

ನವದೆಹಲಿ: ಮುಂಬರುವ ಆಸ್ಟ್ರೇಲಿಯಾ ಪ್ರವಾಸಕ್ಕೆ ಭಾರತ ತಂಡದಲ್ಲಿ ಕೆಲ ಮಹತ್ವದ ಬದಲಾವಣೆಗಳನ್ನು ಮಾಡಲಾಗಿದೆ. ನಾಯಕ ವಿರಾಟ್ ಕೊಹ್ಲಿ ಮಗುವಿನ ನಿರೀಕ್ಷೆಯಲ್ಲಿ ತವರಿಗೆ ಮರಳಲಿರುವ ಕಾರಣದಿಂದಾಗಿ ಟೆಸ್ಟ್ ಸರಣಿಯ ಮೊದಲ ಪಂದ್ಯಕ್ಕೆ ಮಾತ್ರ ಲಭ್ಯರಾಗಿದ್ದರೆ, ಫಿಟ್ನೆಸ್ ಗೊಂದಲಗಳ ನಡುವೆ ರೋಹಿತ್ ಶರ್ಮ ಸೀಮಿತ ಓವರ್ ಸರಣಿಯಿಂದ ವಿಶ್ರಾಂತಿ ಪಡೆದಿದ್ದು, ಟೆಸ್ಟ್ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ.
ಕೊಹ್ಲಿ ಪತ್ನಿ ಅನುಷ್ಕಾ ಶರ್ಮ ಜನವರಿಯಲ್ಲಿ ಮಗುವಿಗೆ ಜನ್ಮ ನೀಡುವ ನಿರೀಕ್ಷೆ ಇದೆ. ಇದರಿಂದಾಗಿ ಅವರು ಪಿತೃತ್ವ ರಜೆಗೆ ಸಲ್ಲಿಸಿದ್ದ ಮನವಿಯನ್ನು ಬಿಸಿಸಿಐ ಪುರಸ್ಕರಿಸಿದೆ. ಹೀಗಾಗಿ ಅವರು ಆಸೀಸ್ ಪ್ರವಾಸದ ಕೊನೇ 3 ಟೆಸ್ಟ್ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಆಸೀಸ್ ಪ್ರವಾಸದ ಆರಂಭದಲ್ಲಿ ನವೆಂಬರ್ 27ರಿಂದ ಏಕದಿನ ಸರಣಿ ನಡೆಯಲಿದ್ದು, ಬಳಿಕ 3 ಪಂದ್ಯಗಳ ಟಿ20 ಸರಣಿ ಮತ್ತು 4 ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ.
ಭಾರತ ತಂಡದಲ್ಲಿನ ಬದಲಾವಣೆಗಳು:
*ವಿರಾಟ್ ಕೊಹ್ಲಿ: ಆಸ್ಟ್ರೇಲಿಯಾ ಪ್ರವಾಸದ ಮೊದಲ ಟೆಸ್ಟ್ ಪಂದ್ಯದ ಬಳಿಕ ತವರಿಗೆ ಮರಳಲಿದ್ದಾರೆ. ಕೊನೇ 3 ಟೆಸ್ಟ್‌ಗಳಿಗೆ ಅಲಭ್ಯ. ಟೀಮ್ ಇಂಡಿಯಾ ನಾಯಕನಿಗೆ ಪಿತೃತ್ವದ ರಜೆ ನೀಡಲು ಬಿಸಿಸಿಐ ಸಮ್ಮತಿಸಿದೆ.
*ರೋಹಿತ್ ಶರ್ಮ: ಏಕದಿನ ಮತ್ತು ಟಿ20 ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ. ಈ ಮೂಲಕ ಟೆಸ್ಟ್ ಸರಣಿಗೆ ಸಂಪೂರ್ಣ ಫಿಟ್ ಆಗಲು ಅವಕಾಶ ಕಲ್ಪಿಸಲಾಗಿದೆ. ಟೆಸ್ಟ್ ಸರಣಿಯ ತಂಡಕ್ಕೆ ಸೇರ್ಪಡೆ.
*ಸಂಜು ಸ್ಯಾಮ್ಸನ್: ಏಕದಿನ ತಂಡಕ್ಕೆ ಹೆಚ್ಚುವರಿ ವಿಕೆಟ್ ಕೀಪರ್ ಆಗಿ ಸೇರ್ಪಡೆ.
*ಇಶಾಂತ್ ಶರ್ಮ: ಬೆಂಗಳೂರಿನ ಎನ್‌ಸಿಎಯಲ್ಲಿ ಪುನಶ್ಚೇತನ ಶಿಬಿರದಲ್ಲಿರುವ ವೇಗಿ ಸಂಪೂರ್ಣ ಫಿಟ್ ಆದರೆ ಭಾರತೀಯ ಟೆಸ್ಟ್ ತಂಡಕ್ಕೆ ಸೇರ್ಪಡೆ.
*ವರುಣ್ ಚಕ್ರವರ್ತಿ: ಐಪಿಎಲ್‌ನಲ್ಲಿ ಕೆಕೆಆರ್ ಪರ ಮಿಂಚಿದ್ದ ಸ್ಪಿನ್ನರ್ ಭುಜದ ಗಾಯದಿಂದಾಗಿ ಟಿ20 ತಂಡದಿಂದ ಹೊರಕ್ಕೆ.
