

ಸಿಡ್ನಿ: ಆಸ್ಟ್ರೇಲಿಯಾ ಪ್ರವಾಸದ ಕ್ವಾರಂಟೈನ್ ಅವಧಿಯಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆತಿಥೇಯರಿಂದ ವಿಶೇಷ ಗೌರವ ಪಡೆಯಲಿದ್ದಾರೆ. ಭಾರತ ತಂಡ ಪುಲ್‌ಮನ್ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದು, ಇದು ಆಸೀಸ್‌ನ ಪ್ರತಿಷ್ಠಿತ ರಗ್ಬಿ ತಂಡ ನ್ಯೂಸೌತ್‌ವೇಲ್ಸ್ ಬ್ಲೂಸ್ ತಂಡದ ಹೋಟೆಲ್ ಆಗಿದೆ. ಇಲ್ಲಿನ ವಿಶೇಷವಾದ ಪೆಂಟ್‌ಹೌಸ್ ಕೊಠಡಿ ಸಾಮಾನ್ಯವಾಗಿ ಆಸೀಸ್ ರಗ್ಬಿ ದಿಗ್ಗಜ ಬ್ರಾಡ್ ಫಿಟ್ಲರ್‌ಗೆ ಮೀಸಲಾಗಿದ್ದು, ಇದೀಗ ಕ್ವಾರಂಟೈನ್ ಅವಧಿಯಲ್ಲಿ ಕೊಹ್ಲಿಗೆ ಈ ಕೊಠಡಿಯಲ್ಲಿ ಉಳಿದುಕೊಳ್ಳುವ ವಿಶೇಷ ಅವಕಾಶದ ಗೌರವ ನೀಡಲಾಗಿದೆ.
ಕೊಹ್ಲಿ ಮೊದಲ ಟೆಸ್ಟ್ ಮುಗಿದ ಬಳಿಕ ಮಗುವಿನ ನಿರೀಕ್ಷೆಲ್ಲಿ ತವರಿಗೆ ಮರಳಲಿದ್ದಾರೆ. ಅವರ ಪತ್ನಿ ಅನುಷ್ಕಾ ಶರ್ಮ ಜನವರಿಯಲ್ಲಿ ಮಗುವಿಗೆ ಜನ್ಮ ನೀಡುವ ನಿರೀಕ್ಷೆ ಇದೆ. ಐಪಿಎಲ್ ವೇಳೆ ಅನುಷ್ಕಾ ಶರ್ಮ ಪತಿ ಕೊಹ್ಲಿ ಜತೆಗಿದ್ದರೂ, ಆಸ್ಟ್ರೇಲಿಯಾ ಪ್ರವಾಸಕ್ಕೆ ಕೊಹ್ಲಿ ಏಕಾಂಗಿಯಾಗಿ ತೆರಳಿದ್ದು, ಅನುಷ್ಕಾ ತವರಿಗೆ ಮರಳಿದ್ದಾರೆ.
ಆಸೀಸ್ ಕ್ರಿಕೆಟಿಗರಿಗೂ ಕ್ವಾರಂಟೈನ್
ಐಪಿಎಲ್‌ನಲ್ಲಿ ಆಡಿ ತವರಿಗೆ ಮರಳಿರುವ ಆಸೀಸ್ ಕ್ರಿಕೆಟಿಗರಿಗೂ ಕ್ವಾರಂಟೈನ್ ಕಡ್ಡಾಯವಾಗಿದ್ದು, ನವೆಂಬರ್ 22ರ ಬಳಿಕವಷ್ಟೇ ಅವರು ರಾಷ್ಟ್ರೀಯ ತಂಡದ ಶಿಬಿರವನ್ನು ಕೂಡಿಕೊಳ್ಳಲಿದ್ದಾರೆ ಮತ್ತು ಪ್ರತ್ಯೇಕವಾಗಿಯೇ ಅಭ್ಯಾಸ ನಡೆಸಲಿದ್ದಾರೆ.