

ಈ ಬಾರಿಯ ಐಪಿಎಲ್ನಲ್ಲಿ ಮಹೇಂದ್ರ ಸಿಂಗ್ ಧೋನಿ ಚೆನ್ನಾಗಿ ಆಡುತ್ತಿಲ್ಲ ಎಂಬ ಕಾರಣಕ್ಕೆ ಅವರ ಮಗಳು ಝಿವಾಳಿಗೆ ಇನ್ಸ್ಟಾಗ್ರಾಂನಲ್ಲಿ ಕಿರಾತಕನೋರ್ವ ಅತ್ಯಾಚಾರ ಬೆದರಿಕೆ ಹಾಕಿದ್ದ. ಅವನ ಕಾಮೆಂಟ್ ನೋಡಿದ ನೆಟ್ಟಿಗರು, ಕೆಲವು ಗಣ್ಯರು ಹಿಗ್ಗಾಮುಗ್ಗಾ ಜಾಡಿಸಿದ್ದರು. ಅಷ್ಟೇಅಲ್ಲ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದರು.
ಇದೀಗ ಪೊಲೀಸರು ಝಿವಾಳಿಗೆ ರೇಪ್ ಬೆದರಿಕೆ ಹಾಕಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ದುರುಳ ಗುಜರಾತ್ನ ಕಚ್ ಜಿಲ್ಲೆಯವನಾಗಿದ್ದು, ಝಾರ್ಖಂಡದ ರಾಂಚಿಯಲ್ಲಿರುವ ರಾತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಸಕ್ತ ಐಪಿಎಲ್ನಲ್ಲಿ ಧೋನಿ ಬಳಗ ಸೋಲುತ್ತಿದೆ. ಎಂ.ಎಸ್.ಧೋನಿ ಕೂಡ ಉತ್ತಮವಾಗಿ ಆಡುತ್ತಿಲ್ಲ. ಬುಧವಾರ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ಸಿಎಸ್ಕೆ ಸೋಲುಂಡ ಬಳಿಕ ಈ ವ್ಯಕ್ತಿ, ಧೋನಿ ಪತ್ನಿ ಸಾಕ್ಷಿಯವರ ಇನ್ಸ್ಟಾ ಅಕೌಂಟ್ನಲ್ಲಿ, ನಿಮ್ಮ ಮಗಳನ್ನು ಅತ್ಯಾಚಾರ ಮಾಡುವುದಾಗಿ ಕಾಮೆಂಟ್ ಹಾಕಿದ್ದ. ಬೆದರಿಕೆಯ ಹಿನ್ನೆಲೆಯಲ್ಲಿ ರಾಂಚಿಯ ಸಿಮ್ಲಿಯಾದಲ್ಲಿರುವ ಧೋನಿ ಫಾರ್ಮ್ ಹೌಸ್ನಲ್ಲಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿತ್ತು.
ಬಂಧಿತ ವ್ಯಕ್ತಿಗೆ ಇನ್ನೂ 16 ವರ್ಷ. ಕಚ್ನ ಮುಂಡ್ರಾದಲ್ಲಿರುವ ನಾಮ್ನಾ ಕಪಾಯ ಗ್ರಾಮದ ನಿವಾಸಿಯಾಗಿದ್ದಾನೆ. ತಾನು ಬೆದರಿಕೆ ಕಾಮೆಂಟ್ ಹಾಕಿದ್ದನ್ನು ಇವನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.(ಏಜೆನ್ಸೀಸ್)