

Krunal Pandya : ನಿನ್ನೆ (ಜೂನ್ 03) ನಡೆದ ಐಪಿಎಲ್ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಕೃನಾಲ್ ಪಾಂಡ್ಯ, ಹೊಸ ಇತಿಹಾಸವನ್ನೇ ನಿರ್ಮಿಸಿದರು. ಐಪಿಎಲ್ ಫೈನಲ್‌ಗಳಲ್ಲಿ ಅತಿ ಹೆಚ್ಚು ಬಾರಿ 'ಪಂದ್ಯಶ್ರೇಷ್ಠ' ಪ್ರಶಸ್ತಿ ಪಡೆದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಕೃನಾಲ್ ಪಾಂಡ್ಯ ಪಾತ್ರರಾದರು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ, ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 190 ರನ್ ಗಳಿಸಿತು. ವಿರಾಟ್ ಕೊಹ್ಲಿ (43 ರನ್, 35 ಎಸೆತ, 3 ಬೌಂಡರಿ) ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಮಯಾಂಕ್ ಅಗರ್ವಾಲ್ (24), ರಜತ್ ಪಟಿದಾರ್ (26), ಲಿಯಾಮ್ ಲಿವಿಂಗ್‌ಸ್ಟೋನ್ (25), ಮತ್ತು ಜಿತೇಶ್ ಶರ್ಮಾ (24) ಉಪಯುಕ್ತ ರನ್ಗಳ ಕಾಣಿಕೆ ನೀಡಿದರು. ಪಂಜಾಬ್ ಬೌಲರ್‌ಗಳಲ್ಲಿ ಅರ್ಷದೀಪ್ ಸಿಂಗ್ ಮತ್ತು ಜೇಮಿಸನ್ ತಲಾ ಮೂರು ವಿಕೆಟ್ ಪಡೆದರು. ವಿಜಯ್ ಕುಮಾರ್ ವೈಶಾಕ್ ಮತ್ತು ಚಾಹಲ್ ತಲಾ ಒಂದು ವಿಕೆಟ್ ಪಡೆದರು.
ಗುರಿ ಬೆನ್ನತ್ತಿದ ಪಂಜಾಬ್ ಪರ ಶಶಾಂಕ್ ಸಿಂಗ್ (ಅಜೇಯ 61 ರನ್, 30 ಎಸೆತ, 3 ಬೌಂಡರಿ, 6 ಸಿಕ್ಸರ್) ಮತ್ತು ಜೋಶ್ ಇಂಗ್ಲಿಷ್ (39 ರನ್, 23 ಎಸೆತ, 1 ಬೌಂಡರಿ, 4 ಸಿಕ್ಸರ್) ಉತ್ತಮ ಪ್ರದರ್ಶನ ನೀಡಿದರು. ಆದರೆ, ಉಳಿದ ಬ್ಯಾಟ್ಸ್‌ಮನ್‌ಗಳು ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲರಾದರು, ಪಂಜಾಬ್ ಕಿಂಗ್ಸ್ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 184 ರನ್‌ಗಳಿಗೆ ಸೀಮಿತವಾಯಿತು. ಆರ್‌ಸಿಬಿ ಬೌಲರ್‌ಗಳಲ್ಲಿ ಭುವನೇಶ್ವರ್ ಕುಮಾರ್ ಮತ್ತು ಕೃನಾಲ್ ಪಾಂಡ್ಯ ತಲಾ ಎರಡು ವಿಕೆಟ್ ಪಡೆದರು. ಯಶ್ ದಯಾಳ್, ಜೋಶ್ ಹ್ಯಾಜಲ್‌ವುಡ್ ಮತ್ತು ರೊಮಾರಿಯೊ ಶೆಫರ್ಡ್ ತಲಾ ಒಂದು ವಿಕೆಟ್ ಪಡೆದರು.
