ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಮಿಂಚಿದ ಪ್ರಜ್ವಲ್‌ ದೇವ್‌, ನಿಕಿ ಪೂಣಚ್ಚಗೆ ಕೆಎಸ್‌ಎಲ್‌ಟಿಎ ಸನ್ಮಾನ

web tennis
Published on

ಬೆಂಗಳೂರು: ಉತ್ತರಾಖಂಡದಲ್ಲಿ ಇತ್ತೀಚೆಗೆ ನಡೆದ 38ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಕರ್ನಾಟಕದ ಟೆನಿಸ್‌ ತಾರೆಯರಾದ ಎಸ್‌.ಡಿ.ಪ್ರಜ್ವಲ್‌ ದೇವ್‌ ಮತ್ತು ನಿಕಿ ಕಲಿಯಂಡ ಪೂಣಚ್ಚ ಅವರಿಗೆ ಕರ್ನಾಟಕ ರಾಜ್ಯ ಲಾನ್‌ ಟೆನಿಸ್‌ ಸಂಸ್ಥೆ (ಕೆಎಸ್‌ಎಲ್‌ಟಿಎ) ತಲಾ 1 ಲಕ್ಷ ರೂ. ಗಳ ಚೆಕ್‌ ನೀಡಿ ಗೌರವಿಸಿತು. ಸರ್ವಿಸಸ್ ಸ್ಪೋರ್ಟ್ಸ್ ಕಂಟ್ರೋಲ್‌ ಬೋರ್ಡ್‌ನ ಇಶಾಕ್‌ ಇಕ್ಬಾಲ್‌ ಮತ್ತು ಫೈಸಲ್‌ ಖಮರ್‌ ಅವರನ್ನು 6-3, 6-1 ಸೆಟ್‌ಗಳಿಂದ ಸೋಲಿಸುವ ಮೂಲಕ ಈ ಜೋಡಿ 38ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಟೆನಿಸ್‌ ಸ್ಪರ್ಧೆಯಲ್ಲಿ ಕರ್ನಾಟಕಕ್ಕೆ ಮೊದಲ ಚಿನ್ನದ ಪದಕವನ್ನು ಗೆದ್ದುಕೊಟ್ಟಿತ್ತು.

ಕಬ್ಬನ್‌ ಪಾರ್ಕ್‌ನ ಕೆಎಸ್‌ಎಲ್‌ಟಿಎ ಟೆನಿಸ್‌ ಕ್ರೀಡಾಂಗಣದಲ್ಲಿನಡೆದ ಡಫಾನ್ಯೂವ್ಸ್‌ ಬೆಂಗಳೂರು ಓಪನ್‌ 2025 ರ ಒಂಬತ್ತನೇ ಆವೃತ್ತಿಯಲ್ಲಿ ಕರ್ನಾಟಕದ ವಿದ್ಯುನ್ಮಾನ, ಐಟಿ/ ಬಿಟಿ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಚೆಕ್‌ಅನ್ನು ಪ್ರದಾನ ಮಾಡಿದರು. ಸಮಾರಂಭದಲ್ಲಿ ಕೆಎಸ್‌ಎಲ್‌ಟಿಎ ಗೌರವ ಕಾರ್ಯದರ್ಶಿ ಮತ್ತು ಬೆಂಗಳೂರು ಓಪನ್‌ ಟೂರ್ನಮೆಂಟ್‌ ನಿರ್ದೇಶಕ ಸುನಿಲ್‌ ಯಜಮಾನ್‌, ಕೆಎಸ್‌ಎಲ್‌ಟಿಎ ಗೌರವ ಖಜಾಂಚಿ ನಾಗಾನಂದ ದೊರೆಸ್ವಾಮಿ ಉಪಸ್ಥಿತರಿದ್ದರು.

ಕೆಎಸ್‌ಎಲ್‌ಟಿಎ ಹಿರಿಯ ಉಪಾಧ್ಯಕ್ಷ ಮತ್ತು ಡಫಾನ್ಯೂವ್ಸ್‌ ಬೆಂಗಳೂರು ಓಪನ್‌ ಸಂಘಟನಾ ಸಮಿತಿಯ ಅಧ್ಯಕ್ಷರೂ ಆಗಿರುವ ಪ್ರಿಯಾಂಕ್‌ ಖರ್ಗೆ, ಕರ್ನಾಟಕ ಟೆನಿಸ್‌ಗೆ ನೀಡಿದ ಕೊಡುಗೆಗಾಗಿ ಮತ್ತು 38ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಚಿನ್ನದ ಪದಕದೊಂದಿಗೆ ಇಡೀ ರಾಜ್ಯಕ್ಕೆ ಹೆಮ್ಮೆ ತಂದ ಪ್ರಜ್ವಲ್‌ ಮತ್ತು ನಿಕಿ ಅವರನ್ನು ನಾನು ಮೊದಲು ಅಭಿನಂದಿಸುತ್ತೇನೆ ಎಂದರು.

