

ಕೋಲ್ಕತ: ನಾಯಕ ರಿಯಾನ್ ಪರಾಗ್ (95 ರನ್, 45 ಎಸೆತ, 6 ಬೌಂಡರಿ, 8 ಸಿಕ್ಸರ್) ಸತತ 6 ಸಿಕ್ಸರ್ ಪರಾಕ್ರಮದ ನಡುವೆಯೂ ರಾಜಸ್ಥಾನ ರಾಯಲ್ಸ್ ತಂಡ ಐಪಿಎಲ್ 18ನೇ ಆವೃತ್ತಿಯಲ್ಲಿ ಹಾಲಿ ಚಾಂಪಿಯನ್ ಕೋಲ್ಕತ ನೈಟ್ರೈಡರ್ಸ್ ಎದುರು ಕೊನೇ ಎಸೆತದಲ್ಲಿ ಕೇವಲ 1 ರನ್ನಿಂದ ವೀರೋಚಿತ ಸೋಲು ಕಂಡಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದಲ್ಲಿ ಸಂಘಟಿತ ನಿರ್ವಹಣೆ ತೋರಿದ ಅಜಿಂಕ್ಯ ರಹಾನೆ ಪಡೆ ಟೂರ್ನಿಯ 5ನೇ ಗೆಲುವಿನೊಂದಿಗೆ ಪ್ಲೇಆ್ ಅವಕಾಶ ವೃದ್ಧಿಸಿಕೊಂಡಿದೆ.
ಈಡನ್ ಗಾರ್ಡನ್ನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ಗೆ ಇಳಿದ ಕೆಕೆಆರ್, ಆಲ್ರೌಂಡರ್ ಆಂಡ್ರೆ ರಸೆಲ್ (57 ರನ್, 25 ಎಸೆತ, 4 ಬೌಂಡರಿ, 6 ಸಿಕ್ಸರ್) ಅರ್ಧಶತಕ ಹಾಗೂ ಅಂಗಕ್ರಿಶ್ ರಘುವಂಶಿ (44 ರನ್, 31 ಎಸೆತ, 5 ಬೌಂಡರಿ) ಆಸರೆಯಲ್ಲಿ 4 ವಿಕೆಟ್ಗೆ 206 ರನ್ಗಳ ಬೃಹತ್ ಮೊತ್ತ ಪೇರಿಸಿತು. ಪ್ರತಿಯಾಗಿ 71 ರನ್ಗಳಿಗೆ 5 ವಿಕೆಟ್ ಕಳೆದುಕೊಂಡ ರಾಜಸ್ಥಾನ ಸಂಕಷ್ಟಕ್ಕೆ ಸಿಲುಕಿತು. ಆಗ ಪರಾಗ್ ಮತ್ತು ಇಂಪ್ಯಾಕ್ಟ್ ಪ್ಲೇಯರ್ ಶುಭಂ ದುಬೆ (25*ರನ್, 14 ಎಸೆತ, 1 ಬೌಂಡರಿ, 2 ಸಿಕ್ಸರ್) ಹೋರಾಟದ ನಡುವೆಯೂ ಅಂತಿಮವಾಗಿ 8 ವಿಕೆಟ್ಗೆ 205 ರನ್ಗಳಿಸಿ ಸೋಲೊಪ್ಪಿಕೊಂಡಿತು. ವೈಭವ್ ಆರೋರ ಎಸೆದ ಅಂತಿಮ ಓವರ್ನಲ್ಲಿ 22 ರನ್ ಬೇಕಿದ್ದಾಗ 2 ಸಿಕ್ಸರ್, ಬೌಂಡರಿ ಸಿಡಿಸಿ ಶುಭಂ ಸೋಲಿನ ಅಂತರ ತಗ್ಗಿಸಿದರು. ಕೊನೇ ಎಸೆತದಲ್ಲಿ ರಾಜಸ್ಥಾನಕ್ಕೆ 3 ರನ್ ಅಗತ್ಯವಿತ್ತು.
ಪರಾಗ್ ಸತತ ಆರು ಸಿಕ್ಸರ್!
