ಟಿ20 ವಿಶ್ವಕಪ್‌ ಗೆಲುವಿನ ಹಿಂದೆ ಕುಮಟಾದ ರಾಘು ಪರಿಶ್ರಮ

Raghu-in-Indian-cricket-team
Published on

ಕಾರವಾರ: ಭಾರತೀಯ ಕ್ರಿಕೆಟ್ ತಂಡ ಟಿ20 ವಿಶ್ವಕಪ್‌ಗೆಲುವಿನ ಹಿಂದೆ ಕನ್ನಡಿಗ ರಾಹುಲ್ ದ್ರಾವಿಡ್ ಶ್ರಮ ಎಲ್ಲರಿಗೂ ತಿಳಿದಿದೆ. ಇನ್ನೊಬ್ಬ ಕನ್ನಡಿಗನ ಶ್ರಮವಿರುವ ಬಗ್ಗೆ ಎಲ್ಲೆಡೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಭಾರತೀಯ ಕ್ರಿಕೆಟ್ ತಂಡದ ಥ್ರೋಡೌನ್ ಸ್ಪೆಷಾಲಿಸ್ಟ್ ಎಸ್.ರಘು(ರಾಘವೇಂದ್ರ ಭಂಡಾರಿ) ಬ್ಯಾಟ್ಸ್ಮೆನ್‌ಗಳ ಅಚ್ಚುಮೆಚ್ಚು. ಅಮೆರಿಕ ಟಿ20 ಗೆದ್ದ ಸಂಭ್ರಮದ ತಂಡದಲ್ಲಿ ಅವರೂ ಮುಂಚೂಣಿಯಲ್ಲಿ ಕಾಣಿಸಿಕೊಂಡರು. ಅವರು ಉತ್ತರ ಕನ್ನಡ ಜಿಲ್ಲೆಯ ಕುಮಟಾದವರು ಎಂಬುದೇ ವಿಶೇಷ. ವಿಶ್ವ ವಿಜೇತ ಭಾರತ ತಂಡದಲ್ಲಿ ಆತನಿರುವುದನ್ನು ಕುಮಟಾದ ಜನರು ಹಾಗೂ ಭಂಡಾರಿ ಕುಟುಂಬ ಸಂಭ್ರಮಿಸುತ್ತಿದೆ.
2011 ರಿಂದ ಅವರು ತಂಡದ ಜತೆಗಿದ್ದಾರೆ. ಬ್ಯಾಟಿಂಗ್ ಪ್ರಾಕ್ಟೀಸ್ ವೇಳೆ ಬೌಲಿಂಗ್ ಮಾಡುವುದು ಅವರ ಕಾಯಕ. ಸೈಡ್ ಆರ್ಮ್ ಸಾಧನದ ಮೂಲಕ ಕನಿಷ್ಠ 150 ಕಿಮೀ ವೇಗದಲ್ಲಿ ಅವರು ಬೌಲಿಂಗ್ ಮಾಡುತ್ತಾರೆ. `ಎಸ್.ರಾಘು ಅವರ ಬೌಲ್‌ನಿಂದ ಪ್ರಾಕ್ಟೀಸ್ ಮಾಡುವುದರಿಂದ ವಿಶ್ವದ ಘಟಾನಘಟಿ ಬೌಲರ್‌ಗಳನ್ನು ಎದುರಿಸುವುದು ನಮಗೆ ಸರಳವಾಗುತ್ತದೆ. ವೇಗದ ಬೌಲರ್‌ಗಳು ನಮಗೆ ಮಧ್ಯಮ ವೇಗಿಗಳಂತೆ ಕಾಣುತ್ತಾರೆ' ಎಂದು ಸ್ವತಃ ವಿರಾಟ್ ಕೊಹ್ಲಿ ಈ ಹಿಂದೆ ಹೇಳಿದ್ದರು.

ಅದ್ಭುತ ಸಾಧನೆ:

ರಘು ಮೂಲತಃ ಕುಮಟಾದ ದೀವಗಿಯವರು. ತಂದೆ ಮೋಹನ ಭಂಡಾರಿ ಶಿಕ್ಷಕರಾಗಿದ್ದರು. ಕುಮಟಾದ ವಿವೇಕ ನಗದಲ್ಲಿ ಅವರ ಕುಟುಂಬ ವಾಸವಾಗಿತ್ತು. ಇಲ್ಲೇ ಅವರ ಪ್ರಾಥಮಿಕ ಶಿಕ್ಷಣವೆಲ್ಲ ಮುಗಿದಿದೆ. ಕ್ರಿಕೆಟ್ ಹುಚ್ಚಿನಿಂದ ಬರಿಗಯ್ಯಯ್ಯಲ್ಲಿ ಊರು ಬಿಟ್ಟ ರಾಘವೇಂದ್ರ ಎಸ್.ರಘು ಆಗಿ ವಿಶ್ವದ ಪ್ರಸಿದ್ಧ ಕ್ರಿಕೆಟಿಗರ ಅಚ್ಚುಮೆಚ್ಚಿನ ವ್ಯಕ್ತಿಯಾಗುವುದರ ಹಿಂದೆ ರೊಚಕ ಕತೆ ಇದೆ. ಹುಬ್ಬಳ್ಳಿಯ ವಿವಿಧೆಡೆ ಉಳಿದು ಕಷ್ಟ ಕಾಲ ಕಳೆದ ರಘು, ಸ್ನೇಹಿತರ ಸಹಕಾರದಲ್ಲಿ ಬೆಂಗಳೂರು ಸೇರುತ್ತಾರೆ. ಕರ್ನಾಟಕ ಇನ್ಸ್ಟ್ಯೂಟ್ ಆಫ್ ಕ್ರಿಕೆಟ್‌ನಲ್ಲಿ ಆಡಲು ಬರುವವರಿಗೆ ಚೆಂಡು ಎಸೆಯುವ ಕಾಯಕವಾಗಿತ್ತು. ಅಲ್ಲಿ ಅವರ ಪ್ರತಿಭೆ ಗುರುತಿಸಿದ ತಿಲಕ್ ನಾಯ್ಡು, ಜಾವಗಲ್ ಶ್ರೀನಾಥ್ ಅವರು ರಣಜಿ ಕ್ರಿಕೆಟ್ ತಂಡದ ನೆಟ್ ಪ್ರಾಕ್ಟೀಸ್ ತಂಕ್ಕೆ ಸೇರಿಸಿಕೊಳ್ಳುತ್ತಾರೆ. ನಂತರ 2011 ರಲ್ಲಿ ಅವರು ಭಾರತ ಕ್ರಿಕೆಟ್ ತಂಡದ ಭಾಗವಾಗಿದ್ದಾರೆ.

ವಿಶ್ವ ವಿಜೇತ ಕ್ರಿಕೆಟ್ ತಂಡದಲ್ಲಿ ನಮ್ಮ ಮಗನಿದ್ದಾನೆ ಎಂಬುದೇ ಹೆಮ್ಮೆಯ ವಿಷಯ. ಅಮೆರಿಕದಿಂದ ಬಂದ ನಂತರ ಊರಿಗೆ ಬರುತ್ತೇನೆ ಎಂದು ಹೇಳಿದ್ದಾನೆ.ಮೋಹನ ಭಂಡಾರಿಎಸ್.ರಘು ತಂದೆ, ಕುಮಟಾ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net