ಸಿಎಸ್‌ಕೆ ವಿರುದ್ಧ ಆರ್‌ಸಿಬಿ ಸೋಲಿಗೆ ಕಾರಣ ವಿವರಿಸಿದ ನಾಯಕ ವಿರಾಟ್ ಕೊಹ್ಲಿ

rcb vs csk web
Published on

ಶಾರ್ಜಾ: ಚೆನ್ನೈ ಸೂಪರ್‌ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಉತ್ತಮ ಆರಂಭ ಕಂಡರೂ ಸೋಲು ಕಂಡ ಆರ್‌ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ, 15-20 ರನ್ ಕೊರತೆಯಾಗಿದ್ದೇ ಸೋಲಿಗೆ ಕಾರಣ ಎಂದು ಹೇಳಿದ್ದಾರೆ.

‘175 ರನ್ ಇಲ್ಲಿ ಗೆಲುವಿನ ಮೊತ್ತವಾಗುತ್ತಿತ್ತು. ಪಿಚ್ ಸಾಕಷ್ಟು ನೆರವು ನೀಡುತ್ತಿದ್ದರೂ, ನಮ್ಮ ಬೌಲರ್‌ಗಳು ಅದರ ಲಾಭವೆತ್ತಲಿಲ್ಲ. ಹೆಚ್ಚಿನ ಬೌಂಡರಿಗಳನ್ನು ಬಿಟ್ಟುಕೊಟ್ಟರು. ಆದರೆ ಸಿಎಸ್‌ಕೆ ಬೌಲರ್‌ಗಳು ಯಾರ್ಕರ್‌ಗಳನ್ನು ಸಮರ್ಥವಾಗಿ ಎಸೆದರು. ಇದರಿಂದಾಗಿ ನಮಗೆ ನಿರೀಕ್ಷಿತ ಮೊತ್ತವನ್ನು ಪೇರಿಸಲು ಸಾಧ್ಯವಾಗಲಿಲ್ಲ’ ಎಂದು ಕೊಹ್ಲಿ 6 ವಿಕೆಟ್ ಸೋಲಿನ ಬಳಿಕ ನುಡಿದರು.

ಕನ್ನಡಿಗ ದೇವದತ್ ಪಡಿಕಲ್ (70) ಜತೆಗೂಡಿ ಕೊಹ್ಲಿ ಮೊದಲ ವಿಕೆಟ್‌ಗೆ 111 ರನ್ ಸೇರಿಸಿದರೂ, ಆರ್‌ಸಿಬಿ ಸ್ಲಾಗ್ ಓವರ್‌ಗಳಲ್ಲಿ ಡ್ವೇನ್ ಬ್ರಾವೊ (24ಕ್ಕೆ 3) ದಾಳಿಗೆ ಕುಸಿದು 6 ವಿಕೆಟ್‌ಗೆ 156 ರನ್ ಗಳಿಸಲಷ್ಟೇ ಶಕ್ತವಾಯಿತು. ಪ್ರತಿಯಾಗಿ ಸಿಎಸ್‌ಕೆ ತಂಡ ಋತುರಾಜ್ ಗಾಯಕ್ವಾಡ್ (38) ಮತ್ತು ಫಾಫ್​ ಡು ಪ್ಲೆಸಿಸ್ (31) ಹಾಕಿಕೊಟ್ಟ ಭದ್ರ ಬುನಾದಿಯ ನೆರವಿನಿಂದ ದಿಟ್ಟ ಚೇಸಿಂಗ್ ನಡೆಸಿತು. ಮೊಯಿನ್ ಅಲಿ (23) ಮತ್ತು ಅಂಬಟಿ ರಾಯುಡು (32) ಉಪಯುಕ್ತ ಕೊಡುಗೆ ನೀಡಿದರು. ಕೊನೆಗೆ ನಾಯಕ ಎಂಎಸ್ ಧೋನಿ (11*) ಮತ್ತು ಸುರೇಶ್ ರೈನಾ (17*) ಜೋಡಿ 18.1 ಓವರ್‌ಗಳಲ್ಲಿ 4 ವಿಕೆಟ್‌ಗೆ 157 ರನ್ ಪೇರಿಸಿ ತಂಡವನ್ನು ಗೆಲುವಿನ ದಡ ಸೇರಿಸಿತು.

ನಮ್ಮ ಆಟಗಾರರು ಕಠಿಣ ಪರಿಶ್ರಮ ಪಡುತ್ತಿದ್ದಾರೆ. ಅವರು ತಮ್ಮ ಪಾತ್ರ ಮತ್ತು ಜವಾಬ್ದಾರಿಯನ್ನು ತಿಳಿದುಕೊಂಡಿದ್ದಾರೆ. ಇಲ್ಲಿ 3 ಮೈದಾನಗಳೂ ಭಿನ್ನವಾಗಿವೆ. ನಮ್ಮ ಆಟಗಾರರು ಈ ಎಲ್ಲ ಮೈದಾನಗಳಿಗೂ ಹೊಂದಿಕೊಂಡು ಆಡುತ್ತಿದ್ದಾರೆ ಎಂದು ಸಿಎಸ್‌ಕೆ ನಾಯಕ ಎಂಎಸ್ ಧೋನಿ ಹೇಳಿದರು.

ಡ್ವೇನ್ ಬ್ರಾವೊ ಸಿಎಸ್‌ಕೆ ಪರ 100 ಪಂದ್ಯ ಆಡಿದ 4ನೇ ಆಟಗಾರ ಎನಿಸಿದರು. ಧೋನಿ, ಸುರೇಶ್ ರೈನಾ, ರವೀಂದ್ರ ಜಡೇಜಾ ಮೊದಲ ಮೂವರು. ಸುರೇಶ್ ರೈನಾ ಐಪಿಎಲ್‌ನಲ್ಲಿ 5,500ಕ್ಕೂ ಅಧಿಕ ರನ್ ಗಳಿಸಿದ 4ನೇ ಬ್ಯಾಟ್ಸ್‌ಮನ್ ಎನಿಸಿದರು. ವಿರಾಟ್ ಕೊಹ್ಲಿ, ರೋಹಿತ್ ಶರ್ಮ ಮತ್ತು ಶಿಖರ್ ಧವನ್ ಮೊದಲ ಮೂವರು. ಯುಎಇಯಲ್ಲಿ ಆರ್‌ಸಿಬಿ ಸತತ 7ನೇ ಸೋಲು ಕಂಡಿತು. ಮುಂಬೈ ತಂಡ ಸತತ 6 ಸೋಲು ಕಂಡಿದ್ದು ಹಿಂದಿನ ದಾಖಲೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net