3-4ನೇ ಟೆಸ್ಟ್​ನಿಂದಲೂ ವಿರಾಟ್​ ಕೊಹ್ಲಿ ಔಟ್​? ಅಂತಿಮ ಪಂದ್ಯದಲ್ಲೂ ಆಡುವುದು ಅನುಮಾನ!

kohli web
Published on

ನವದೆಹಲಿ: ವೈಯಕ್ತಿಕ ಕಾರಣ ನೀಡಿ ಪ್ರವಾಸಿ ಇಂಗ್ಲೆಂಡ್​ ವಿರುದ್ಧದ ಮೊದಲೆರಡು ಟೆಸ್ಟ್​ ತಪ್ಪಿಸಿಕೊಂಡಿದ್ದ ಟೀಮ್​ ಇಂಡಿಯಾದ ಸ್ಟಾರ್​ ಬ್ಯಾಟರ್​ ವಿರಾಟ್​ ಕೊಹ್ಲಿ ಇದೀಗ 3 ಮತ್ತು 4ನೇ ಟೆಸ್ಟ್​ನಿಂದಲೂ ಹೊರಗುಳಿಯಲಿದ್ದಾರೆ ಎಂದು ವರದಿಯಾಗಿದೆ. ಜತೆಗೆ ಸರಣಿಯ 5ನೇ ಹಾಗೂ ಅಂತಿಮ ಟೆಸ್ಟ್​ನಲ್ಲೂ ಕೊಹ್ಲಿ ಆಡುವುದು ಅನುಮಾನ ಎನ್ನಲಾಗಿದೆ.

3ನೇ ಟೆಸ್ಟ್​ ಫೆ. 15ರಿಂದ ರಾಜ್​ಕೋಟ್​ನಲ್ಲಿ ನಡೆದರೆ, 4ನೇ ಟೆಸ್ಟ್​ ಫೆ.23ರಿಂದ ರಾಂಚಿಯಲ್ಲಿ ನಡೆಯಲಿದೆ. ಅಂತಿಮ ಟೆಸ್ಟ್​ ಮಾ. 7ರಿಂದ ಧರ್ಮಶಾಲಾದಲ್ಲಿ ನಿಗದಿಯಾಗಿದೆ. ಸರಣಿ ಆರಂಭಕ್ಕೆ 3 ದಿನ ಮುನ್ನ ಕೊಹ್ಲಿ ಮೊದಲ 2 ಟೆಸ್ಟ್​ನಿಂದ ಹೊರಗುಳಿಯಲಿದ್ದಾರೆ ಎಂದು ಬಿಸಿಸಿಐ ಪ್ರಕಟಿಸಿತ್ತು. ಸರಣಿಯ ಉಳಿದ 3 ಪಂದ್ಯಗಳಿಗೆ ಭಾರತ ತಂಡ ಇನ್ನೂ ಪ್ರಕಟಗೊಂಡಿಲ್ಲ. ಗುರುವಾರ ಅಥವಾ ಈ ವಾರದೊಳಗೆ ತಂಡ ಪ್ರಕಟಗೊಳ್ಳುವ ನಿರೀಕ್ಷೆ ಇದೆ.

ಇನ್ನು ಗಾಯದಿಂದಾಗಿ 2ನೇ ಟೆಸ್ಟ್​ ತಪ್ಪಿಸಿಕೊಂಡಿದ್ದ ಕನ್ನಡಿಗ ಕೆಎಲ್​ ರಾಹುಲ್​ ಮತ್ತು ಆಲ್ರೌಂಡರ್​ ರವೀಂದ್ರ ಜಡೇಜಾ 3ನೇ ಟೆಸ್ಟ್​ಗೆ ಮರಳುವ ನಿರೀಕ್ಷೆ ಇದೆ. ಜತೆಗೆ 2ನೇ ಟೆಸ್ಟ್​ನಿಂದ ವಿಶ್ರಾಂತಿ ಪಡೆದಿದ್ದ ವೇಗಿ ಮೊಹಮದ್​ ಸಿರಾಜ್​ ಕೂಡ 3ನೇ ಟೆಸ್ಟ್​ಗೆ ಮರಳಲಿದ್ದಾರೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net