

ಬೆಂಗಳೂರು: ಐಪಿಎಲ್ 13ನೇ ಆವೃತ್ತಿಯಲ್ಲಿ ಈಗ ಗಡ್ಡ ತೆಗೆಯುವ ಚಾಲೆಂಜ್ ದೊಡ್ಡ ಸದ್ದು ಮಾಡುತ್ತಿದೆ. ಎರಡು ವರ್ಷಗಳ ಹಿಂದೊಮ್ಮೆ ಕ್ರಿಕೆಟಿಗರು ಪರಸ್ಪರ ಹಾಕಿಕೊಂಡಿದ್ದ, ‘ಬ್ರೇಕ್ ದಿ ಬಿಯಾರ್ಡ್’ ಚಾಲೆಂಜ್ ಇದೀಗ ಅರಬ್ ರಾಷ್ಟ್ರದಲ್ಲಿ ಮತ್ತೆ ಕಾಣಿಸಿಕೊಂಡಿದ್ದು, ಕೋಲ್ಕತ ನೈಟ್‌ರೈಡರ್ಸ್ ತಂಡದ ನಾಯಕ ದಿನೇಶ್ ಕಾರ್ತಿಕ್ ಅವರಿಗೆ ಇದು ಅದೃಷ್ಟವನ್ನೂ ತಂದುಕೊಟ್ಟಿರುವುದು ವಿಶೇಷವೆನಿಸಿದೆ.
ಮುಂಬೈ ಇಂಡಿಯನ್ಸ್ ತಂಡದ ಆಲ್ರೌಂಡರ್ ಕೈರಾನ್ ಪೊಲ್ಲಾರ್ಡ್ ಇದನ್ನು ಈ ಬಾರಿ ಆರಂಭಿಸಿದ್ದಾರೆ. ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯಕ್ಕೆ ಮುನ್ನ ಅವರ ಗಡ್ಡ ತೆಗೆದು ಫ್ರೆಂಚ್ ಕಟ್‌ನ ಹೊಸ ಲುಕ್‌ನೊಂದಿಗೆ ಮೈದಾನಕ್ಕಿಳಿದಿದ್ದರು. ಇದಕ್ಕೆ ತಂಡದ ಸಹ-ಆಟಗಾರ ಹಾರ್ದಿಕ್ ಪಾಂಡ್ಯ ಸ್ಫೂರ್ತಿ ಎಂದೂ ಹೇಳಿಕೊಂಡಿದ್ದರು. ಅಲ್ಲದೆ ಕೆಕೆಆರ್ ನಾಯಕ ದಿನೇಶ್ ಕಾರ್ತಿಕ್ ಅವರಿಗೆ ಇನ್‌ಸ್ಟಾಗ್ರಾಂನಲ್ಲಿ ‘ಬ್ರೇಕ್ ದಿ ಬಿಯಾರ್ಡ್’ ಸವಾಲು ಎಸೆಯುತ್ತಿರುವುದಾಗಿಯೂ ಹೇಳಿದ್ದರು.
ಬುಧವಾರ ಚೆನ್ನೈ ಸೂಪರ್‌ಕಿಂಗ್ಸ್ ಪಂದ್ಯಕ್ಕೆ ಮುನ್ನ ಈ ಸವಾಲು ಸ್ವೀಕರಿಸಿದ ದಿನೇಶ್ ಕಾರ್ತಿಕ್ ಕೂಡ ಗಡ್ಡವನ್ನು ತೆಗೆದು ಫ್ರೆಂಚ್ ಕಟ್ ಲುಕ್‌ನೊಂದಿಗೆ ಮೈದಾನಕ್ಕಿಳಿದಿದ್ದರು. ಇದರಿಂದ ಪರಿಚಯವೇ ಸಿಗದಷ್ಟು ಬದಲಾಗಿ ಕಾಣುತ್ತಿದ್ದ ದಿನೇಶ್ ಕಾರ್ತಿಕ್‌ಗೆ ಈ ಹೊಸ ಲುಕ್ ಗೆಲುವಿನ ಅದೃಷ್ಟವನ್ನೂ ತಂದುಕೊಟ್ಟಿತ್ತು.
ಗುರುವಾರ ಮುಂಬೈ ಆಲ್ರೌಂಡರ್ ಕೃನಾಲ್ ಪಾಂಡ್ಯ ಕೂಡ ‘ಬ್ರೇಕ್ ದಿ ಬಿಯಾರ್ಡ್’ ಸವಾಲು ಸ್ವೀಕರಿಸಿದ್ದು, ಪೊಲ್ಲಾಡ್, ಕಾರ್ತಿಕ್ ಹೊಸ ಲುಕ್‌ಗೆ ಕಂಪನಿ ನೀಡಿದ್ದಾರೆ. ಈ ಹಿಂದೆ 2018ರಲ್ಲೂ ಕ್ರಿಕೆಟಿಗರ ನಡುವೆ ಸಾಕಷ್ಟು ಸದ್ದು ಮಾಡಿದ್ದ ‘ಬ್ರೇಕ್ ದಿ ಬಿಯಾರ್ಡ್’ ಸವಾಲಿನಲ್ಲಿ ರೋಹಿತ್ ಶರ್ಮ, ರವೀಂದ್ರ ಜಡೇಜಾ, ಮನೀಷ್ ಪಾಂಡೆ, ಕೇನ್ ವಿಲಿಯಮ್ಸನ್, ಅಜಿಂಕ್ಯ ರಹಾನೆ, ಸುರೇಶ್ ರೈನಾ ಮುಂತಾದವರು ಪಾಲ್ಗೊಂಡಿದ್ದರು. ಆದರೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮಾತ್ರ ತಾನು ಯಾವುದೇ ಕಾರಣಕ್ಕೂ ಗಡ್ಡ ತೆಗೆಯುವುದಿಲ್ಲ ಎಂದು ಸಹ-ಆಟಗಾರರ ಸವಾಲನ್ನು ತಳ್ಳಿಹಾಕಿದ್ದರು.