

ಕುಮಾಮೊಟೊ: ಭಾರತದ ಲಕ್ಷ್ಯ ಸೇನ್ ತಾನಾಡಿದ ಸತತ 2ನೇ ಟೂರ್ನಿಯಲ್ಲಿ ಫೈನಲ್ಗೇರಿದ ಸಾಧನೆ ಮಾಡಿದ್ದಾರೆ. ವಿಶ್ವ ನಂ. 13 ಲಕ್ಷ್ಯ ಸೇನ್ ಕುಮಾಮೊಟೊ ಮಾಸ್ಟರ್ಸ್ ಜಪಾನ್ ಸೂಪರ್-500 ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ವಿಶ್ವ ನಂ.10 ಇಂಡೋನೇಷ್ಯಾದ ಅಲ್ವಿ ರ್ಹಾನ್ಗೆ 3 ಗೇಮ್ಗಳ ಹೋರಾಟದಲ್ಲಿ ಸೋಲುಣಿಸುವ ಮೂಲಕ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದರು.
ಅವರು ಈ ಮುನ್ನ ಆಡಿದ್ದ ಹೈಲೋ ಓಪನ್ನಲ್ಲಿ ಪ್ರಶಸ್ತಿ ಜಯಿಸಿದ್ದರು. ಶನಿವಾರ ನಡೆದ ಸೆಮಿಫೈನಲ್ನಲ್ಲಿ 8ನೇ ಶ್ರೇಯಾಂಕಿತ ಲಕ್ಷ್ಯ ಸೇನ್ 21-12, 15-21, 21-11ರಿಂದ 6ನೇ ಶ್ರೇಯಾಂಕಿತ ರ್ಹಾನ್ಗೆ ಸೋಲುಣಿಸಿದರು. ಲಕ್ಷ್ಯ ಸೇನ್ ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಆತಿಥೇಯ ಜಪಾನ್ನ ಕೋಕಿ ವತನಾಬೆ ವಿರುದ್ಧ ಸೆಣಸಲಿದ್ದಾರೆ.
ಫೈನಲ್ಗೇರಿರುವುದರಿಂದ ಲಕ್ಷ್ಯ, ವರ್ಷಾಂತ್ಯದ ಬಿಡಬ್ಲ್ಯುಎಫ್ ವಿಶ್ವ ಟೂರ್ ಫೈನಲ್ಸ್ಗೆ ಅರ್ಹತೆ ಪಡೆಯುವ ಅವಕಾಶ ವೃದ್ಧಿಸಿಕೊಂಡಿದ್ದಾರೆ. ಇನ್ನು ಅವರು ರನ್ನರ್ಅಪ್ ಆದರೂ, ವರ್ಲ್ಡ್ ಟೂರ್ ರ್ಯಾಂಕಿಂಗ್ನಲ್ಲಿ 8ನೇ ಸ್ಥಾನಕ್ಕೇರಲಿದ್ದಾರೆ. ಹಾಲಿ ಋತುವಿನ ಇನ್ನೆರಡು ಸೂಪರ್ ಸಿರೀಸ್ ಟೂರ್ನಿಗಳು ಬಾಕಿ ಉಳಿದಿದ್ದು, ಬಳಿಕ ಅಗ್ರ 8 ಆಟಗಾರರಿಗೆ ಬಿಡಬ್ಲ್ಯುಎಫ್ ವಿಶ್ವ ಟೂರ್ ಫೈನಲ್ಸ್ ಅರ್ಹತೆ ಲಭಿಸಲಿದೆ.