ಈ ಪಂದ್ಯದಲ್ಲಿ ಕೃನಾಲ್ ಪಾಂಡ್ಯ ತಮ್ಮ ಸ್ಪಿನ್ ಮ್ಯಾಜಿಕ್ ಮೂಲಕ ಪಂಜಾಬ್ ಬ್ಯಾಟ್ಸ್‌ಮನ್‌ಗಳಿಗೆ ಬೆದರಿಕೆ ಉಂಟು ಮಾಡಿದರು. ತಮ್ಮ ನಾಲ್ಕು ಓವರ್‌ಗಳ ಕೋಟಾದಲ್ಲಿ ಕೇವಲ 17 ರನ್‌ಗಳನ್ನು ನೀಡಿ ಪ್ರಭ್ಸಿಮ್ರಾನ್ ಸಿಂಗ್ ಮತ್ತು ಜೋಶ್ ಇಂಗ್ಲಿಸ್ ಅವರನ್ನು ಔಟ್ ಮಾಡಿ ಪಂದ್ಯವನ್ನು ಬೆಂಗಳೂರಿನ ಪರವಾಗಿ ತಿರುಗಿಸಿದರು. 2017ರಲ್ಲಿ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಜಯಗಳಿಸಿದಾಗ ಕೃನಾಲ್ ಅವರಿಗೆ 'ಪಂದ್ಯಶ್ರೇಷ್ಠ' ಪ್ರಶಸ್ತಿಯನ್ನು ನೀಡಲಾಯಿತು. ಐಪಿಎಲ್ ಫೈನಲ್‌ನಲ್ಲಿ ಕ್ರುನಾಲ್ ಒಟ್ಟು ಎರಡು ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಮೂಲಕ ಐಪಿಎಲ್ ಫೈನಲ್‌ನಲ್ಲಿ ಎರಡು ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಏಕೈಕ ಆಟಗಾರನೆಂಬ ಹೆಗ್ಗಳಿಕೆಗೆ ಪಾಂಡ್ಯ ಪಾತ್ರರಾಗಿದ್ದಾರೆ.
* 2008 ರಲ್ಲಿ ಯೂಸುಫ್ ಪಠಾಣ್ (ಆರ್ಆರ್)
* 2009 ರಲ್ಲಿ ಅನಿಲ್ ಕುಂಬ್ಳೆ (ಆರ್‌ಸಿಬಿ)
* 2010 ರಲ್ಲಿ ಸುರೇಶ್ ರೈನಾ (ಸಿಎಸ್‌ಕೆ)
* 2011 ರಲ್ಲಿ ಮುರಳಿ ವಿಜಯ್ (ಸಿಎಸ್‌ಕೆ)
* 2012 ರಲ್ಲಿ ಮನ್ವಿಂದರ್ ಬಿಸ್ಲಾ (ಕೆಕೆಆರ್)
* 2013 ರಲ್ಲಿ ಕೀರನ್ ಪೊಲಾರ್ಡ್ (ಮುಂಬೈ)
* 2014 ರಲ್ಲಿ ಮನೀಶ್ ಪಾಂಡೆ (ಕೆಕೆಆರ್)
* 2015 ರಲ್ಲಿ ರೋಹಿತ್ ಶರ್ಮಾ (ಮುಂಬೈ)
* 2016 ರಲ್ಲಿ ಬೆನ್ ಕಟಿಂಗ್ (ಎಸ್‌ಆರ್‌ಹೆಚ್)
* 2017 ರಲ್ಲಿ ಕೃನಾಲ್ ಪಾಂಡ್ಯ (ಮುಂಬೈ)
* 2018 ರಲ್ಲಿ ಶೇನ್ ವ್ಯಾಟ್ಸನ್ (ಸಿಎಸ್‌ಕೆ)
* 2019 ರಲ್ಲಿ ಜಸ್ಪ್ರೀತ್ ಬುಮ್ರಾ (ಮುಂಬೈ)
* 2020 ರಲ್ಲಿ ಟ್ರೆಂಟ್ ಬೌಲ್ಟ್ (ಮುಂಬೈ)
* 2021 ರಲ್ಲಿ ಫಾಫ್ ಡುಪ್ಲೆಸಿಸ್ (ಸಿಎಸ್‌ಕೆ)
* 2022 ರಲ್ಲಿ ಹಾರ್ದಿಕ್ ಪಾಂಡ್ಯ (ಗುಜರಾತ್)
*2023 ರಲ್ಲಿ ಡೆವೊನ್ ಕಾನ್ವೇ (ಸಿಎಸ್‌ಕೆ)
* 2024 ರಲ್ಲಿ ಮಿಚೆಲ್ ಸ್ಟಾರ್ಕ್ (ಕೆಕೆಆರ್)
* 2025 ರಲ್ಲಿ ಕೃನಾಲ್ ಪಾಂಡ್ಯ (ಆರ್‌ಸಿಬಿ)