

ಅವಿನಾಶ್ ಜೈನಹಳ್ಳಿ ಮೈಸೂರು
ದೇಶಿ ಆಟ ಇಷ್ಟಪಡುವವರಿಗೆಲ್ಲ ಲಗೋರಿ ಎಂದರೆ ಅಚ್ಚು ಮೆಚ್ಚು. ಇದೊಂದು ಅಪರೂಪದ ಹಾಗೂ ಅಷ್ಟೇ ಉಲ್ಲಾಸಕರ ಆಟವಾಗಿದ್ದು, ಹೆಸರು ಪುಟಾಣಿಗಳಲ್ಲಷ್ಟೇ ಅಲ್ಲ, ಯುವಕರು ಹಾಗೂ ಹಿರಿಯರಲ್ಲೂ ಉತ್ಸಾಹದ ಚಿಲುಮೆ ಮೂಡಿಸುವಂಥದ್ದು. ಇಂತಹ ವಿಭಿನ್ನ ಆಟದ ಜಿಲ್ಲಾ ಮಟ್ಟದ ಅಸೋಸಿಯೇಷನ್ ಆರಂಭವಾಗಿದೆ.
ಲಗೋರಿ ರಾಜ್ಯ ಮಟ್ಟದ ಅಸೋಸಿಯೇಷನ್ 2021ರಲ್ಲಿ ಸ್ಥಾಪಿಸಲಾಗಿದೆ. ಇದೀಗ ಅದರ ಅಂಗ ಸಂಸ್ಥೆಯಾಗಿ ಮೈಸೂರು ಜಿಲ್ಲಾ ಲಗೋರಿ ಅಸೋಸಿಯೇಷನ್ ಅಸ್ತಿತ್ವಕ್ಕೆ ತರಲಾಗಿದೆ. ಜನಪದ ಅಥವಾ ಸಾಂಪ್ರದಾಯಿಕ ಕ್ರೀಡೆಗಳು ಮನರಂಜನೆಯ ಜತೆಗೆ, ದೈಹಿಕ ಕಸರತ್ತು ಮತ್ತು ಒಗ್ಗಟ್ಟನ್ನು ಕಾಪಾಡುವ ಮೂಲ ಉದ್ದೇಶ ಹೊಂದಿವೆ ಎನ್ನುವುದು ಅನೇಕ ಸಂದರ್ಭಗಳಲ್ಲಿ ಇತಿಹಾಸಕಾರರಿಂದಲೇ ಉಲ್ಲೇಖಿಸಲ್ಪಟ್ಟಿದೆ. ಅಂತೆಯೆ, ಗ್ರಾಮೀಣ ಭಾಗದಲ್ಲಿ ಲಗೋರಿ ಆಟಕ್ಕೆ ಹೆಚ್ಚಿನ ಪ್ರಾಧಾನ್ಯ ಇದೆ. ಸಂಜೆ ವೇಳೆಯಲ್ಲಿ ಊರ ಮುಂದಿನ ಮೈದಾನದಲ್ಲಿ ಹತ್ತಾರು ಬಾಲಕರು ಸೇರಿ ಆಡುತ್ತಿದ್ದ ಲಗೋರಿ ಆಟದಲ್ಲಿಯೂ ವಿವಿಧ ರೀತಿಯಿದೆ.
ಇದೀಗ ಮೈಸೂರಿನಲ್ಲೂ ಲಗೋರಿ ಅಸೋಸಿಯೇಷನ್ ಆರಂಭವಾಗಿರುವುದು ದೇಸಿ ಕ್ರೀಡಾಸಕ್ತರಲ್ಲಿ ಸಂಭ್ರಮ ಹೆಚ್ಚಿಸಿದೆ. ಇತರ ಕ್ರೀಡೆಗಳಂತೆ ಮೈಸೂರಿನಲ್ಲಿ ಲಗೋರಿ ಕ್ರೀಡಾಕೂಟಗಳನ್ನೂ ಆಯೋಜಿಸಲು ಜಿಲ್ಲಾ ಲಗೋರಿ ಅಸೋಸಿಯೇಷನ್ ತಯಾರಿ ನಡೆಸುತ್ತಿದೆ.
