ಭಾರತಕ್ಕೆ ಇಂದು ಅಫ್ಘಾನಿಸ್ತಾನ​ ಸವಾಲು; ಸೂಪರ್​-8ನಲ್ಲಿ ಗೆಲುವಿನ ಆರಂಭ ನಿರೀಕ್ಷೆ

web rohit
Published on

ಬ್ರಿಜ್​ಟೌನ್​: ಲೀಗ್​ ಹಂತದಲ್ಲಿ ಅಜೇಯ ಸಾಧನೆ ಮಾಡಿರುವ ಭಾರತ ತಂಡ ಐಸಿಸಿ ಟಿ20 ವಿಶ್ವಕಪ್​ ಟೂರ್ನಿಯ ಸೂಪರ್​-8 ಹಂತದಲ್ಲೂ ಗೆಲುವಿನ ಓಟ ಮುಂದುವರಿಸುವ ಹಂಬಲದಲ್ಲಿದ್ದು, ಅಫ್ಘಾನಿಸ್ತಾನ ವಿರುದ್ಧ ಗುರುವಾರ ಸೆಣಸಲಿದೆ. ಸ್ಟಾರ್​ ಬ್ಯಾಟರ್​ ವಿರಾಟ್​ ಕೊಹ್ಲಿ ಲಯಕ್ಕೆ ಮರಳುವ ನಿರೀಕ್ಷೆಯೊಂದಿಗೆ ಭಾರತ, ಎಡಗೈ ಸ್ಪಿನ್ನರ್​ ಕುಲದೀಪ್​ ಯಾದವ್​ ಕಣಕ್ಕಿಳಿಸುವ ಲೆಕ್ಕಾಚಾರದಲ್ಲಿದೆ.

ಭಾರತ ಲೀಗ್​ ಹಂತದಲ್ಲಿ ಪಾಕಿಸ್ತಾನ ಎದುರು ಅಲ್ಪ ಮೊತ್ತವನ್ನು ರಕ್ಷಿಸಿಕೊಂಡು ಗೆದ್ದಿದ್ದು ಹೈಲೈಟ್​ ಆಗಿದ್ದರೆ, ಅಫ್ಘಾನಿಸ್ತಾನ ತಂಡ ಮಾಜಿ ರನ್ನರ್​ಅಪ್​ ನ್ಯೂಜಿಲೆಂಡ್​ ತಂಡಕ್ಕೆ ಆಘಾತ ನೀಡಿ ಸೂಪರ್​-8 ಪ್ರವೇಶಿಸಿದ ವಿಶ್ವಾಸದಲ್ಲಿದೆ. ಹೀಗಾಗಿ ಭಾರತಕ್ಕೆ ಈ ಪಂದ್ಯ ನಿರೀಕ್ಷಿಸಿದಷ್ಟು ಸುಲಭ ಸವಾಲು ಆಗುವ ಸಾಧ್ಯತೆ ಇಲ್ಲ. ಉಭಯ ತಂಡಗಳು ಬಲಿಷ್ಠ ಬೌಲಿಂಗ್​ ವಿಭಾಗ ಹೊಂದಿರುವುದರಿಂದ ಈ ಮುಖಾಮುಖಿ ಕುತೂಹಲ ಕೆರಳಿಸಿದೆ. ಆದರೆ, ಲೀಗ್​ ಹಂತದ ಕೊನೇ ಪಂದ್ಯದಲ್ಲಿ ವಿಂಡೀಸ್​ ಎದುರು ಆಫ್ಘನ್​ ಬೌಲರ್​ಗಳು ದುಬಾರಿಯಾಗಿದ್ದು ಹಿನ್ನಡೆ ಎನಿಸಿದೆ.

