ಆಯ್ಕೆಗಾರರ ಹುದ್ದೆಗೆ ಸ್ಪರ್ಧೆ; ಅಜಿತ್ ಅಗರ್ಕರ್‌ಗೆ ಅಬೆ ಕುರುವಿಲ್ಲಾ ಪೈಪೋಟಿ

select web
Published on

ಮುಂಬೈ: ಭಾರತ ಮತ್ತು ಮುಂಬೈ ತಂಡದ ಮಾಜಿ ವೇಗಿ ಅಬೆ ಕುರುವಿಲ್ಲಾ ರಾಷ್ಟ್ರೀಯ ಕ್ರಿಕೆಟ್ ಆಯ್ಕೆ ಸಮಿತಿಯ ಸದಸ್ಯರಾಗಲು ಅರ್ಜಿ ಸಲ್ಲಿಸಿದ್ದಾರೆ. ಈ ಮೂಲಕ ಪಶ್ಚಿಮ ವಲಯದಿಂದ ಮತ್ತೋರ್ವ ಮಾಜಿ ವೇಗಿ ಅಜಿತ್ ಅಗರ್ಕರ್‌ಗೆ ಪೈಪೋಟಿ ನೀಡಲಿದ್ದಾರೆ.

ರಾಷ್ಟ್ರೀಯ ಆಯ್ಕೆ ಸಮಿತಿಯಲ್ಲಿ ಸದ್ಯ 3 ಹುದ್ದೆ ಖಾಲಿಯಾಗಿದೆ. ಶರಣ್ ದೀಪ್ ಸಿಂಗ್ (ಉತ್ತರ ವಲಯ), ದೇವಾಂಗ್ ಗಾಂಧಿ (ಪೂರ್ವ) ಮತ್ತು ಜತಿನ್ ಪರಾಂಜಪೆ (ಪಶ್ಚಿಮ) ಅವಧಿ ಮುಕ್ತಾಯಗೊಂಡಿದೆ. ಹುದ್ದೆಗೆ ಅರ್ಜಿ ಸಲ್ಲಿಸಲು ಬಿಸಿಸಿಐ ನವೆಂಬರ್ 13ರವರೆಗೆ ಗಡುವು ನೀಡಿತ್ತು. ಭಾರತ ತಂಡದ ಪರ 10 ಟೆಸ್ಟ್ ಮತ್ತು 25 ಏಕದಿನ ಪಂದ್ಯವಾಡಿ ತಲಾ 25 ವಿಕೆಟ್ ಕಬಳಿಸಿರುವ ಕುರುವಿಲ್ಲಾ ಕೂಡ ಅದಕ್ಕೆ 2 ದಿನ ಮುಂಚಿತವಾಗಿ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ.

53 ವರ್ಷದ ಕುರುವಿಲ್ಲ ಈ ಮುನ್ನ 2008ರಿಂದ 2012ರವರೆಗೆ ಜೂನಿಯರ್ ಆಯ್ಕೆ ಸಮಿತಿಯಲ್ಲಿದ್ದರು. 2012ರಲ್ಲಿ 19 ವಯೋಮಿತಿ ವಿಶ್ವಕಪ್ ಜಯಿಸಿದ ಭಾರತ ತಂಡದ ಆಯ್ಕೆ ಇವರ ಅಧ್ಯಕ್ಷತೆಯಲ್ಲೇ ನಡೆದಿತ್ತು. ಅದರ ಬೆನ್ನಲ್ಲೇ ಅವರು ಮುಂಬೈನ ಮುಖ್ಯ ಆಯ್ಕೆಗಾರರಾಗಿಯೂ ಕಾರ್ಯನಿರ್ವಹಿಸಿದ್ದರು.

ವಲಯವಾರು ಮಾನದಂಡದಿಂದ ಕಳೆದ ಬಾರಿ ಅವಕಾಶ ವಂಚಿತರಾಗಿದ್ದ ಅಜಿತ್ ಅಗರ್ಕರ್ ಈ ಬಾರಿಯೂ ಸ್ಪರ್ಧೆಯಲ್ಲಿದ್ದು, ಅವರೂ ಮುಂಬೈನ ಮುಖ್ಯ ಆಯ್ಕೆಗಾರರಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.

ಆಯ್ಕೆಗಾರರನ್ನು ಮದನ್‌ಲಾಲ್, ಆರ್‌ಪಿ ಸಿಂಗ್ ಮತ್ತು ಸುಲಕ್ಷಣಾ ನಾಯ್ಕ ಒಳಗೊಂಡ ಕ್ರಿಕೆಟ್ ಸಲಹಾ ಸಮಿತಿ ಆರಿಸಲಿದೆ. ಕಳೆದ ಮಾರ್ಚ್‌ನಲ್ಲಿ ಇಬ್ಬರು ನೂತನ ಆಯ್ಕೆಗಾರರನ್ನಾಗಿ ಕನ್ನಡಿಗ ಸುನೀಲ್ ಜೋಶಿ (ದಕ್ಷಿಣ) ಮತ್ತು ಹರ್ವಿಂದರ್ ಸಿಂಗ್ (ಕೇಂದ್ರ) ಅವರನ್ನು ಇದೇ ಸಮಿತಿ ಆಯ್ಕೆ ಮಾಡಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net