ಆಧುನಿಕ ಲಗೋರಿಯ ಜನಕ ಎಂದೇ ಖ್ಯಾತರಾಗಿರುವ ಕರ್ನಾಟಕ ರಾಜ್ಯ ಲಗೋರಿ ಅಸೋಸಿಯೇಷನ್ ಅಧ್ಯಕ್ಷ ದೊಡ್ಡಣ್ಣ ಬರೆಮೇಲು ಅವರ ಮಾರ್ಗದರ್ಶನದಲ್ಲಿ ಅಸ್ತಿತ್ವಕ್ಕೆ ತರಲಾಗಿರುವ ಜಿಲ್ಲಾ ಲಗೋರಿ ಅಸೋಸಿಯೇಷನ್‌ಗೆ ಮಹಾರಾಣಿ ಮಹಿಳಾ ಕಲಾ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಕೆ.ಎಸ್.ಭಾಸ್ಕರ್ ಅಧ್ಯಕ್ಷರಾಗಿದ್ದಾರೆ. ವಿವಿಧ ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕರಾದ ಆಂತೋಣಿ ಮೋಸಸ್(ಕಾರ್ಯದರ್ಶಿ), ವಿ.ಶ್ರೀನಿವಾಸ್, ಡಾ.ವೀಣಾ, ಡಾ.ಶಿವಪ್ರಸಾದ್, ಪರಶಿವಮೂರ್ತಿ, ಚಂದ್ರು(ಉಪಾಧ್ಯಕ್ಷರು), ಜಯಶಂಕರ್(ಸಹಾಯಕ ಕಾರ್ಯದರ್ಶಿ), ಕೆ.ಎಂ.ಕಾಂತರಾಜು(ಖಜಾಂಚಿ), ರಶ್ಮಿ (ಸಹಾಯಕ ಖಜಾಂಚಿ) ಸಮಿತಿಯಲ್ಲಿ ಇದ್ದಾರೆ.
ಇತ್ತೀಚೆಗೆ ನಗರದ ಟೆರೇಷಿಯನ್ ಕಾಲೇಜಿನಲ್ಲಿ ಆಯೋಜಿಸಿದ್ದ ಸಭೆಯಲ್ಲಿ ದೊಡ್ಡಣ್ಣ ಬರೆಮೇಲು ಹಾಗೂ ರಾಜ್ಯ ಕಾರ್ಯದರ್ಶಿ ಕೆ.ಟಿ.ರವಿ ಜಿಲ್ಲಾ ಅಸೋಸಿಯೇಷನ್‌ಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಿದರು. ಜತೆಗೆ, ಲಗೋರಿ ಆಟದ ಬಗ್ಗೆ ತಿಳಿಸಿಕೊಟ್ಟರು.
ಒಬ್ಬರಿಗಿಂತ ಹೆಚ್ಚು, ಎಷ್ಟು ಜನ ಬೇಕಿದ್ದರೂ ಲಗೋರಿ ಆಡಬಹುದು. ಆದರೆ ಒಂದೊಂದು ತಂಡದಲ್ಲಿ ಹೆಚ್ಚೆಂದರೆ ಏಳೆಂಟು ಜನರು ಇರುವುದು ವಾಡಿಕೆ. ಈ ಆಟಕ್ಕೆ ಬಹುದೊಡ್ಡ ಮೈದಾನದ ಅಗತ್ಯವಿಲ್ಲ. ಆದರೆ ಎದುರಾಳಿಯಿಂದ ತಪ್ಪಿಸಿಕೊಳ್ಳುವ ಚಾಕಚಕ್ಯತೆ ಬೇಕಷ್ಟೆ. ಏಳು ಅಥವಾ ಒಂಬತ್ತು ಚಪ್ಪಟೆ ಆಕಾರದ ಕಲ್ಲು ಅಥವಾ ಮರದ ತುಂಟು ಸೇರಿದಂತೆ ಇನ್ನಾವುದೇ ವಸ್ತುಗಳನ್ನು ಬಳಸಬಹುದು. ಇವುಗಳನ್ನು ಒಂದರ ಮೇಲೊಂದರಂತೆ ಜೋಡಿಸಲಾಗುವುದು. ಬಳಿಕ ಆಟಗಾರರನ್ನು ಎರಡು ತಂಡಗಳಾಗಿ ವಿಭಜಿಸಿ ಟಾಸ್ ಹಾಕಲಾಗುತ್ತದೆ. ಗೆದ್ದ ತಂಡ ಮೊದಲು ಚೆಂಡನ್ನು (ಬಟ್ಟೆಯಿಂದ ಸುತ್ತಿ ತಯಾರಿಸಿದ ಚೆಂಡು) ಕಟ್ಟಿದ ಕಲ್ಲುಗಳಿಗೆ ನಿಗದಿಪಡಿಸಿದ ಇಂತಿಷ್ಟು ಅಂತರದಿಂದ ಹೊಡೆಯುವುದು. ಅದು ಕಲ್ಲಿಗೆ ತಾಗಿ ಬಿದ್ದ ಕೂಡಲೇ ಎದುರಾಳಿ ತಂಡ ಅವುಗಳನ್ನು ಮೊದಲಿನಂತೆ ಜೋಡಿಸಲು ಪ್ರಯತ್ನಿಸುತ್ತದೆ. ಆದರೆ ಮತ್ತೊಂದು ತಂಡ ಅದಕ್ಕೆ ಅವಕಾಶ ನೀಡದೆ ಚೆಂಡಿನಿಂದಲೇ ಅವರ ಮೇಲೆ ದಾಳಿ ನಡೆಸುತ್ತದೆ. ಎದುರಾಳಿಗೆ ಚೆಂಡು ತಾಗಿದರೆ ಅವನು ಆಟದಿಂದ ಹೊರಹೋಗಬೇಕು. ಹೀಗೆ ಆ ತಂಡದ ಒಬ್ಬೊಬ್ಬರನ್ನೇ ಔಟ್ ಮಾಡಲಾಗುತ್ತದೆ. ಈ ನಡುವೆಯೂ ಅವರು ಬಿದ್ದ ಕಲ್ಲುಗಳನ್ನು ಮೊದಲಿನಂತೆ ಜೋಡಿಸುವಲ್ಲಿ ಯಶಸ್ವಿಯಾಗಿ ಲಗೋರಿ ಎಂದು ಘೋಷಿಸಿದರೆ, ಮತ್ತೊಂದು ತಂಡ ಸೋತಂತೆ. ಇದರಲ್ಲಿ ತಪ್ಪಿಸಿಕೊಳ್ಳುವ ಚಾಣಾಕ್ಷತೆ ಮತ್ತು ಕಣ್ತಪ್ಪಿಸಿ ಗುರಿ ಸಾಧಿಸುವ ಲಾಭ ಆಟಗಾರರಿಗೆ ಸಿಗುತ್ತದೆ. ಮನರಂಜನೆ ಜತೆ ದೈಹಿಕವಾಗಿಯೂ ಲಗೋರಿ ಉತ್ತಮ ಆಟವಾಗಿದೆ.
ಈಗಾಗಲೇ ಎಂಟು ಜಿಲ್ಲೆಗಳಲ್ಲಿ ಲಗೋರಿ ಅಸೋಸಿಯೇಷನ್ ರಚಿಸಲಾಗಿದೆ. ಲಗೋರಿ ಅಸೋಸಿಯೇಷನ್ ದೇಶದ ಎಂಟು ರಾಜ್ಯಗಳಲ್ಲಿ ಅಸ್ತಿತ್ವದಲ್ಲಿದೆ. ನೂತನವಾಗಿ ಮೈಸೂರು ಜಿಲ್ಲೆಯ ಲಗೋರಿ ಅಸೋಸಿಯೇಷನ್ ರಚಿಸಲಾಗಿದೆ. ರಾಷ್ಟ್ರ ಮಟ್ಟದಲ್ಲೂ ಲಗೋರಿಯ ಅಸೋಸಿಯೇಷನ್ ರಚಿಸಲಾಗಿದೆ. ಮೇ ತಿಂಗಳಲ್ಲಿ ರಾಷ್ಟ್ರ ಮಟ್ಟದ ಲಗೋರಿ ಪಂದ್ಯಾವಳಿಯನ್ನು ಸುಳ್ಯದಲ್ಲಿ ನಡೆಸುತ್ತಿದ್ದೇವೆ.ಕೆ.ಟಿ.ರವಿರಾಜ್ಯ ಲಗೋರಿ ಅಸೋಸಿಯೇಷನ್ ಕಾರ್ಯದರ್ಶಿ ಮೈಸೂರು ಜಿಲ್ಲೆಯ ಲಗೋರಿ ಅಸೋಸಿಯೇಷನ್ ರಚಿಸಲಾಗಿದೆ. ನಮ್ಮ ಸಂಸ್ಥೆ ವತಿಯಿಂದ ಮುಂದೆ ಮೈಸೂರಿನಲ್ಲಿ ನಿರಂತರವಾಗಿ ಲಗೋರಿ ಸ್ಪರ್ಧೆ ಆಯೋಜಿಸುವ ಮೂಲಕ ದೇಸಿ ಕ್ರೀಡೆಯನ್ನು ಬೆಳೆಸುವ ಪ್ರಯತ್ನ ಮಾಡಲಾಗುತ್ತದೆ. ಮುಖ್ಯವಾಗಿ ಇಂದಿನ ಮಕ್ಕಳಿಗೆ ಲಗೋರಿ ಬಗ್ಗೆ ತಿಳಿಸುವ ಕೆಲಸ ಮಾಡುತ್ತೇವೆ.ಕೆ.ಎಸ್.ಭಾಸ್ಕರ್ಅಧ್ಯಕ್ಷ, ಮೈಸೂರು ಜಿಲ್ಲಾ ಲಗೋರಿ ಅಸೋಸಿಯೇಷನ್