ಕೊಹ್ಲಿ, ಎಬಿಡಿ ಕ್ರಿಕೆಟ್ ಪರಿಕರ ಹರಾಜು, ಕರೊನಾ ವಿರುದ್ಧದ ಹೋರಾಟಕ್ಕೆ ದೇಣಿಗೆ ಸಂಗ್ರಹಿಸಲು ಯೋಜನೆ

page 10 4
Published on

ನವದೆಹಲಿ: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ದಕ್ಷಿಣ ಆಫ್ರಿಕಾದ ಮಾಜಿ ಬ್ಯಾಟ್ಸ್​ಮನ್ ಎಬಿ ಡಿವಿಲಿಯರ್ಸ್ ತಮ್ಮ ಕೆಲ ಕ್ರಿಕೆಟ್ ಪರಿಕರಗಳನ್ನು ಹರಾಜು ಹಾಕುವ ಮೂಲಕ ಕರೊನಾ ವಿರುದ್ಧದ ಹೋರಾಟಕ್ಕೆ ದೇಣಿಗೆ ಸಂಗ್ರಹಿಸಲು ಮುಂದಾಗಿದ್ದಾರೆ. 2016ರ ಐಪಿಎಲ್​ನಲ್ಲಿ ಆರ್​ಸಿಬಿ ಪರ ತಾವು ಶತಕ ಸಿಡಿಸಿದಾಗ ಆಡಿದ್ದ ಬ್ಯಾಟ್ ಕೂಡ ಇದರಲ್ಲಿ ಒಳಗೊಂಡಿದೆ.

ಗುಜರಾತ್ ಲಯನ್ಸ್ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿ 248 ರನ್ ಪೇರಿಸಿದಾಗ ಕೊಹ್ಲಿ-ಎಬಿಡಿ ಇಬ್ಬರೂ ಶತಕ ಸಿಡಿಸಿದ್ದರು. ಆ ಪಂದ್ಯದಲ್ಲಿ ತಾವು ಧರಿಸಿದ್ದ ಜೆರ್ಸಿ ಮತ್ತು ಗ್ಲೌಸ್ ಕೂಡ ಹರಾಜಿಗೆ ಇಡಲು ಅವರು ನಿರ್ಧರಿಸಿದ್ದಾರೆ. ಈ ಪಂದ್ಯದಲ್ಲಿ ಆರ್​ಸಿಬಿ 144 ರನ್​ಗಳ ಬೃಹತ್ ಗೆಲುವು ದಾಖಲಿಸಿತ್ತು.

‘ನಾವಿಬ್ಬರು ಹಲವು ಉತ್ತಮ ಇನಿಂಗ್ಸ್​ಗಳನ್ನು ಜತೆಯಾಗಿ ಆಡಿದ್ದೇವೆ. 2016ರ ಆ ಪಂದ್ಯದಲ್ಲಿ ನಾನು 129 ರನ್ ಗಳಿಸಿದ್ದರೆ, ನೀವೂ (ಕೊಹ್ಲಿ) ಶತಕ ದಾಖಲಿಸಿದ್ದಿರಿ. ಈ ರೀತಿ ಯಾವಾಗಲೂ ಇಬ್ಬರೂ ಶತಕ ಸಿಡಿಸಲಾಗದು. ಹೀಗಾಗಿ ಅದೊಂದು ವಿಶೇಷ ನೆನಪು. ಆನ್​ಲೈನ್ ಮೂಲಕ ಆ ಪಂದ್ಯದ ಎಲ್ಲ ಪರಿಕರಗಳನ್ನು ಹರಾಜಿಗೆ ಇಡುವೆವು. ಇದರಿಂದ ಬಂದ ಹಣವನ್ನು ಭಾರತ ಮತ್ತು ದಕ್ಷಿಣ ಆಫ್ರಿಕಾದಲ್ಲಿನ ಕರೊನಾ ವಿರುದ್ಧದ ಹೋರಾಟಕ್ಕೆ ಹಂಚುವೆವು’ ಎಂದು ಎಬಿಡಿ ಇನ್​ಸ್ಟಾಗ್ರಾಂ ಲೈವ್​ನಲ್ಲಿ ಕೊಹ್ಲಿ ಜತೆ ಮಾತನಾಡುತ್ತಾ ಹೇಳಿದ್ದಾರೆ. ಆ ಪಂದ್ಯದಲ್ಲಿ 109 ರನ್ ಬಾರಿಸಿದ್ದ ಕೊಹ್ಲಿ, ‘ಇದೊಂದು ಉತ್ತಮ ಯೋಜನೆ. ಬಂದ ಹಣವನ್ನು ನೀವು (ಎಬಿಡಿ) ಭಾರತಕ್ಕೂ ಹಂಚಲು ಒಪ್ಪಿರುವುದು ಉತ್ತಮ ನಡೆ. ನಾನೂ ಆ ಪಂದ್ಯದ ಪರಿಕರಗಳನ್ನು ತೆಗೆದಿಟ್ಟಿರುವೆ. ಇಂಥ ಉತ್ತಮ ಉದ್ದೇಶಕ್ಕೆ ನಾನೂ ಅವುಗಳನ್ನು ಹರಾಜಿಗೆ ಇಡುವೆ’ ಎಂದಿದ್ದಾರೆ. ಕೊಹ್ಲಿ 2008ರಿಂದಲೂ ಆರ್​ಸಿಬಿ ತಂಡದಲ್ಲಿದ್ದರೆ, ಎಬಿಡಿ ಕಳೆದ 9 ವರ್ಷಗಳಿಂದ ತಂಡದಲ್ಲಿದ್ದಾರೆ. ಈ ಅವಧಿಯಲ್ಲಿ ಅವರಿಬ್ಬರ ನಡುವೆ ಗಾಢವಾದ ಗೆಳೆತನ ಬೆಳೆದಿದೆ.

