

ಚೆನ್ನೈ: ಅರಬ್ ನಾಡಿನಲ್ಲಿ ನಡೆದ ಕಳೆದ ಐಪಿಎಲ್ ಟೂರ್ನಿಯಲ್ಲಿ ಕೋಲ್ಕತ ನೈಟ್‌ರೈಡರ್ಸ್ ತಂಡದ ಪರ ಮಿಂಚಿದ್ದ ಸ್ಪಿನ್ನರ್ ವರುಣ್ ಚಕ್ರವರ್ತಿ ಆಸ್ಟ್ರೇಲಿಯಾ ಪ್ರವಾಸಕ್ಕೆ ಭಾರತೀಯ ಟಿ20 ತಂಡಕ್ಕೂ ಆಯ್ಕೆಯಾಗಿದ್ದರು. ಆದರೆ ಗಾಯದಿಂದಾಗಿ ಅವರಿಗೆ ಪ್ರವಾಸಕ್ಕೆ ತೆರಳಲು ಸಾಧ್ಯವಾಗಿರಲಿಲ್ಲ. ಈ ನಡುವೆ ಶುಕ್ರವಾರ ಅವರು ಚೆನ್ನೈನಲ್ಲಿ ದೀರ್ಘಕಾಲದ ಗೆಳತಿ ನೇಹಾ ಖೆಡೆಕರ್ ಜತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಈ ಮೊದಲೇ ಅವರಿಬ್ಬರ ಮದುವೆ ನಿಗದಿಯಾಗಿದ್ದರೂ, ಕರೊನಾ ಹಾವಳಿಯಿಂದಾಗಿ ಮುಂದೂಡಿಕೆಯಾಗಿತ್ತು. ಈ ನಡುವೆ ಐಪಿಎಲ್ ಟೂರ್ನಿ ಕೂಡ ಮುಂದೂಡಿಕೆಯಾಗಿ ಸೆಪ್ಟೆಂಬರ್-ನವೆಂಬರ್ ಸಮಯದಲ್ಲಿ ನಡೆದಿದ್ದರಿಂದ ವಿವಾಹವಾಗಲು ಸಾಧ್ಯವಾಗಿರಲಿಲ್ಲ.
ದೇಶವ್ಯಾಪಿ ಲಾಕ್‌ಡೌನ್ ಸಮಯದಲ್ಲಿ ವರುಣ್ ಚಕ್ರವರ್ತಿ ಮತ್ತು ನೇಹಾ ಭಿನ್ನ ನಗರಗಳಲ್ಲಿ ಬಂಧಿಯಾಗಿದ್ದರು. ವರುಣ್ ಚೆನ್ನೈನಲ್ಲೇ ಇದ್ದರೆ, ನೇಹಾ ಲಾಕ್‌ಡೌನ್ ಸಮಯವನ್ನು ಮುಂಬೈನಲ್ಲಿ ಕಳೆದಿದ್ದರು.
ವೈವಾಹಿಕ ಜೀವನಕ್ಕೆ ಕಾಲಿಟ್ಟ ವರುಣ್ ಚಕ್ರವರ್ತಿಗೆ ಕೋಲ್ಕತ ನೈಟ್‌ರೈಡರ್ಸ್ ತಂಡ ಟ್ವಿಟರ್‌ನಲ್ಲಿ ಶುಭಾಶಯ ತಿಳಿಸಿದೆ. ಮದುವೆಯ ಮಂಟಪದಲ್ಲೇ ಬ್ಯಾಟ್ ಹಿಡಿದ ನೇಹಾಗೆ ವರುಣ್ ಚಕ್ರವರ್ತಿ ಅಂಡರ್‌ಆರ್ಮ್ ಬೌಲಿಂಗ್ ಮಾಡಿದ ವಿಡಿಯೋವನ್ನೂ ಕೆಕೆಆರ್ ತಂಡ ಟ್ವಿಟರ್‌ನಲ್ಲಿ ಪ್ರಕಟಿಸಿದೆ.
ಐಪಿಎಲ್‌ನಲ್ಲಿ ವರುಣ್ ಚಕ್ರವರ್ತಿ ಆಡಿದ 13 ಪಂದ್ಯಗಳಲ್ಲಿ 17 ವಿಕೆಟ್ ಕಬಳಿಸಿದ್ದರು. ಅಲ್ಲದೆ ಟೂರ್ನಿಯಲ್ಲಿ 5 ವಿಕೆಟ್ ಗೊಂಚಲು ಪಡೆದ ಏಕೈಕ ಬೌಲರ್ ಎಂಬ ಹೆಗ್ಗಳಿಕೆ ಅವರದಾಗಿತ್ತು. ಎಂಎಸ್ ಧೋನಿ ಅವರನ್ನು 2 ಬಾರಿ ಬೌಲ್ಡ್ ಮಾಡಿ ಗಮನಸೆಳೆದಿದ್ದರು.