*ಟಿ. ನಟರಾಜನ್: ಹೆಚ್ಚುವರಿ ಬೌಲರ್ ಆಗಿ ಆಸೀಸ್‌ಗೆ ತೆರಳಬೇಕಾಗಿದ್ದ ವೇಗಿ ಇದೀಗ ವರುಣ್ ಚಕ್ರವರ್ತಿಗೆ ಬದಲಿಗರಾಗಿ ಟಿ20 ತಂಡಕ್ಕೆ ಸೇರ್ಪಡೆ.
*ವೃದ್ಧಿಮಾನ್ ಸಾಹ: ಐಪಿಎಲ್ ವೇಳೆ ಆಗಿರುವ ಗಾಯದಿಂದಾಗಿ ಟೆಸ್ಟ್ ಸರಣಿಯಲ್ಲಿ ಆಡುವುದು ಅನುಮಾನ. ಲಭ್ಯತೆಯ ಬಗ್ಗೆ ತಡವಾಗಿ ನಿರ್ಧಾರ.
*ಕಮಲೇಶ್ ನಾಗರಕೋಟಿ: ಹೆಚ್ಚುವರಿ ಬೌಲರ್ ಆಗಿ ಆಸೀಸ್‌ಗೆ ತೆರಳಬೇಕಾಗಿದ್ದ ಯುವ ವೇಗಿ ಬಿಸಿಸಿಐ ವೈದ್ಯಕೀಯ ತಂಡದ ಸೂಚನೆಯ ಮೇರೆಗೆ ಪ್ರವಾಸಕ್ಕೆ ತಂಡದ ಜತೆ ತೆರಳುತ್ತಿಲ್ಲ.
ಆಸೀಸ್ ಪ್ರವಾಸಕ್ಕೆ ಪರಿಷ್ಕೃತ ಭಾರತ ತಂಡ:
ಟಿ20: ವಿರಾಟ್ ಕೊಹ್ಲಿ (ನಾಯಕ), ಶಿಖರ್ ಧವನ್, ಮಯಾಂಕ್ ಅಗರ್ವಾಲ್, ಕೆಎಲ್ ರಾಹುಲ್ (ಉಪನಾಯಕ, ವಿ.ಕೀ), ಶ್ರೇಯಸ್ ಅಯ್ಯರ್, ಮನೀಷ್ ಪಾಂಡೆ, ಹಾರ್ದಿಕ್ ಪಾಂಡ್ಯ, ಸಂಜು ಸ್ಯಾಮ್ಸನ್ (ವಿ.ಕೀ), ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಯಜುವೇಂದ್ರ ಚಾಹಲ್, ಜಸ್‌ಪ್ರೀತ್ ಬುಮ್ರಾ, ಮೊಹಮದ್ ಶಮಿ, ನವದೀಪ್ ಸೈನಿ, ದೀಪಕ್ ಚಹರ್, ಟಿ. ನಟರಾಜನ್.
ಏಕದಿನ: ವಿರಾಟ್ ಕೊಹ್ಲಿ (ನಾಯಕ), ಶಿಖರ್ ಧವನ್, ಶುಭಮಾನ್ ಗಿಲ್, ಕೆಎಲ್ ರಾಹುಲ್ (ಉಪನಾಯಕ, ವಿ.ಕೀ), ಶ್ರೇಯಸ್ ಅಯ್ಯರ್, ಮನೀಷ್ ಪಾಂಡೆ, ಹಾರ್ದಿಕ್ ಪಾಂಡ್ಯ, ಮಯಾಂಕ್ ಅಗರ್ವಾಲ್, ರವೀಂದ್ರ ಜಡೇಜಾ, ಯಜುವೇಂದ್ರ ಚಾಹಲ್, ಕುಲದೀಪ್ ಯಾದವ್, ಜಸ್‌ಪ್ರೀತ್ ಬುಮ್ರಾ, ಮೊಹಮದ್ ಶಮಿ, ನವದೀಪ್ ಸೈನಿ, ಶಾರ್ದೂಲ್ ಠಾಕೂರ್, ಸಂಜು ಸ್ಯಾಮ್ಸನ್ (ವಿ.ಕೀ).
ಟೆಸ್ಟ್: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮ, ಮಯಾಂಕ್ ಅಗರ್ವಾಲ್, ಪೃಥ್ವಿ ಷಾ, ಕೆಎಲ್ ರಾಹುಲ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ (ಉಪನಾಯಕ), ಹನುಮ ವಿಹಾರಿ, ಶುಭಮಾನ್ ಗಿಲ್, ವೃದ್ಧಿಮಾನ್ ಸಾಹ (ವಿ.ಕೀ), ರಿಷಭ್ ಪಂತ್ (ವಿ.ಕೀ), ಜಸ್‌ಪ್ರೀತ್ ಬುಮ್ರಾ, ಮೊಹಮದ್ ಶಮಿ, ಉಮೇಶ್ ಯಾದವ್, ನವದೀಪ್ ಸೈನಿ, ಕುಲದೀಪ್ ಯಾದವ್, ಆರ್. ಅಶ್ವಿನ್, ಮೊಹಮದ್ ಸಿರಾಜ್.