

ಬೆಂಗಳೂರು: ವಿಶ್ವಕಪ್ ಜಯಿಸುವ ಕನಸನ್ನು ಭಾರತದ ಆಟಗಾರ್ತಿಯರು ಕಳೆದ 5 ದಶಕದಿಂದಲೂ ಕಾಣುತ್ತ ಬಂದಿದ್ದರು. ಅದು ಭಾನುವಾರ ನನಸಾಯಿತು. ಒಂದೊಂದೇ ಮೆಟ್ಟಿಲು ಏರುತ್ತ ಕೊನೆಗೂ ಈ ದಿನವನ್ನು ಕಾಣುವಲ್ಲಿ ಹಲವು ಆಟಗಾರ್ತಿಯರ ಕೊಡುಗೆ ಇದೆ. ಹಂತ ಹಂತವಾಗಿ ಬೆಳೆಯುತ್ತ ಬಂದ ಮಹಿಳಾ ತಂಡ ಇದೀಗ ತವರಿನಲ್ಲೇ ವಿಶ್ವಕಪ್ ಗೆದ್ದು ಬೀಗಿದೆ. ಇದರಲ್ಲಿ ಪ್ರಮುಖವಾಗಿ 16 ಆಟಗಾರ್ತಿಯರ ಪರಿಶ್ರಮವಿದೆ. ಅವರ ಸಾಧನೆಯ ಹಾದಿ, ಕೊಡುಗೆಗಳ ಸಂಪ್ತ ಮೆಲುಕು ಇಲ್ಲಿದೆ.
ಹರ್ಮಾನ್ಪ್ರೀತ್ ಅನುಭವದ ಬಲ
ತಂಡದ ಅತಿ ಹಿರಿಯ ಆಟಗಾರ್ತಿ ಹಾಗೂ ನಾಯಕಿ ಹರ್ಮಾನ್ಪ್ರೀತ್ ಕೌರ್, ತಾನಾಡಿದ 13ನೇ ವಿಶ್ವಕಪ್ನಲ್ಲಿ (5 ಏಕದಿನ, 8 ಟಿ20) ಕೊನೆಗೂ ಪ್ರಶಸ್ತಿಗೆ ಮುತ್ತಿಕ್ಕುವ ಅವಕಾಶ ಪಡೆದರು. ಪಂಜಾಬ್ನ ಮಧ್ಯಮವರ್ಗದ ಕುಟುಂಬದಲ್ಲಿ ಜನಿಸಿದ ಅವರು, 2009ರಿಂದಲೂ ಭಾರತ ತಂಡದ ಭಾಗವಾಗಿದ್ದಾರೆ. 2022ರಿಂದ ನಾಯಕಿಯಾಗಿರುವ ಅವರು, ಡಬ್ಲ್ಯುಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ಸಾರಥಿಯಾಗಿ 2 ಬಾರಿ ಪ್ರಶಸ್ತಿ ಗೆದ್ದುಕೊಟ್ಟಿದ್ದಾರೆ. ವಿಶ್ವಕಪ್ನಲ್ಲಿ ಅವರ ಅನುಭವಿ ನಾಯಕತ್ವ ಮತ್ತು ಬಲಿಷ್ಠ ಆಸ್ಟ್ರೆಲಿಯಾ ವಿರುದ್ಧದ ಸೆಮಿಫೈನಲ್ನಲ್ಲಿ ಆಡಿದ ನಿರ್ಣಾಯಕ ಆಟ ಗೆಲುವಿನಲ್ಲಿ ಮಹತ್ವದ ಪಾತ್ರ ನಿರ್ವಹಿಸಿತು. ಈ ಮೂಲಕ ಏಕದಿನ ವಿಶ್ವಕಪ್ ಗೆದ್ದ ಭಾರತದ ನಾಯಕರಾದ ಕಪಿಲ್ ದೇವ್, ಎಂಎಸ್ ಧೋನಿ ಸಾಲಿಗೆ ಸೇರಿದರು.
