

ಲಖನೌ: ಆಲ್ರೌಂಡರ್ ಸುನೀಲ್ ನಾರಾಯಣ್ (81 ರನ್, 39 ಎಸೆತ, 6 ಬೌಂಡರಿ, 7 ಸಿಕ್ಸರ್) ಅಬ್ಬರದ ಬ್ಯಾಟಿಂಗ್ ನೆರವಿನಿಂದ ಕೋಲ್ಕತ ನೈಟ್‌ರೈಡರ್ಸ್ ತಂಡ ಐಪಿಎಲ್-17ರ ತನ್ನ 11ನೇ ಲೀಗ್ ಪಂದ್ಯದಲ್ಲಿ ರನ್‌ಮಳೆ ಹರಿಸಿ ಆತಿಥೇಯ ಲಖನೌ ಸೂಪರ್‌ಜೈಂಟ್ಸ್ ವಿರುದ್ಧ ಬೃಹತ್ ಮೊತ್ತ ಕಲೆಹಾಕಿದೆ. ಇದರೊಂದಿಗೆ ಕೆಕೆಆರ್ ಆವೃತ್ತಿಯೊಂದರಲ್ಲಿ ಗರಿಷ್ಠ 6 ಬಾರಿ 200 ಪ್ಲಸ್ ರನ್‌ಗಳಿಸಿದ ತಂಡವೆನಿಸಿದೆ.
ಏಕನಾ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಕೆಕೆಆರ್, ಫಿಲ್ ಸಾಲ್ಟ್ (32) ಹಾಗೂ ಸುನೀಲ್ ನಾರಾಯಣ್ ಒದಗಿಸಿದ ಬಿರುಸಿನ ಆರಂಭ ಹಾಗೂ ಮಧ್ಯಮ ಕ್ರಮಾಂಕ ಬ್ಯಾಟರ್‌ಗಳ ಉಪಯುಕ್ತ ಬ್ಯಾಟಿಂಗ್ ಬಲದಿಂದ 6 ವಿಕೆಟ್‌ಗೆ 235 ರನ್ ಪೇರಿಸಿದೆ. ಲಖನೌಗೆ ಹಾಲಿ ಟೂರ್ನಿಯಲ್ಲಿ ತವರು ಅಂಗಣದಲ್ಲಿ ಕೊನೆಯ ಪಂದ್ಯ ಇದಾಗಿದೆ.
ಕೆಕೆಆರ್ ಮತ್ತೆ ಬಿರುಸಿನ ಆರಂಭ: ಸಾಲ್ಟ್-ಸುನೀಲ್ ಕೆಕೆಆರ್‌ಗೆ ಭದ್ರ ಅಡಿಪಾಯ ಹಾಕಿಕೊಟ್ಟರು. ಅವರಿಬ್ಬರು ಮೊದಲ ವಿಕೆಟ್‌ಗೆ 26 ಎಸೆತಗಳಲ್ಲಿ 64 ರನ್ ಕಸಿದರು. 4ನೇ ಓವರ್‌ನಲ್ಲಿ 10 ರನ್‌ಗಳಿಸಿದ ಕೆಕೆಆರ್ ಭರ್ಜರಿ ಆರಂಭ ಪಡೆಯಿತು. ಸಾಲ್ಟ್ ನಿರ್ಗಮನದ ಬಳಿಕ ನಾರಾಯಣ್ ಜತೆಯಾದ ಅಂಗಕ್ರಿಶ್ ರಘುವಂಶಿ (32) ತಂಡದ ಮೊತ್ತ ಏರಿಸಿದರು. ಇವರಿಬ್ಬರು 2ನೇ ವಿಕೆಟ್‌ಗೆ 46 ಎಸೆತಗಳಲ್ಲಿ 79 ರನ್ ಬಾರಿಸಿದರು. ಈ ಜೋಡಿ ಲಖನೌ ಬೌಲರ್‌ಗಳಿಗೆ ಸವಾಲೆನಿಸಿತು. ಹಾಲಿ ಆವೃತ್ತಿಯಲ್ಲಿ 400 ಪ್ಲಸ್ ರನ್‌ಗಳಿಸಿದ ಸುನೀಲ್ ನಾರಾಯಣ್ 27 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು. ಈ ಜೋಡಿಗೆ 12ನೇ ಓವರ್‌ನಲ್ಲಿ ರವಿ ಬಿಷ್ಣೋಯಿ ಬ್ರೇಕ್ ಹಾಕಿದರು. 13 ಓವರ್ ಅಂತ್ಯಕ್ಕೆ ಕೆಕೆಆರ್ 150ರ ಗಡಿ ದಾಟಿತು.