ಕೊಹ್ಲಿ ಮೇಲೆ ಕಣ್ಣು

ಐಪಿಎಲ್​ನಲ್ಲಿ ರನ್​ಮಳೆ ಹರಿಸಿದ್ದ ವಿರಾಟ್​ ಕೊಹ್ಲಿ, ಟಿ20 ವಿಶ್ವಕಪ್​ನಲ್ಲಿ ಇನ್ನೂ ಎರಡಂಕಿ ತಲುಪಿಲ್ಲ. ಆದರೆ ಅವರು ಬಿಗ್​ ಮ್ಯಾಚ್​ ಪ್ಲೇಯರ್​ ಆಗಿರುವುದರಿಂದ ಸೂಪರ್-8ನಲ್ಲಿ ಲಯಕ್ಕೆ ಮರಳುವ ನಿರೀಕ್ಷೆ ಇದೆ. ಅಲ್ಲದೆ ವಿಂಡೀಸ್​ ಪಿಚ್​ಗಳು ಅವರಿಗೆ ಪರಿಚಿತವೆನಿಸಿದೆ. ಕೆರಿಬಿಯನ್​ ತಲುಪಿದ ಬಳಿಕ ಕೊಹ್ಲಿ ಹೆಚ್ಚಿನ ಬ್ಯಾಟಿಂಗ್​ ಅಭ್ಯಾಸವನ್ನೂ ನಡೆಸಿದ್ದಾರೆ. ಬೌಲಿಂಗ್​ನಲ್ಲಿ ಯಶ ಕಂಡಿರುವ ಹಾರ್ದಿಕ್​ ಪಾಂಡ್ಯ ಬ್ಯಾಟಿಂಗ್​ನಲ್ಲೂ ಹಿಂದಿನ ಲಯಕ್ಕೆ ಮರಳಬೇಕಿದೆ.

ಸ್ಪಿನ್​ ಸ್ನೇಹಿ ಪಿಚ್​

ಕೆನ್ಸಿಂಗ್​ಟನ್​ ಓವಲ್​ ಮೈದಾನದ ಪಿಚ್​ ಪವರ್​ಪ್ಲೇನಲ್ಲಿ ವೇಗಿಗಳ ಸ್ವಿಂಗ್​ ಎಸೆತಗಳಿಗೆ ಸಹಕರಿಸಿದರೂ, ನಂತರದಲ್ಲಿ ಸ್ಪಿನ್​ ಸ್ನೇಹಿಯಾಗಿ ವರ್ತಿಸುವ ನಿರೀಕ್ಷೆ ಇದೆ. ಹೀಗಾಗಿ ಕಳೆದ 12 ತಿಂಗಳಲ್ಲಿ ತಂಡದ ಅತ್ಯುತ್ತಮ ಸ್ಪಿನ್ನರ್​ ಎನಿಸಿರುವ ಕುಲದೀಪ್​ ಯಾದವ್​ ಕಣಕ್ಕಿಳಿಸಲು ಸರಿಯಾದ ವೇದಿಕೆ ಇದಾಗಿದೆ. ಜತೆಗೆ ಬ್ಯಾಟರ್​ಗಳಿಗೂ ವಿಂಡೀಸ್​ ಪಿಚ್​, ಅಮೆರಿಕದಷ್ಟು ಕಠಿಣವಾಗಿಲ್ಲ. ಇಂಗ್ಲೆಂಡ್​ ವಿರುದ್ಧದ ಪಂದ್ಯದಲ್ಲಿ ಆಸೀಸ್​ ಇಲ್ಲಿ 201 ರನ್​ ಪೇರಿಸಿತ್ತು.

ಟೀಮ್​ ನ್ಯೂಸ್​:

ಭಾರತ: ಲೀಗ್​ ಹಂತದ ಪಂದ್ಯಗಳನ್ನೆಲ್ಲ ಅಮೆರಿಕದಲ್ಲಿ ಆಡಿದ್ದ ಭಾರತ ಈಗ ವಿಂಡೀಸ್​ ನೆಲದಲ್ಲಿ ಸೂಪರ್​-8 ಪಂದ್ಯಗಳನ್ನು ಆಡಲಿದ್ದು, ತಂಡ ಸಂಯೋಜನೆ ಬದಲಾವಣೆ ಕಾಣುವ ನಿರೀಕ್ಷೆ ಹೆಚ್ಚಿದೆ. 3ನೇ ವೇಗಿಯ ಬದಲಿಗೆ ತಜ್ಞ ಸ್ಪಿನ್ನರ್​ ಕುಲದೀಪ್​ ಕಣಕ್ಕಿಳಿಯುವ ಸಾಧ್ಯತೆ ಇದೆ. ಹೀಗಾಗಿ ಮೊಹಮದ್​ ಹೊರಗುಳಿಯಬಹುದು. ಎಲ್ಲ ನಾಲ್ವರು ಆಲ್ರೌಂಡರ್​ಗಳನ್ನು (ಹಾರ್ದಿಕ್​, ದುಬೆ, ಅಕ್ಷರ್​, ಜಡೇಜಾ) 11ರ ಬಳಗದಲ್ಲಿ ಆಡಿಸುವ ಬಗ್ಗೆ ನಾಯಕ ರೋಹಿತ್​ ಶರ್ಮ ಟೂರ್ನಿಗೆ ಮೊದಲೇ ಹೇಳಿಕೊಂಡಿದ್ದರು ಮತ್ತು ಸೂಪರ್-8ನಲ್ಲೂ ಈ ತಂತ್ರ ಮುಂದುವರಿಯಬಹುದು. ಇದರಿಂದ ಭಾರತದ ಬ್ಯಾಟಿಂಗ್​ ವಿಭಾಗ 8ನೇ ಕ್ರಮಾಂಕದವರೆಗೂ ವಿಸ್ತರಣೆಯಾಗಲಿದೆ.

ಅಫ್ಘಾನಿಸ್ತಾನ: ಎಡಗೈ ವೇಗಿ ಜಲ್ಲಾಕ್​ ಫಾರೂಖಿ 12 ವಿಕೆಟ್​ ಕಬಳಿಸುವ ಮೂಲಕ ಟೂರ್ನಿಯ ಗರಿಷ್ಠ ವಿಕೆಟ್​ ಸಾಧಕ ಎನಿಸಿದ್ದು, ಪವರ್​ಪ್ಲೇನಲ್ಲಿ ಆಫ್ಘನ್​ಗೆ ಹಲವು ವಿಕೆಟ್​ ಕಬಳಿಸಿಕೊಟ್ಟಿದ್ದಾರೆ. ಜತೆಗೆ ನಾಯಕ ರಶೀದ್​ ಖಾನ್​ ಸ್ಪಿನ್​ ವಿಭಾಗದ ಸಾರಥ್ಯ ವಹಿಸಿದ್ದಾರೆ. ಬ್ಯಾಟಿಂಗ್​ ವಿಭಾಗದಲ್ಲಿ ಆರಂಭಿಕರಾದ ರಹಮಾನುಲ್ಲಾ ಗುರ್ಬಜ್​ ಮತ್ತು ಇಬ್ರಾಹಿಂ ಜದ್ರಾನ್​ ಆಫ್ಘನ್​ ಪಾಲಿಗೆ ನಿರ್ಣಾಯಕ ಎನಿಸಿದ್ದಾರೆ.

ಮುಖಾಮುಖಿ: 8

ಭಾರತ: 7

ಅ್ಘಾನಿಸ್ತಾನ: 0

ರದ್ದು: 1

ಆರಂಭ: ರಾತ್ರಿ 8.00

ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​, ಹಾಟ್​ಸ್ಟಾರ್​

ಪಂತ್​ ಅಭ್ಯಾಸಕ್ಕೆ ಗೈರು!

ಆ್ಘನ್​ ವಿರುದ್ಧದ ಪಂದ್ಯಕ್ಕೆ ಪೂರ್ವಭಾವಿಯಾಗಿ ವಿಕೆಟ್​ ಕೀಪರ್​-ಬ್ಯಾಟರ್​ ರಿಷಭ್​ ಪಂತ್​ ಬುಧವಾರ ಭಾರತ ತಂಡದ ಅಭ್ಯಾಸಕ್ಕೆ ಗೈರಾದರು. ಇದಕ್ಕೆ ಗಾಯದ ಸಮಸ್ಯೆ ಕಾರಣವೇ ಎಂಬುದು ಸ್ಪಷ್ಟವಾಗಿಲ್ಲ. ತಂಡದ ಉಳಿದೆಲ್ಲ ಆಟಗಾರರ ಹಾಜರಿಯ ನಡುವೆ ಪಂತ್​ ಗೈರು ಅಚ್ಚರಿಗೂ ಕಾರಣವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net