ಸ್ಮೃತಿ ಮಂದನಾ ಆಧಾರಸ್ತಂಭ
ಭಾರತೀಯ ಬ್ಯಾಟಿಂಗ್ ವಿಭಾಗದ ಆಧಾರಸ್ತಂಭ ಮತ್ತು ಉಪನಾಯಕಿ ಸ್ಮ$ತಿ ಮಂದನಾ ವಿಶ್ವಕಪ್ ಆವೃತ್ತಿಯೊಂದರಲ್ಲಿ ಸರ್ವಾಧಿಕ 434 ರನ್ ಸಿಡಿಸಿದ ದಾಖಲೆ ಬರೆದರು. ಮುಂಬೈನ ಮಾರ್ವಾಡಿ ಕುಟುಂಬದಲ್ಲಿ ಜನಿಸಿದ ಅವರು, ಕ್ಲಬ್ ಕ್ರಿಕೆಟಿಗರಾದ ತಂದೆ ಮತ್ತು ಅಣ್ಣನ ಸ್ಫೂರ್ತಿಯಿಂದ ಕ್ರಿಕೆಟ್ ಆಡಲಾರಂಭಿಸಿದ್ದರು. ಶ್ರೀಲಂಕಾದ ಕುಮಾರ ಸಂಗಕ್ಕರ ಬ್ಯಾಟಿಂಗ್ನಿಂದ ಆಕರ್ಷಿತರಾಗಿ ಎಡಗೈನಲ್ಲಿ ಆಡಲಾರಂಭಿಸಿದ್ದರು. ಲೀಗ್ನಲ್ಲಿ ಸತತ 3 ಸೋಲಿನ ಬಳಿಕ ನಾಕೌಟ್ ಕೈತಪ್ಪುವ ಭೀತಿ ಎದುರಾದಾಗ, ನ್ಯೂಜಿಲೆಂಡ್ ವಿರುದ್ಧದ ಮಹತ್ವದ ಪಂದ್ಯದಲ್ಲಿ ಶತಕ ಸಿಡಿಸಿದ್ದರು. ಆಸೀಸ್, ಇಂಗ್ಲೆಂಡ್ ಎದುರು ಲೀಗ್ನಲ್ಲಿ 80 ಪ್ಲಸ್ ರನ್ ಬಾರಿಸಿದ್ದರು. ಫೈನಲ್ನಲ್ಲಿ ಉಪಯುಕ್ತ 45 ರನ್ ಗಳಿಸಿ, ಶತಕದ ಜತೆಯಾಟವನ್ನೂ ಆಡಿದ್ದರು.
ದೀಪ್ತಿ ದಿಟ್ಟತನದ ಆಟ
2011ರ ಏಕದಿನ ವಿಶ್ವಕಪ್ ಗೆಲುವಿನಲ್ಲಿ ಯುವರಾಜ್ ಸಿಂಗ್ ಆಲ್ರೌಂಡ್ ಆಟ ಪ್ರಮುಖ ಪಾತ್ರ ನಿರ್ವಹಿಸಿದಂತೆ, ಮಹಿಳೆಯರ ಜಯದಲ್ಲಿ ದೀಪ್ತಿ ಶರ್ಮ ಅವರ ಆಲ್ರೌಂಡ್ ಆಟವೂ ಅಷ್ಟೇ ಮಹತ್ವದ್ದಾಗಿದೆ. ಉತ್ತರ ಪ್ರದೇಶದ ರೈಲ್ವೇಸ್ ಉದ್ಯೋಗಿಯ ಪುತ್ರಿಯಾದ ಅವರಿಗೆ ಅಣ್ಣ ಸುಮಿತ್ ಶರ್ಮ ಅವರೇ ಬಾಲ್ಯದ ಕೋಚ್. 215 ರನ್ ಮತ್ತು 22 ವಿಕೆಟ್ ಕಬಳಿಸುವ ಮೂಲಕ ಸರಣಿಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು. 2014ರಲ್ಲಿ ಭಾರತ ತಂಡ ಪ್ರವೇಶಿಸಿದ್ದ ದೀಪ್ತಿ ಈಗ ತಂಡದ ಅನುಭವಿ ಆಟಗಾರ್ತಿಯರಲ್ಲಿ ಒಬ್ಬರು ಮತ್ತು ವಿಶ್ವಕಪ್ನಲ್ಲಿ ಅವರ ಆಟವೂ ಅದಕ್ಕೆ ತಕ್ಕಂತೆಯೇ ಇತ್ತು. ಫೈನಲ್ನಲ್ಲಿ ಅರ್ಧಶತಕ ಮತ್ತು 5 ವಿಕೆಟ್ ಗೊಂಚಲು ಪಡೆದು ಹರಿಣಗಳನ್ನು ಕಾಡಿದರು.
