ಪ್ರೇಕ್ಷಕರಿಲ್ಲದೆ ಆಡಲ್ವಂತೆ ಈ ಟೆನಿಸ್​ ಆಟಗಾರ್ತಿ!

800_web
Published on

ಪ್ರಾಗ್: ಕರೊನಾ ಹಾವಳಿಯ ನಡುವೆಯೂ ಕ್ರೀಡಾ ಚಟುವಟಿಕೆ ಆರಂಭದ ಮೊದಲ ಹಂತವಾಗಿ ಪ್ರೇಕ್ಷಕರಿಗೆ ಕ್ರೀಡಾಂಗಣದೊಳಗೆ ಪ್ರವೇಶ ನಿರ್ಬಂಧಿಸಲಾಗುತ್ತಿದೆ. ಆದರೆ ಗ್ರಾಂಡ್ ಸ್ಲಾಂ ಟೆನಿಸ್ ಟೂರ್ನಿಗಳನ್ನೂ ಈ ರೀತಿಯಾಗಿ ಪ್ರೇಕ್ಷಕರಿಲ್ಲದೆ ಖಾಲಿ ಕ್ರೀಡಾಂಗಣಗಳಲ್ಲೇ ಆಡಿಸುವುದಾದರೆ, ಅದನ್ನು ರದ್ದುಗೊಳಿಸುವುದೇ ಉತ್ತಮ ಎಂದು ಜೆಕ್ ಗಣರಾಜ್ಯದ ಆಟಗಾರ್ತಿ ಪೆಟ್ರಾ ಕ್ವಿಟೋವಾ ಹೇಳಿದ್ದಾರೆ.

ಎರಡು ಬಾರಿಯ ವಿಂಬಲ್ಡನ್ ಚಾಂಪಿಯನ್ ಕ್ವಿಟೋವಾ, ಪ್ರೇಕ್ಷಕರಿಲ್ಲದೆ ಪಂದ್ಯಗಳನ್ನು ಆಡಲು ನಾನು ಒಪ್ಪುವುದಿಲ್ಲ ಎಂದಿದ್ದಾರೆ. ಜೆಕ್ ಗಣರಾಜ್ಯದಲ್ಲಿ ಈಗಾಗಲೆ ಕೆಲ ಕ್ರೀಡಾ ಚಟುವಟಿಕೆಗಳು ಆರಂಭಗೊಂಡಿದ್ದು, 30 ವರ್ಷದ ಕ್ವಿಟೋವಾ ಕೂಡ ಅಭ್ಯಾಸ ಆರಂಭಿಸಿದ್ದಾರೆ. ಮುಂಬರುವ ಯುಎಸ್ ಓಪನ್ ಅಥವಾ ಫ್ರೆಂಚ್​ ಓಪನ್‌ಗಳನ್ನು ಖಾಲಿ ಕ್ರೀಡಾಂಗಣದಲ್ಲಿ ಆಡುವುದಕ್ಕೆ ಸ್ವಿಸ್ ದಿಗ್ಗಜ ರೋಜರ್ ಫೆಡರರ್ ವಿರೋಧ ವ್ಯಕ್ತಪಡಿಸಿದ್ದರು. ಕ್ವಿಟೋವಾ ಕೂಡ ಅದಕ್ಕೆ ಧ್ವನಿಗೂಡಿಸಿದ್ದಾರೆ.

‘ಗ್ರಾಂಡ್ ಸ್ಲಾಂ ಟೂರ್ನಿ ಆಡುವುದು ಶ್ರೇಷ್ಠವಾದುದು. ನಮಗೆ ಶಕ್ತಿ ತುಂಬುವ ಪ್ರೇಕ್ಷಕರೇ ಇಲ್ಲದೆ ಪಂದ್ಯಗಳನ್ನು ಆಡುವುದು ಸರಿ ಎನಿಸದು. ಇದು ಗ್ರಾಂಡ್ ಸ್ಲಾಂಗೆ ಅರ್ಹವಾದುದಲ್ಲ. ನನಗಿನ್ನೂ ವಯಸ್ಸಿದ್ದು, ಇನ್ನಷ್ಟು ಗ್ರಾಂಡ್ ಸ್ಲಾಂಗಳನ್ನು ಆಡಲು ಬಯಸಿದ್ದೇನೆ. ಆದರೆ ಖಾಲಿ ಕ್ರೀಡಾಂಗಣದಲ್ಲಲ್ಲ’ ಎಂದು ಕ್ವಿಟೋವಾ ಹೇಳಿದ್ದಾರೆ. ಕರೊನಾ ಭೀತಿಯಿಂದಾಗಿ ಈ ವರ್ಷದ ವಿಂಬಲ್ಡನ್ ಟೆನಿಸ್ ಟೂರ್ನಿ ಈಗಾಗಲೆ ರದ್ದುಗೊಂಡಿದೆ. ಹಾಲಿ ಪರಿಸ್ಥಿತಿಯಲ್ಲಿ ಜುಲೈ 20ರವರೆಗೆ ಮಹಿಳಾ ಟೆನಿಸ್ ಟೂರ್ನಿಗಳು ಆರಂಭಗೊಳ್ಳುವ ಲಕ್ಷಣಗಳಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net