ಬೃಹತ್ ಮೊತ್ತ ಚೇಸಿಂಗ್ಗೆ ಇಳಿದ ರಾಜಸ್ಥಾನ ಮೊಯಿನ್ ಅಲಿ (43ಕ್ಕೆ 2), ವರುಣ್ ಚಕ್ರವರ್ತಿ (32ಕ್ಕೆ 2) ದಾಳಿಗೆ ಸಿಲುಕಿ 71 ರನ್ಗಳಿಗೆ 5 ವಿಕೆಟ್ ಕಳೆದುಕೊಂಡಿತು. ಆಗ ಪರಾಗ್ ಜತೆಗೂಡಿದ ಶಿಮ್ರೊನ್ ಹೆಟ್ಮೆಯರ್ (29) 6ನೇ ವಿಕೆಟ್ಗೆ 48 ಎಸೆತಗಳಲ್ಲಿ 92 ರನ್ಗಳಿಸಿ ಚೇಸಿಂಗ್ ಜೀವಂತವಿರಿಸಿದರು. ಮೊಯಿನ್ ಅಲಿ ಎಸೆದ ಇನಿಂಗ್ಸ್ನ 13ನೇ ಓವರ್ನಲ್ಲಿ ಸತತ 5 ಹಾಗೂ ವರುಣ್ ಚಕ್ರವರ್ತಿ ಎಸೆದ ಮುಂದಿನ ಓವರ್ನಲ್ಲಿ ತಾನೆದುರಿಸಿದ ಮೊದಲ ಎಸೆತದಲ್ಲೇ ಮತ್ತೆ ಸಿಕ್ಸರ್ ಸಿಡಿಸಿದ ಪರಾಗ್, ಐಪಿಎಲ್ನಲ್ಲಿ ಸತತ 6 ಎಸೆತಗಳಲ್ಲಿ ಸಿಕ್ಸರ್ ಬಾರಿಸಿದ ಮೊದಲ ಬ್ಯಾಟರ್ ಎನಿಸಿದರು. ಶತಕದ ಸನಿಹ ಎಡವಿದ ಪರಾಗ್ 18ನೇ ಓವರ್ನಲ್ಲಿ ಹರ್ಷಿತ್ ರಾಣಾಗೆ ವಿಕೆಟ್ ಒಪ್ಪಿಸಿದರು. ಇದರೊಂದಿಗೆ ರಾಯಲ್ಸ್ ಹೋರಾಟವೂ ಬಹುತೇಕ ಕೊನೆಗೊಂಡಿತು.
5. ರಿಯಾನ್ ಪರಾಗ್ ಐಪಿಎಲ್ನಲ್ಲಿ ಒಂದೇ ಓವರ್ನಲ್ಲಿ ಸತತ 5 ಸಿಕ್ಸರ್ ಸಿಡಿಸಿದ 5ನೇ ಬ್ಯಾಟರ್. ಕ್ರಿಸ್ ಗೇಲ್, ರಾಹುಲ್ ತೆವಾಟಿಯಾ, ರವೀಂದ್ರ ಜಡೇಜಾ, ರಿಂಕು ಸಿಂಗ್ ಹಿಂದಿನ ಸಾಧಕರು.
3. ಆಂಡ್ರೆ ರಸೆಲ್ (1,049) ಈಡನ್ ಗಾರ್ಡನ್ನಲ್ಲಿ ಸಾವಿರ ರನ್ ಪೂರೈಸಿದ 3ನೇ ಬ್ಯಾಟರ್. ಗೌತಮ್ ಗಂಭೀರ್ (1,407), ರಾಬಿನ್ ಉತ್ತಪ್ಪ (1,159) ಮೊದಲಿಬ್ಬರು.
16. ಆಂಡ್ರೆ ರಸೆಲ್ ಕೆಕೆಆರ್ ಪರ 16ನೇ ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಸುನೀಲ್ ನಾರಾಯಣ್ (17) ಮೊದಲ ಸ್ಥಾನದಲ್ಲಿದ್ದಾರೆ.