ಜಾದು ಮಾಡಿದ ಜೆಮೀಮಾ ರೋಡ್ರಿಗಸ್
ಕಳೆದ ಏಕದಿನ ವಿಶ್ವಕಪ್ ಆಡುವ ಅವಕಾಶವನ್ನು ತಪ್ಪಿಸಿಕೊಂಡಿದ್ದ ಜೆಮೀಮಾ ರೋಡ್ರಿಗಸ್ ಈ ಬಾರಿಯ ಟೂರ್ನಿಯಲ್ಲೂ ಉತ್ತಮ ಆರಂಭ ಕಂಡಿರಲಿಲ್ಲ. ಮೊದಲ 3 ಪಂದ್ಯಗಳಲ್ಲಿ 2ರಲ್ಲಿ ಸೊನ್ನೆ ಸುತ್ತಿದ್ದರು. ಹೀಗಾಗಿ ಇಂಗ್ಲೆಂಡ್ ವಿರುದ್ಧದ ಪಂದ್ಯಕ್ಕೆ 11ರ ಬಳಗದಿಂದಲೇ ಹೊರಬಿದ್ದಿದ್ದರು. ನಂತರ ನ್ಯೂಜಿಲೆಂಡ್ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಬಿರುಸಿನ 76 ರನ್ ಸಿಡಿಸಿ ಬೃಹತ್ ಮೊತ್ತಕ್ಕೆ ನೆರವಾದ ಅವರು, ಆಸೀಸ್ ವಿರುದ್ಧದ ಸೆಮೀಸ್ನಲ್ಲಿ ಅಜೇಯ 127 ರನ್ ಬಾರಿಸಿ ಭಾರತ ಫೈನಲ್ಗೇರುವಲ್ಲಿ ಅಮೂಲ್ಯ ಕೊಡುಗೆ ನೀಡಿದ್ದರು. ಮಂಗಳೂರು ಮೂಲದ ಇವರಿಗೆ ತಂದೆ ಐವಾನ್ ಅವರೇ ಬಾಲ್ಯದ ಕೋಚ್. ಶಾಲಾ ದಿನಗಳಲ್ಲಿ ಹಾಕಿ ಆಟಗಾರ್ತಿಯೂ ಆಗಿದ್ದರು. ಮುಂಬೈ ಪರ ಏಕದಿನ ಪಂದ್ಯದಲ್ಲಿ 17ನೇ ವಯಸ್ಸಿನಲ್ಲೇ ದ್ವಿಶತಕ ಸಿಡಿಸಿದ ಬಳಿಕ ಸಂಪೂರ್ಣವಾಗಿ ಕ್ರಿಕೆಟ್ನತ್ತ ಗಮನಹಿಸಿದ್ದರು.
