ಬಾಲಿವುಡ್​ ನಟಿ ಜತೆ ಕುಲ್​ದೀಪ್​ ಯಾದವ್​ ಮದುವೆ? ಕಡೆಗೂ ಮೌನ ಮುರಿದ ಸ್ಟಾರ್ ಕ್ರಿಕೆಟಿಗ

ವಿಜಯವಾಣಿ - 2024-07-07T200223.223
Published on

ನವದೆಹಲಿ: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಪರ ತಮ್ಮ ಅಮೋಘ ಬೌಲಿಂಗ್ ಪ್ರದರ್ಶನ ತೋರಿದ ಕುಲ್​ದೀಪ್ ಯಾದವ್, ಕ್ರಿಕೆಟ್ ಅಭಿಮಾನಿಗಳ ಮನಗೆಲ್ಲುವಲ್ಲಿ ಯಶಸ್ವಿಯಾದರು. 17 ವರ್ಷಗಳ ಬಳಿಕ ಭಾರತಕ್ಕೆ ವಿಶ್ವಕಪ್ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಕುಲ್​ದೀಪ್​, ಸದ್ಯ ರಿಲ್ಯಾಕ್ಸ್ ಮೂಡ್​ನಲ್ಲಿದ್ದಾರೆ. ಆದ್ರೆ, ಈ ಮಧ್ಯೆ ಸೋಷಿಯಲ್ ಮೀಡಿಯಾ ಮತ್ತು ಬಿಟೌನ್​ನಲ್ಲಿ ಹರಿದಾಡುತ್ತಿರುವ ಸುದ್ದಿಯೊಂದು ಸದ್ಯ ಅವರ ಅಭಿಮಾನಿಗಳಲ್ಲಿ ಭಾರೀ ಆಶ್ಚರ್ಯ ಉಂಟುಮಾಡಿದೆ.

ಇತ್ತೀಚೆಗಷ್ಟೇ ಟೀಮ್ ಇಂಡಿಯಾ ವಿಶ್ವಕಪ್ ಗೆದ್ದ ಸಂಭ್ರಮದಲ್ಲಿ ಭಾಗಿಯಾಗಿದ್ದ ಕುಲ್​ದೀಪ್​, ಮುಂಬೈನ ಜನಸಾಗರದೊಂದಿಗೆ ತಮ್ಮ ಗೆಲುವನ್ನು ಸಂಭ್ರಮಿಸಿದ್ದು, ವಾಂಖೆಡೆ ಕ್ರೀಡಾಂಗಣದಲ್ಲಿ ಬಿಸಿಸಿಐ ನೀಡಿದ ಪ್ರಶಸ್ತಿಗೆ ಭಾಜನರಾದರು. ಸದ್ಯ ತಮ್ಮ ತವರು ಕಾನ್ಪುರಕ್ಕೆ ಬಂದಿರುವ ಯಾದವ್​ಗೆ ಹುಟ್ಟೂರಿನಲ್ಲಿಯೂ ಅದ್ಧೂರಿ ಸ್ವಾಗತ ಸಿಕ್ಕಿದ್ದು, ಪಟಾಕಿ ಸಿಡಿಸಿ, ಸಿಹಿ ಹಂಚುವ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಇದೆಲ್ಲವನ್ನು ಮುಗಿಸಿ ತಮ್ಮವರೊಂದಿಗೆ ಸಮಯ ಕಳೆಯುತ್ತಿದ್ದ ಸ್ಟಾರ್ ಸ್ಪಿನ್ನರ್​ ತಮ್ಮ ಮದುವೆ ವದಂತಿಗಳಿಗೆ ಬ್ರೇಕ್​ ಹಾಕಿದ್ದಾರೆ.

"ನಾನು ವಿವಾಹವಾಗುವ ಸುದ್ದಿ ಸತ್ಯ. ಆದರೆ ನಟಿಯೊಂದಿಗೆ ಅದರಲ್ಲೂ ಬಾಲಿವುಡ್​ ಚಿತ್ರನಟಿಯ ಜತೆಗೆ ಎಂಬ ಸುದ್ದಿ ಅಕ್ಷರಶಃ ಸುಳ್ಳು. ಇದು ಕೇವಲ ವದಂತಿ ಅಷ್ಟೇ. ಶೀಘ್ರವೇ ನಿಮ್ಮೆಲ್ಲರಿಗೂ ಸಿಹಿ ಸುದ್ದಿ ನೀಡುವೆ. ನನ್ನ ಮತ್ತು ನನ್ನ ಕುಟುಂಬದವರನ್ನು ಆಕೆ ಹೇಗೆ ನೋಡಿಕೊಳ್ಳುತ್ತಾಳೆ ಎಂಬುದು ನನಗೆ ಬಹಳ ಮುಖ್ಯ. ಅದೆಷ್ಟೋ ವರ್ಷಗಳಿಂದ ವಿಶ್ವಕಪ್ ಟ್ರೋಫಿಗಾಗಿ ಕಾಯುತ್ತಿದ್ದ ನಮಗೆ ಈಗ ಸಿಕ್ಕಿದೆ. ಇಂತಹ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮುಖಾಮುಖಿಯಾಗಿ ಭೇಟಿಯಾಗಿದ್ದು ಖುಷಿ ತಂದಿತು" ಎಂದು ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net