ಗಂಭೀರ್​ ಮೆಚ್ಚಿದ ವಿರಾಟ್​ ಕೊಹ್ಲಿಯ ಬೆಸ್ಟ್​ ಇನಿಂಗ್ಸ್​ ಯಾವುದು ಗೊತ್ತೇ?

kohli
Published on

ಮುಂಬೈ: ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 70 ಶತಕಗಳನ್ನು ಸಿಡಿಸಿರುವ ಟೀಮ್​ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಅವರಿಂದ ಇದುವರೆಗೆ ಹಲವಾರು ಅತ್ಯುತ್ತಮ ಇನಿಂಗ್ಸ್​ಗಳು ಬಂದಿವೆ. ಈ ಪೈಕಿ ಮಾಜಿ ಬ್ಯಾಟ್ಸ್​ಮನ್​ ಹಾಗೂ ಕೊಹ್ಲಿ ಅವರ ದೆಹಲಿಯ ಸಹ-ಆಟಗಾರರೂ ಆಗಿರುವ ಗೌತಮ್​ ಗಂಭೀರ್​ ಮೆಚ್ಚಿಕೊಂಡಿರುವ ಅತ್ಯುತ್ತಮ ಇನಿಂಗ್ಸ್​ ಯಾವುದು ಗೊತ್ತೇ?

2012ರ ಏಷ್ಯಾಕಪ್​ನಲ್ಲಿ ವಿರಾಟ್​ ಕೊಹ್ಲಿ ಪಾಕಿಸ್ತಾನ ವಿರುದ್ಧ 183 ರನ್​ಗಳ ಭರ್ಜರಿ ಇನಿಂಗ್ಸ್​ ಆಡಿದ್ದರು. ಮಾಜಿ ಆರಂಭಿಕ ಗಂಭೀರ್​ ಪ್ರಕಾರ ಇದುವೆ ವಿರಾಟ್​ ಕೊಹ್ಲಿ ವೃತ್ತಿಜೀವನದಲ್ಲಿ ಇದುವರೆಗೆ ಆಡಿರುವ ಅತ್ಯುತ್ತಮ ಇನಿಂಗ್ಸ್​ ಆಗಿದೆ. ಢಾಕಾದಲ್ಲಿ ಪಾಕಿಸ್ತಾನದ 330 ರನ್​ ಸವಾಲನ್ನು ಬೆನ್ನಟ್ಟುವ ವೇಳೆ ಕೊಹ್ಲಿ ಕೇವಲ 148 ಎಸೆತಗಳಲ್ಲಿ 22 ಬೌಂಡರಿ ಮತ್ತು ಸಿಕ್ಸರ್​ ಒಳಗೊಂಡ 183 ರನ್​ ಸಿಡಿಸಿದ್ದರು. ಈ ಮೂಲಕ ಭಾರತ ತಂಡ 6 ವಿಕೆಟ್​ಗಳಿಂದ ಗೆಲುವು ದಾಖಲಿಸಿತ್ತು.

'ಮೊದಲನೆಯದಾಗಿ ನಮಗೆ 330 ರನ್​ಗಳನ್ನು ಬೆನ್ನಟ್ಟು ಕಠಿಣ ಸವಾಲಿತ್ತು. ಭಾರತ ತಂಡ ಖಾತೆ ತೆರೆಯುವ ಮೊದಲೇ ವಿಕೆಟ್​ ಕೂಡ ಉರುಳಿತ್ತು. ಆ ಸಮಯದಲ್ಲಿ 330 ರನ್​ಗಳ ಪೈಕಿ 183 ರನ್​ಗಳನ್ನು ಸಿಡಿಸುವುದು, ಅದೂ ಪಾಕಿಸ್ತಾನ ವಿರುದ್ಧ, ಅದಲ್ಲದೆ ಆ ಸಮಯದಲ್ಲಿ ಅವರಿನ್ನೂ ಅನನುಭವಿ ಆಟಗಾರರಾಗಿದ್ದರು' ಎಂದು ಗಂಭೀರ್​ ವಿವರಿಸಿದ್ದಾರೆ. ಆ ಪಂದ್ಯದಲ್ಲಿ ಗಂಭೀರ್​ ಶೂನ್ಯಕ್ಕೆ ಔಟಾಗಿದ್ದರು.

ಆ ಪಂದ್ಯದಲ್ಲಿ ಪಾಕಿಸ್ತಾನ ತಂಡ ಮೊಹಮದ್​ ಹಫೀಜ್​, ಉಮರ್​ ಗುಲ್​, ಐಜಾಜ್​ ಚೀಮಾ, ಸಯೀದ್​ ಅಜ್ಮಲ್​, ಶಾಹಿದ್​ ಅಫ್ರಿದಿ, ವಹಾಬ್ ರಿಯಾಜ್​ ಅವರಂಥ ಅನುಭವಿ ಬೌಲಿಂಗ್​ ಪಡೆಯನ್ನು ಹೊಂದಿತ್ತು. ಆದರೆ ಇದಾವುದನ್ನೂ ಲೆಕ್ಕಿಸದೆ ಕೊಹ್ಲಿ ಸ್ಫೋಟಕ ಆಟವಾಡಿದ್ದರು. 'ನನ್ನ ಪ್ರಕಾರ ಅದುವೇ ವಿರಾಟ್​ ಕೊಹ್ಲಿಯ ಅತ್ಯುತ್ತಮ ಇನಿಂಗ್ಸ್​ ಆಗಿದೆ' ಎಂದು ಗಂಭೀರ್​ ಅಭಿಪ್ರಾಯಪಟ್ಟಿದ್ದಾರೆ.

ಗಂಭೀರ್​ ವಿಕೆಟ್​ ಮೊದಲ ಓವರ್​ನಲ್ಲೇ ಉರುಳಿದ ಬಳಿಕ ಕೊಹ್ಲಿ, ಸಚಿನ್​ ತೆಂಡುಲ್ಕರ್​ (52) ಜತೆಗೆ 133 ರನ್​ ಜತೆಯಾಟವಾಡಿದ್ದರು. ಬಳಿಕ ರೋಹಿತ್​ ಶರ್ಮ (68) ಜತೆಗೂಡಿ 3ನೇ ವಿಕೆಟ್​ಗೆ 172 ರನ್​ ಸೇರಿಸಿದ್ದರು. ಭಾರತ ಗೆಲುವಿನಿಂದ 12 ರನ್​ ದೂರವಿದ್ದಾಗ ಕೊಹ್ಲಿ ಔಟಾಗಿದ್ದರು. ಅಂತಿಮವಾಗಿ ಸುರೇಶ್​ ರೈನಾ (12) ಮತ್ತು ಎಂಎಸ್​ ಧೋನಿ (4) ತಂಡವನ್ನು 47.5 ಓವರ್​ಗಳಲ್ಲಿ ಗೆಲುವಿನ ದಡ ಸೇರಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net