ನಾವು 9ನೇ ಆವೃತ್ತಿಯ ಬೆಂಗಳೂರು ಓಪನ್‌ ಟೂರ್ನಿಯನ್ನು ಕೆಎಸ್‌ಎಲ್‌ಟಿಎಯಲ್ಲಿ ನಡೆಸುತ್ತಿದ್ದೇವೆ. ಇದು ಭಾರತದ ಅತಿದೊಡ್ಡ ವೃತ್ತಿಪರ ಟೆನಿಸ್‌ ಪಂದ್ಯಾವಳಿಯಾಗಿದೆ. ಇದನ್ನು ಇಲ್ಲಿ ಪಡೆಯಲು ನಾವು ಸಾಕಷ್ಟು ಪ್ರಯತ್ನ ಮಾಡಿದ್ದೇವೆ ಮತ್ತು ನಮ್ಮ ಆಟಗಾರರಿಗೆ ಜಾಗತಿಕ ರಂಗದಲ್ಲಿಅವಕಾಶ ಸಿಗುವುದನ್ನು ಖಚಿತಪಡಿಸಿಕೊಳ್ಳಲು ನಾವು ಸಾಕಷ್ಟು ಶ್ರಮಿಸಿದ್ದೇವೆ ಮತ್ತು ಇದು ಟೆನಿಸ್‌ ಮತ್ತು ಬೆಂಗಳೂರನ್ನು ಜಾಗತಿಕ ನಕ್ಷೆಯಲ್ಲಿ ಇರಿಸುತ್ತಿದೆ. ಈ ಕಾರ್ಯಕ್ರಮವನ್ನು ಆಯೋಜಿಸುವುದು ವಿಶ್ವದರ್ಜೆಯ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವ, ಯುವ ಪ್ರತಿಭೆಗಳನ್ನು ಪೋಷಿಸುವ ಮತ್ತು ಭಾರತೀಯ ಆಟಗಾರರಿಗೆ ಉನ್ನತ ಅಂತಾರಾಷ್ಟ್ರೀಯ ತಾರೆಗಳೊಂದಿಗೆ ಸ್ಪರ್ಧಿಸುವ ಅವಕಾಶವನ್ನು ಒದಗಿಸುವ ಕೆಎಸ್‌ಎಲ್‌ಟಿಎ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದರು.

ಸನ್ಮಾನ ಸಮಾರಂಭವು ಟೆನಿಸ್​ ನಲ್ಲಿಉತ್ಕೃಷ್ಟತೆಯನ್ನು ಉತ್ತೇಜಿಸುವ ಮತ್ತು ಪ್ರೋತ್ಸಾಹಿಸುವ ಕರ್ನಾಟಕದ ಬದ್ಧತೆಯನ್ನು ಬಿಂಬಿಸುತ್ತದೆ. ಡಫಾನ್ಯೂವ್ಸ್‌ ಬೆಂಗಳೂರು ಓಪನ್‌ 2025 ಪೂರ್ಣ ಪ್ರಮಾಣದಲ್ಲಿನಡೆಯುತ್ತಿರುವಾಗ, ಈ ಕ್ರೀಡಾಪಟುಗಳನ್ನು ಗುರುತಿಸುವುದು ಭಾರತೀಯ ಟೆನಿಸ್‌ ಪ್ರತಿಭೆಗಳನ್ನು ಉನ್ನತೀಕರಿಸುವಲ್ಲಿ ಪಂದ್ಯಾವಳಿಯ ಪಾತ್ರವನ್ನು ಮತ್ತಷ್ಟು ಒತ್ತಿ ಹೇಳಿತು.

ಕರ್ನಾಟಕ ರಾಜ್ಯ ಲಾನ್‌ ಟೆನಿಸ್‌ ಅಸೋಸಿಯೇಷನ್‌ (ಕೆಎಸ್‌ಎಲ್‌ಟಿಎ) ಆಯೋಜಿಸುವ ಬೆಂಗಳೂರು ಓಪನ್‌ ಎಟಿಪಿ ಚಾಲೆಂಜರ್‌ 125 ಪಂದ್ಯಾವಳಿಯಾಗಿದ್ದು, 200,000 ಡಾಲರ್‌ ಬಹುಮಾನ ಮೊತ್ತವನ್ನು ಹೊಂದಿದೆ. ಇದು ಪ್ರಸ್ತುತ ಭಾರತದ ಅತಿದೊಡ್ಡ ಅಂತಾರಾಷ್ಟ್ರೀಯ ಟೆನಿಸ್‌ ಟೂರ್ನಿ ಎಂಬ ಹೆಗ್ಗಳಿಕೆಯನ್ನು ಹೊಂದಿದೆ. ಈ ಹಾರ್ಡ್‌-ಕೋರ್ಟ್‌ ಪಂದ್ಯಾವಳಿಯ ಚಾಂಪಿಯನ್‌ 125 ಮೌಲ್ಯಯುತ ಎಟಿಪಿ ಶ್ರೇಯಾಂಕ ಅಂಕಗಳನ್ನು ಪಡೆಯಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net