ಭಾರತ-ದ. ಆಫ್ರಿಕಾ ಇಲೆವೆನ್ ಆಯ್ಕೆ! ಕೊಹ್ಲಿ-ಎಬಿಡಿ ಮಾತುಕತೆಯ ವೇಳೆ ಭಾರತ-ದಕ್ಷಿಣ ಆಫ್ರಿಕಾದ ಸಂಯುಕ್ತ ಇಲೆವೆನ್ ಏಕದಿನ ತಂಡವನ್ನು ಆಯ್ಕೆ ಮಾಡಿದರು. ಅದು ಹೀಗಿದೆ: ಸಚಿನ್ ತೆಂಡುಲ್ಕರ್, ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ಜಾಕ್ಸ್ ಕಾಲಿಸ್, ಎಂಎಸ್ ಧೋನಿ (ನಾಯಕ), ಯುವರಾಜ್ ಸಿಂಗ್, ಯಜುವೇಂದ್ರ ಚಾಹಲ್, ಡೇಲ್ ಸ್ಟೈನ್, ಜಸ್​ಪ್ರೀತ್ ಬುಮ್ರಾ, ಕಗಿಸೊ ರಬಾಡ.

ಆರ್​ಸಿಬಿ ತಂಡದಲ್ಲೇ ಇರುವೆ! ಎಲ್ಲಿಯವರೆಗೆ ನಾನು ಐಪಿಎಲ್ ಆಡುತ್ತಿರುವೆನೋ ಅಲ್ಲಿಯವರೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲೇ ಇರುವೆ. ಆರ್​ಸಿಬಿ ಅಭಿಮಾನಿಗಳ ಪ್ರೀತಿ ಮತ್ತು ನಿಷ್ಠೆ ಯಾವತ್ತೂ ನನ್ನನ್ನು ತಂಡ ತೊರೆಯಲು ಬಿಡಲಾರದು ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ. ಆರ್​ಸಿಬಿ ತಂಡ 12 ಆವೃತ್ತಿಗಳಲ್ಲೂ ಆಡಿ 3 ಬಾರಿ ಫೈನಲ್​ಗೇರಿ ಎಡವಿದ್ದರೂ, ಎಂದೂ ಅಭಿಮಾನಿಗಳ ಸಂಖ್ಯೆ ಕಡಿಮೆಯಾಗಿಲ್ಲ. ಆರ್​ಸಿಬಿ ಪರ ಪ್ರಶಸ್ತಿ ಗೆಲ್ಲುವುದು ಈಗಲೂ ನಮ್ಮ ಗುರಿಯಾಗಿ ಉಳಿದಿದೆ ಎಂದು ಕೊಹ್ಲಿ, ಎಬಿಡಿ ಜತೆಗಿನ ಇನ್​ಸ್ಟಾಗ್ರಾಂ ಮಾತುಕತೆಯ ವೇಳೆ ಹೇಳಿದ್ದಾರೆ. ‘ನಾನೂ ಯಾವತ್ತೂ ಆರ್​ಸಿಬಿ ತಂಡವನ್ನು ಬಿಡಲಾರೆ. ಆದರೆ ಇದಕ್ಕಾಗಿ ನಾನು ನಿರಂತರ ರನ್ ಬಾರಿಸುತ್ತಿರಬೇಕಾಗುತ್ತದೆ. ಯಾಕೆಂದರೆ ನಾನು ತಂಡದ ನಾಯಕನಲ್ಲವಲ್ಲ’ ಎಂದು ಎಬಿಡಿ ನಗು ಬೀರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net