ಮುಂಬೈಗೆ 27 ವರ್ಷಗಳ ಬಳಿಕ ಇರಾನಿ ಕಿರೀಟ: ಒಟ್ಟಾರೆ 62ನೇ ಪ್ರಶಸ್ತಿ ಗೆಲುವು

New-Project-1
Published on

ಲಖನೌ: ರಣಜಿ ಚಾಂಪಿಯನ್ ಮುಂಬೈ ತಂಡ 27 ವರ್ಷಗಳ ಬಳಿಕ ಇರಾನಿ ಕಪ್ ದೇಶೀಯ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡಿದೆ. ತನುಷ್ ಕೋಟ್ಯಾನ್ (114* ರನ್, 150 ಎಸೆತ, 10 ಬೌಂಡರಿ, 1 ಸಿಕ್ಸರ್) ಹಾಗೂ ಮೋಹಿತ್ ಅವಸ್ಥಿ (51* ರನ್, 93 ಎಸೆತ, 4 ಬೌಂಡರಿ, 1 ಸಿಕ್ಸರ್) ದಿಟ್ಟ ಜತೆಯಾಟದ ನೆರವಿನಿಂದ ಅಜಿಂಕ್ಯ ರಹಾನೆ ನೇತೃತ್ವದ ಮುಂಬೈ ತಂಡ, ಶೇಷ ಭಾರತ ಎದುರು ಡ್ರಾ ಸಾಧಿಸಿತು. ಇದರೊಂದಿಗೆ ಮುಂಬೈ ತಂಡ 15ನೇ ಬಾರಿಗೆ ಟೂರ್ನಿಯಲ್ಲಿ ಚಾಂಪಿಯನ್ ಎನಿಸಿದೆ. 1997-98ರ ಆವೃತ್ತಿಯಲ್ಲಿ ಕೊನೆಯದಾಗಿ ಪ್ರಶಸ್ತಿ ಜಯಿಸಿತ್ತು.

ಏಕನಾ ಸ್ಟೇಡಿಯಂನಲ್ಲಿ ಶನಿವಾರ ಮುಕ್ತಾಯಗೊಂಡ ಪಂದ್ಯದಲ್ಲಿ 6 ವಿಕೆಟ್‌ಗೆ 123 ರನ್‌ಗಳಿಂದ ಐದನೇ ಹಾಗೂ ಅಂತಿಮ ದಿನದ ಆಟ ಆರಂಭಿಸಿದ ಮುಂಬೈ, ರ್ಸ್ರಾಜ್ ಖಾನ್ (17) ಹಾಗೂ ಶಾರ್ದೂಲ್ ಠಾಕೂರ್ (2) ವಿಕೆಟ್‌ಗಳನ್ನು ಬೇಗನೆ ಕಳೆದುಕೊಂಡಿತು. ಆಗ ಜತೆಯಾದ ತನುಷ್ ಹಾಗೂ ಮೋಹಿತ್ ಮುರಿಯದ 9ನೇ ವಿಕೆಟ್‌ಗೆ 200 ಎಸೆತಗಳಲ್ಲಿ 158 ರನ್‌ಗಳಿಸಿದರು. ತನುಷ್ ಕೋಟ್ಯಾನ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 2ನೇ ಶತಕ ಪೂರೈಸಿದರು. 78 ಓವರ್‌ಗಳಲ್ಲಿ 8 ವಿಕೆಟ್‌ಗೆ 329 ರನ್‌ಗಳಿಸಿದ ಮುಂಬೈ ಒಟ್ಟಾರೆ 450 ರನ್ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ನಂತರ ಉಭಯ ನಾಯಕರು ಡ್ರಾಗೆ ಸಮ್ಮತಿಸಿದರು. ಮೊದಲ ಇನಿಂಗ್ಸ್ ಮುನ್ನಡೆಯ ಆಧಾರದಲ್ಲಿ ಮುಂಬೈ ಚಾಂಪಿಯನ್ ಎನಿಸಿತು.

ಮುಂಬೈ: 537 ಹಾಗೂ 329/8 ಡಿ. (ರ್ಸ್ರಾಜ್ 17, ಶಾರ್ದೂಲ್ 2, ತನುಷ್ 114*, ಮೋಹಿತ್ 51*, ಸಾರಾಂಶ್ ಜೈನ್ 121ಕ್ಕೆ 6). ಶೇಷ ಭಾರತ:110 ಓವರ್‌ಗಳಲ್ಲಿ 416.

2: ಮುಂಬೈ 2ನೇ ಅತಿ ಹೆಚ್ಚು (15) ಬಾರಿ ಇರಾನಿ ಕಪ್ ಜಯಿಸಿದ ತಂಡ ಎನಿಸಿದೆ. ಶೇಷ ಭಾರತ (30) ಅಗ್ರಸ್ಥಾನದಲ್ಲಿದೆ.

15: ಮುಂಬೈಗೆ ಇದು 15ನೇ ಇರಾನಿ ಕಪ್ ಪ್ರಶಸ್ತಿಯಾಗಿದೆ. 1959-60, 1962-63, 1963-64, 1965-66 (ಜಂಟಿ ಚಾಂಪಿಯನ್), 1967-68, 1969-70, 1970-71, 1972-73,1975-76, 1976-77, 1981-82, 1985-86, 1994-95, 1995-96 ಋತುವಿನಲ್ಲಿ ಹಿಂದೆ ಚಾಂಪಿಯನ್ ಎನಿಸಿತ್ತು.

ಮುಂದಿನ ದೇಶೀಯ ಟೂರ್ನಿ

ರಣಜಿ ಟ್ರೋಫಿ 90ನೇ ಆವೃತ್ತಿ

ಆರಂಭ: ಅಕ್ಟೋಬರ್ 11

62: ದೇಶೀಯ ಕ್ರಿಕೆಟ್‌ನಲ್ಲಿ ಮುಂಬೈಗೆ ಇದು ಒಟ್ಟಾರೆ 62ನೇ ಪ್ರಶಸ್ತಿ ಗೆಲುವಾಗಿದೆ. ಈ ಪೈಕಿ 42 ರಣಜಿ ಟ್ರೋಫಿ, 15 ಇರಾನಿ ಕಪ್, 4 ವಿಜಯ್ ಹಜಾರೆ ಟ್ರೋಫಿ, 1 ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಸೇರಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net