ಶೆಫಾಲಿ ವರ್ಮ ಫೈನಲ್ ಶೋ
ಫೈನಲ್ ಆಡುವುದಕ್ಕೆ 6 ದಿನ ಮುನ್ನ ಶೆಫಾಲಿ ವರ್ಮ ವಿಶ್ವಕಪ್ನಲ್ಲಿ ಭಾರತ ತಂಡದ ಭಾಗವೇ ಆಗಿರಲಿಲ್ಲ. ಆದರೆ ಪ್ರತಿಕಾ ರಾವಲ್ ಗಾಯಗೊಂಡು ಹೊರಬಿದ್ದಾಗ ಶೆಫಾಲಿ ತುರ್ತಾಗಿ ತಂಡ ಸೇರಿದ್ದರು. ಸೆಮೀಸ್ನಲ್ಲಿ ಆಸೀಸ್ ಎದುರು ಬೇಗನೆ ಔಟಾದಾಗ ಈಕೆ ಬೇಕಿತ್ತಾ? ತಂಡದಲ್ಲೇ ಇದ್ದ ಹರ್ಲೀನ್ರಿಂದಲೇ ಇನಿಂಗ್ಸ್ ಆರಂಭಿಸಬಹುದಿತ್ತಲ್ಲ ಎಂಬ ಟೀಕೆಗಳೂ ಕೇಳಿಬಂದಿದ್ದವು. ಆದರೆ ಫೈನಲ್ನಲ್ಲಿ ತನ್ನ ಮಹತ್ವವನ್ನು ಸಾರಿ ಗೆಲುವಿನ ರೂವಾರಿಯಾಗಿ ಮೂಡಿಬಂದರು. ಬಿರುಸಿನ 87 ರನ್ ಸಿಡಿಸುವ ಜತೆಗೆ ಬೌಲಿಂಗ್ನಲ್ಲೂ 2 ಪ್ರಮುಖ ವಿಕೆಟ್ ಕಬಳಿಸಿ ಮಿಂಚಿದರು. ಹರಿಯಾಣದ ರೋಹ್ಟಕ್ನವರಾದ ಶೆಫಾಲಿ, ಕಟ್ಟಾ ಕ್ರಿಕೆಟ್ ಪ್ರೇಮಿಯಾದ ತಂದೆ ಸಂಜೀವ್ ವರ್ಮ ಪ್ರೇರಣೆಯಿಂದ ಕ್ರಿಕೆಟಿಗರಾಗಿದ್ದರು. ಬಿರುಸಿನ ಆಟಕ್ಕಾಗಿ "ಲೇಡಿ ಸೆಹ್ವಾಗ್' ಎಂಬ ಹೆಸರು ಪಡೆದಿದ್ದ ಅವರು, 2023ರಲ್ಲಿ 19 ವಯೋಮಿತಿ ವಿಶ್ವಕಪ್ ಗೆದ್ದ ಭಾರತ ತಂಡದ ನಾಯಕಿಯೂ ಆಗಿದ್ದರು.
ಸಂಘಟಿತ ಪರಾಕ್ರಮ
ಬಿಸಿಸಿಐ ಲೆವೆಲ್-3 ಅಂಪೈರ್ ಪ್ರದಿಪ್ ರಾವಲ್ ಪುತ್ರಿ ಪ್ರತಿಕಾ ರಾವಲ್ ಕೊನೇ ಲೀಗ್ ಪಂದ್ಯದಲ್ಲಿ ಗಾಯಗೊಂಡು ಹೊರಬೀಳುವುದಕ್ಕೆ ಮುನ್ನ ನ್ಯೂಜಿಲೆಂಡ್ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ್ದರು. ಒಟ್ಟು 308 ರನ್ ಸಿಡಿಸಿ ಟೂರ್ನಿಯಲ್ಲಿ ಭಾರತದ 2ನೇ ಗರಿಷ್ಠ ರನ್ ಎನಿಸಿದರು. ಬಂಗಾಳದ ರಿಚಾ ಘೋಷ್ ವಿಕೆಟ್ ಕೀಪಿಂಗ್ ಜತೆಗೆ ಬಿರುಸಿನ ಬ್ಯಾಟಿಂಗ್ ಮೂಲಕ 235 ರನ್ ಬಾರಿಸಿ ಮಿಂಚಿದರು. ಇದರಲ್ಲಿ ಟೂರ್ನಿಯ ಗರಿಷ್ಠ 12 ಸಿಕ್ಸರ್ಗಳೂ ಸೇರಿದ್ದವು. ಪಂಜಾಬ್ನ ಅಮನ್ಜೋತ್ ಕೌರ್ (146 ರನ್, 6 ವಿಕೆಟ್) ಆಲ್ರೌಂಡ್ ಆಟದ ಮೂಲಕ ಬಲ ತುಂಬಿದರೆ, ವೇಗಿಗಳಾದ ರೇಣುಕಾ ಸಿಂಗ್ (3), ಕ್ರಾಂತಿ ಗೌಡ್ (9) ಹೊಸ ಚೆಂಡಿನಲ್ಲಿ ಪ್ರಭಾವ ಬೀರಿದರು. ಶ್ರೀಚರಣಿ (14), ರಾಧಾ ಯಾದವ್ (4), ಸ್ನೇಹಾ ರಾಣಾ (7) ಸ್ಪಿನ್ ಬೌಲಿಂಗ್ನಲ್ಲಿ ದೀಪ್ತಿಗೆ ಸಾಥ್ ನೀಡಿದರು. ಹರ್ಲೀನ್ ಡಿಯೋಲ್ (169), ಉಮಾ ಛೇಟ್ರಿ, ಯಸ್ತಿಕಾ ಭಾಟಿಯಾ, ಅರುಂಧತಿ ರೆಡ್ಡಿ ವಿಶ್ವಕಪ್ ವಿಜೇತ ತಂಡದ ಇತರ ಆಟಗಾರ್ತಿಯರು.
ಅಮೋಲ್ ಅಮೂಲ್ಯ ಕೊಡುಗೆ
2023ರ ಅಕ್ಟೋಬರ್ನಲ್ಲಿ ಭಾರತ ಮಹಿಳಾ ತಂಡದ ಕೋಚ್ ಪಟ್ಟವೇರಿದ್ದ ಮುಂಬೈನ ಅಮೋಲ್ ಮುಜುಮ್ದಾರ್ ಸರಿಯಾಗಿ 2 ವರ್ಷಗಳ ಬಳಿಕ ವಿಶ್ವಕಪ್ ವಿಜೇತರೆನಿಸಿದ್ದಾರೆ. ಕ್ರಿಕೆಟ್ ವೃತ್ತೀಜಿವನದಲ್ಲಿ ರನ್ಮಳೆ ಹರಿಸಿದ ನಡುವೆಯೂ ಎಂದೂ ಭಾರತವನ್ನು ಪ್ರತಿನಿಧಿಸುವ ಅದೃಷ್ಟ ಇವರಿಗೆ ಒಲಿದಿರಲಿಲ್ಲ. 1988ರಲ್ಲಿ ಶಾಲಾ ಕ್ರಿಕೆಟ್ನಲ್ಲಿ ಸಚಿನ್ ತೆಂಡುಲ್ಕರ್-ವಿನೋದ್ ಕಾಂಬ್ಳಿ 664 ರನ್ ಜತೆಯಾಟವಾಡಿದಾಗ, ಮುಂದಿನ ಬ್ಯಾಟರ್ ಆಗಿದ್ದ ಅಮೋಲ್ 2 ದಿನ ಪೂರ್ತಿ ಪ್ಯಾಡ್ ಕಟ್ಟಿಕೊಂಡು ಬ್ಯಾಟಿಂಗ್ಗಾಗಿ ಕಾದಿದ್ದರು. 1993-94ರಲ್ಲಿ ರಣಜಿ ಟ್ರೋಫಿಯ ಪದಾರ್ಪಣೆ ಪಂದ್ಯದಲ್ಲಿ 260 ರನ್ ಸಿಡಿಸಿ "ನ್ಯೂ ತೆಂಡುಲ್ಕರ್' ಎಂಬ ಹೊಗಳಿಕೆ ಪಡೆದಿದ್ದರು. ಆದರೆ ನಂತರ 2 ದಶಕಗಳ ಕಾಲ ದೇಶೀಯ ಕ್ರಿಕೆಟ್ನಲ್ಲಿ ಆಡಿ 30 ಶತಕಗಳ ಸಹಿತ 11 ಸಾವಿರಕ್ಕೂ ಅಧಿಕ ರನ್ ಗಳಿಸಿದ್ದರೂ, ಭಾರತ ಪರ ಆಡುವ ಅವಕಾಶ ಒಲಿದಿರಲಿಲ್ಲ. ಇದೀಗ ಆಟಗಾರ ಆಗಿ ಸಾಧ್ಯವಾಗದ್ದನ್ನು ಕೋಚ್ ಆಗಿ ಸಾಧಿಸುವ ಮೂಲಕ ಜಾಗತಿಕ ಮಟ್ಟದ ಮನ್ನಣೆ ಪಡೆದುಕೊಂಡಿದ್ದಾರೆ.
