

ಕೋಲ್ಕತ: ಸ್ಪಿನ್ನರ್ ವರುಣ್ ಚಕ್ರವರ್ತಿ (16ಕ್ಕೆ 3), ವೇಗಿ ವೈಭವ್ ಆರೋರ (29ಕ್ಕೆ 2) ಬಿಗಿ ಬೌಲಿಂಗ್ ದಾಳಿ ಮತ್ತು ಆರಂಭಿಕ ಫಿಲ್ ಸಾಲ್ಟ್ (68 ರನ್, 33 ಎಸೆತ, 7 ಬೌಂಡರಿ, 5 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ನೆರವಿನಿಂದ ಆತಿಥೇಯ ಕೋಲ್ಕತ ನೈಟ್‌ರೈಡರ್ಸ್ ತಂಡ ಐಪಿಎಲ್-17ರ ತನ್ನ 9ನೇ ಲೀಗ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಎದುರು 7 ವಿಕೆಟ್‌ಗಳಿಂದ ಸುಲಭ ಗೆಲುವು ದಾಖಲಿಸಿದೆ. ಟೂರ್ನಿಯಲ್ಲಿ ಕಂಡ 6ನೇ ಜಯದೊಂದಿಗೆ ಶ್ರೇಯಸ್ ಅಯ್ಯರ್ ಪಡೆ ಅಂಕಪಟ್ಟಿಯಲ್ಲಿ 2ನೇ ಸ್ಥಾನ ಕಾಯ್ದುಕೊಂಡಿದ್ದು, ಪ್ಲೇಆ್ ಹಂತಕ್ಕೂ ಸನಿಹವಾಗಿದೆ. 6ನೇ ಸೋಲು ಕಂಡ ರಿಷಭ್ ಪಂತ್ ಪಡೆ ಉಳಿದ 3 ಪಂದ್ಯಗಳಲ್ಲಿ ಮಾಡು ಇಲ್ಲವೆ ಮಡಿ ಹೋರಾಟ ನಡೆಸಬೇಕಾದ ಒತ್ತಡಕ್ಕೆ ಸಿಲುಕಿದೆ.
ಈಡನ್ ಗಾರ್ಡನ್ಸ್‌ನಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಡೆಲ್ಲಿ, ಅಗ್ರ ಕ್ರಮಾಂಕದ ವೈಲ್ಯದ ನಡುವೆ ಬಾಲಂಗೋಚಿ ಕುಲದೀಪ್ ಯಾದವ್ (35* ರನ್, 26 ಎಸೆತ, 5 ಬೌಂಡರಿ, 1 ಸಿಕ್ಸರ್) ಆಸರೆಯಲ್ಲಿ 9 ವಿಕೆಟ್‌ಗೆ 153 ರನ್‌ಗಳ ಗೌರವಯುತ ಮೊತ್ತ ಕಲೆಹಾಕಿತು. ಪ್ರತಿಯಾಗಿ ಫಿಲ್ ಸಾಲ್ಟ್ ಒದಗಿಸಿದ ಬಿರುಸಿನ ಆರಂಭದ ಬಲದಿಂದ ಕೆಕೆಆರ್, 16.3 ಓವರ್‌ಗಳಲ್ಲಿ 7 ವಿಕೆಟ್‌ಗೆ 153 ರನ್‌ಗಳಿಸಿ ಜಯದ ಹಾದಿಗೆ ಮರಳಿದೆ.
ಕೆಕೆಆರ್ ಸುಲಭ ಚೇಸಿಂಗ್: ಸಾಧಾರಣ ಮೊತ್ತದ ಚೇಸಿಂಗ್‌ಗೆ ಇಳಿಕ ಕೆಕೆಆರ್‌ಗೆ ಫಿಲ್ ಸಾಲ್ಟ್ ಹಾಗೂ ಸುನೀಲ್ ನಾರಾಯಣ್ (15) ಉತ್ತಮ ಅಡಿಪಾಯ ಹಾಕಿಕೊಟ್ಟರು. ಇವರಿಬ್ಬರು ಮೊದಲ ವಿಕೆಟ್‌ಗೆ 38 ಎಸೆತಗಳಲ್ಲಿ 79 ರನ್ ಕಸಿದರು. ಪವರ್ ಪ್ಲೇಯ ಲಾಭವೆತ್ತಿದ ಸಾಲ್ಟ್ ಡೆಲ್ಲಿ ಬೌಲರ್‌ಗಳ ಬೆಂಡೆತ್ತಿದರು. ಸಾಲ್ಟ್ 26 ಎಸೆತಗಳಲ್ಲಿ ಹಾಲಿ ಆವೃತ್ತಿಯಲ್ಲಿ 4ನೇ ಅರ್ಧಶತಕ ಸಿಡಿಸಿದರು. 7ನೇ ಓವರ್‌ನಲ್ಲಿ ಅಕ್ಷರ್ ಪಟೇಲ್‌ಗೆ ನಾರಾಯಣ್ ವಿಕೆಟ್ ನೀಡಿದರು. ಬಡ್ತಿ ಪಡೆದ ರಿಂಕು ಸಿಂಗ್ (11) ನಿರಾಸೆ ಮೂಡಿಸಿದರು. ಸಾಲ್ಟ್ ನಿರ್ಗಮನದ ಬಳಿಕ ಜತೆಯಾದ ನಾಯಕ ಶ್ರೇಯಸ್ ಅಯ್ಯರ್ (31*) ಹಾಗೂ ವೆಂಕಟೇಶ್ ಅಯ್ಯರ್ (26*) ಮುರಿಯದ ನಾಲ್ಕನೇ ವಿಕೆಟ್‌ಗೆ 43 ಎಸೆತಗಳಲ್ಲಿ 55 ರನ್ ಗಳಿಸಿ ಇನ್ನೂ 3.3 ಓವರ್ ಬಾಕಿ ಇರುವಂತೆಯೇ ಗೆಲುವಿನ ದಡ ಸೇರಿಸಿದರು. ಗೆಲುವಿಗೆ 5 ರನ್ ಬೇಕಿದ್ದಾಗ ವೆಂಕಟೇಶ್ ಅಯ್ಯರ್ ಸಿಕ್ಸರ್ ಸಿಡಿಸಿ ಗೆಲುವು ಸಾರಿದರು.