ಪೂಜಾರ ನಿಧಾನಗತಿ ಆಟಕ್ಕೆ ಕೊಹ್ಲಿ ಪರೋಕ್ಷ ಟೀಕೆ

POOJAR
Published on

ವೆಲ್ಲಿಂಗ್ಟನ್: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಂಡದ ಆಟಗಾರರ ತೀರಾ ರಕ್ಷಣಾತ್ಮಕ ಆಟಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಸರಣಿ ಸೋಲನ್ನು ತಪ್ಪಿಸಿಕೊಳ್ಳಲು ಗೆಲ್ಲಲೇಬೇಕಾಗಿರುವ 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಮಾತನಾಡಿದ ಕೊಹ್ಲಿ, ವಿದೇಶದ ಪ್ರವಾಸಗಳಲ್ಲಿ ತೀರಾ ರಕ್ಷಣಾತ್ಮಕವಾಗಿ ಆಡುವ ತಂತ್ರ ಎಂದಿಗೂ ಫಲ ಕೊಡುವುದಿಲ್ಲ ಎಂದು ಹೇಳಿದ್ದಾರೆ.

10 ವಿಕೆಟ್​ಗಳಿಂದ ಸೋಲು ಎದುರಿಸಿದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಎರಡೂ ಇನಿಂಗ್ಸ್​ನಲ್ಲಿ 200ರ ಗಡಿ ದಾಟಲು ವಿಫಲವಾಗಿತ್ತು. ‘ಮೊದಲ ಟೆಸ್ಟ್​ನಲ್ಲಿ ತಾವು ತೋರಿದ್ದ ಬ್ಯಾಟಿಂಗ್ ಭಾಷೆ ಬದಲಾಗಬೇಕಿದೆ. ತೀರಾ ಎಚ್ಚರಿಕೆಯಿಂದ ಆಡುವುದು ಪ್ರತಿ ಎಸೆತಗಳನ್ನು ಅಂದಾಜಿಸುವುದರಿಂದ ಯಾವುದೇ ಲಾಭವಾಗುವುದಿಲ್ಲ. ಆಗ ನಾವು ನಮ್ಮ ಶಾಟ್​ಗಳನ್ನು ಮರೆತು ಬಿಡುತ್ತೇವೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

2ನೇ ಇನಿಂಗ್ಸ್​ನಲ್ಲಿ ಪೂಜಾರ 81 ಎಸೆತಗಳಲ್ಲಿ 11 ರನ್ ಬಾರಿಸಿದ್ದರೆ, ಹನುಮ ವಿಹಾರಿ 79 ಎಸೆತಗಳಲ್ಲಿ 15 ರನ್ ಬಾರಿಸಿದ್ದರು. ‘ಇಂಥ ಪಿಚ್​ಗಳಲ್ಲಿ ಸಿಂಗಲ್ಸ್ ಕೂಡ ಕಸಿಯುವುದು ಕಷ್ಟವಾಗುತ್ತದೆ ಎಂದಾದಲ್ಲಿ ನಿಮ್ಮ ಬ್ಯಾಟಿಂಗ್​ನ ಮೇಲೆಯೇ ನಿಮಗೆ ಅನುಮಾನ ಬರಲು ಆರಂಭವಾಗುತ್ತದೆ. ಪ್ರತಿ ಬಾರಿಯೂ ನೀವು ಉತ್ತಮ ಎಸೆತ ಬರಲಿ ಎಂದು ಕಾಯುತ್ತಿದ್ದರೆ, ಒಂದು ಉತ್ತಮ ಎಸೆತ ನಿಮ್ಮ ವಿಕೆಟ್​ಅನ್ನು ಉರುಳಿಸುತ್ತದೆ’ ಎಂದು ಹೇಳಿದ್ದಾರೆ. ವೇಗದ ಬೌಲಿಂಗ್ ಪಿಚ್ ಎಂದಾದಲ್ಲಿ ನಾನು ಆಕ್ರಮಣಕಾರಿ ಆಟವಾಡುವ ಮೂಲಕ ತಂಡವನ್ನು ಮುನ್ನಡೆಸಲು ಪ್ರಯತ್ನಿಸುತ್ತೇನೆ ಎಂದು ಹೇಳಿದರು.

ಭಾರತ ತಿರುಗೇಟು ನೀಡುತ್ತದೆ

ಮೊದಲ ಟೆಸ್ಟ್​ನಲ್ಲಿ ಭಾರತ ತಂಡದ ಬ್ಯಾಟಿಂಗ್​ನಿಂದ ಅಚ್ಚರಿಯಾಗಿದ್ದು ನಿಜ, ಆದರೆ, 2ನೇ ಟೆಸ್ಟ್​ನಲ್ಲಿ ತಂಡ ಖಂಡಿತವಾಗಿ ತಿರುಗೇಟು ನೀಡಲಿದೆ ಎಂದು ನ್ಯೂಜಿಲೆಂಡ್ ತಂಡದ ಆಟಗಾರರಿಗೆ ಕೋಚ್ ಗ್ಯಾರಿ ಸ್ಟೀಡ್ ಎಚ್ಚರಿಕೆ ನೀಡಿದ್ದಾರೆ. ‘ಪಂದ್ಯದಲ್ಲಿ ದೀರ್ಘಕಾಲದವರೆಗೆ ಭಾರತ ತಂಡದ ಮೇಲೆ ಒತ್ತಡ ಹೇರಿದ್ದ ಕಾರಣ ಅವರಿಗೆ ಸುಲಭವಾಗಿ ಬ್ಯಾಟಿಂಗ್ ಮಾಡಲು ಸಾಧ್ಯವಾಗಲಿಲ್ಲ. ವಿಶ್ವದ ಯಾವುದೇ ದೇಶಕ್ಕಿಂತ ನ್ಯೂಜಿಲೆಂಡ್​ನಲ್ಲಿ ಆಡುವುದು ಬಹಳ ಕಠಿಣ ಎನ್ನುವುದು ಇತರ ತಂಡಗಳಿಗೆ ಅರ್ಥವಾಗಬೇಕು ಎಂದು ನಾವು ಬಯಸಿದ್ದೇವೆ’ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net