ರಾಜ್ಯ ಸರ್ಕಾರ ಬಹುಮಾನ
ಐಸಿಸಿ, ಬಿಸಿಸಿಐ ಬಹುಮಾನದ ಜತೆಗೆ ಆಟಗಾರ್ತಿಯರಿಗೆ ತವರು ರಾಜ್ಯ ಸರ್ಕಾರದಿಂದಲೂ ಬಹುಮಾನಗಳು ಲಭಿಸಿವೆ. ರೇಣುಕಾ ಸಿಂಗ್ಗೆ ಹಿಮಾಚಲ ಪ್ರದೇಶ ಸರ್ಕಾರ ಮತ್ತು ಕ್ರಾಂತಿ ಗೌಡ್ಗೆ ಮಧ್ಯಪ್ರದೇಶ ಸರ್ಕಾರ ತಲಾ ಒಂದು ಕೋಟಿ ರೂ. ಬಹುಮಾನ ಪ್ರಕಟಿಸಿದೆ.
ಎಲ್ಲಕ್ಕಿಂತ ಮೇಲೆ ತ್ರಿವರ್ಣ!
ಸ್ಫೂರ್ತಿ ತುಂಬುವ ತಂಡ ಗೀತೆ ಆಸ್ಟ್ರೆಲಿಯಾ ಕ್ರಿಕೆಟ್ ಸಂಸತಿ. ಭಾರತ ಪುರುಷರ ತಂಡ ಗೆದ್ದಾಗ ಸಾಮಾನ್ಯವಾಗಿ "ಚಕ್ದೇ ಇಂಡಿಯಾ' ಹಾಡೇ ಮೊಳಗುತ್ತದೆ. ಇದೀಗ ಭಾರತ ಮಹಿಳಾ ಕ್ರಿಕೆಟ್ ತಂಡದ ವಿಶ್ವಕಪ್ ಗೆಲುವಿನಲ್ಲಿ ಅದರದೇ ಆದ ತಂಡ ಗೀತೆ ಸ್ಫೂರ್ತಿ ತುಂಬಿರುವುದು ವಿಶೇಷ. ಗೆಲುವಿನ ಬಳಿಕ ಪಿಚ್ ಮಧ್ಯದಲ್ಲಿ ನಿಂತು ಹಾಡುವ ಮೂಲಕ ಈ ಗೀತೆಯನ್ನು ಬಹಿರಂಗಪಡಿಸಲಾಗಿದೆ. "ರಹೇಗಾ ಸಬ್ಸೇ ಊಪರ್, ಹಮಾರಾ ತಿರಂಗಾ! ಹಮ್ ಹೈ ಟೀಮ್ ಇಂಡಿಯಾ. ಹಮ್ ಹೈ ಟೀಮ್ ಇಂಡಿಯಾ' (ನಮ್ಮ ತ್ರಿವರ್ಣ ಎಲ್ಲಕ್ಕಿಂತ ಮೇಲೆ ಹಾರಾಡುತ್ತದೆ. ನಾವೇ ಭಾರತ ತಂಡ) ಎಂದು ಈ ಗೀತೆ ಸಾಗುತ್ತದೆ.