿದ್ದರೆ, ಗೋಪಿಚಂದ್ ಒಲಿಂಪಿಕ್ಸ್ ಪದಕ ವಿಜೇತ ಷಟ್ಲರ್ಗಳಾದ ಸೈನಾ ನೆಹ್ವಾಲ್, ಪಿವಿ ಸಿಂಧು ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ‘ನನ್ನ 2ನೇ ಇನಿಂಗ್ಸ್ನಲ್ಲೂ ಸಾಕಷ್ಟು ಕೆಲಸಗಳಿವೆ. ನಾನು ಸಮರ್ಥವಾಗಿ ಕಾರ್ಯನಿರ್ವಹಿಸುವೆನೇ ಎಂಬುದು ಗೊತ್ತಿಲ್ಲ. ಆದರೆ ಗ್ರಾಂಡ್ ಸ್ಲಾಂ ಗೆಲ್ಲಬಲ್ಲ ಮತ್ತು ಒಲಿಂಪಿಕ್ಸ್ನಲ್ಲಿ ಆಡಬಲ್ಲ ಸಾಮರ್ಥ್ಯದ ಆಟಗಾರರನ್ನು ಶೋಧಿಸಲಿದ್ದೇನೆ’ ಎಂದಿದ್ದಾರೆ.
‘ಭಾರತದಲ್ಲಿ ಟೆನಿಸ್ಗೆ ಪುನರುತ್ಥಾನದ ಅಗತ್ಯವಿದೆ. ಈಗ ಐಪಿಎಲ್ ಮಾತ್ರವಲ್ಲದೆ, ಟೇಬಲ್ ಟೆನಿಸ್, ಬಾಕ್ಸಿಂಗ್, ಕುಸ್ತಿ, ಬ್ಯಾಡ್ಮಿಂಟನ್, ಕಬಡ್ಡಿಯಲ್ಲೂ ಲೀಗ್ಗಳಿದ್ದು, ಕ್ರೀಡಾಸ್ಪರ್ಧೆಗಳು ಸಾಕಷ್ಟು ಹೆಚ್ಚಿವೆ. ಈ ಸಮಯದಲ್ಲಿ ಟೆನಿಸ್ಗೆ ಹೆಚ್ಚಿನ ಮಕ್ಕಳನ್ನು ಸೆಳೆಯಬೇಕಾಗಿದೆ’ ಎಂದು 46 ವರ್ಷದ ಪೇಸ್ ಹೇಳಿದ್ದಾರೆ. ಅವರು ಮುಂದಿನ ವಾರ ಬೆಂಗಳೂರು ಓಪನ್ನಲ್ಲಿ ಆಡಲಿದ್ದಾರೆ.