ಆಸೀಸ್​ ಎದುರು ಕೆಎಲ್​ ರಾಹುಲ್​ಗೆ ಸ್ನಾನ ಮಾಡಲಷ್ಟೇ ವಿರಾಮ; 83ರಲ್ಲಿ ಕಪಿಲ್​ಗೂ ಹೀಗಾಗಿತ್ತು!

rahul kapil web
Published on

ಚೆನ್ನೈ: ಏಕದಿನ ವಿಶ್ವಕಪ್​ನಲ್ಲಿ ಆಸ್ಟ್ರೆಲಿಯಾ ವಿರುದ್ಧದ ಮೊದಲ ಪಂದ್ಯದಲ್ಲಿ ಸರಿಸುಮಾರು 50 ಓವರ್​ ವಿಕೆಟ್​ ಕೀಪಿಂಗ್​ ಮಾಡಿದ ಬಳಿಕ ಡ್ರೆಸ್ಸಿಂಗ್​ ರೂಮ್​ಗೆ ಮರಳಿದ ಕನ್ನಡಿಗ ಕೆಎಲ್​ ರಾಹುಲ್​, ಸ್ನಾನ ಮಾಡಿ ಅರ್ಧ ಗಂಟೆ ವಿರಾಮ ತೆಗೆದುಕೊಳ್ಳುವ ಯೋಚನೆಯಲ್ಲಿದ್ದರು. ಆದರೆ ಅವರು ಸ್ನಾನ ಮಾಡಿ ಹೊರಗೆ ಬರುತ್ತಿದ್ದಂತೆ ಬ್ಯಾಟಿಂಗ್​ಗೆ ಇಳಿಯಬೇಕಾದ ಸವಾಲು ಎದುರಾಗಿತ್ತು. ಭಾರತ 2 ಓವರ್​ಗಳಲ್ಲೇ 2 ರನ್​ಗೆ 3 ವಿಕೆಟ್​ ಕಳೆದುಕೊಂಡಿದ್ದರಿಂದ 5ನೇ ಕ್ರಮಾಂಕದ ಬ್ಯಾಟರ್​ ರಾಹುಲ್​, 3ನೇ ಓವರ್​ನಿಂದಲೇ ಬ್ಯಾಟಿಂಗ್​ಗೆ ಇಳಿಯುವಂತಾಯಿತು. ನಂತರ ದಣಿವು ತೋರಿಸಿಕೊಳ್ಳದೆ ಸುಮಾರು 40 ಓವರ್​ ಕಾಲ ಬ್ಯಾಟಿಂಗ್​ ಮಾಡಿ ಭಾರತವನ್ನು ಗೆಲುವಿನ ದಡ ಕೂಡ ಸೇರಿಸಿದರು.

ಪಂದ್ಯದ ಬಳಿಕ ಈ ಬಗ್ಗೆ ಹೇಳಿಕೊಂಡ ರಾಹುಲ್​, ತಂಡಕ್ಕಾಗಿ ಆಡಿರುವ ಬಗ್ಗೆ ಖುಷಿ ಇದೆ ಎಂದರು. ವಿರಾಟ್​ ಕೊಹ್ಲಿ ಜತೆ 4ನೇ ವಿಕೆಟ್​ಗೆ 165 ರನ್​ ಜತೆಯಾಟವಾಡಿ ಭಾರತವನ್ನು ರಕ್ಷಿಸಿದ ರಾಹುಲ್​, ಇದನ್ನು ಟೆಸ್ಟ್​ ಪಂದ್ಯವೆಂಬಂತೆ ಭಾವಿಸಿ ಆಡಿದರೆ ಯಶಸ್ಸು ಸಿಗುತ್ತದೆ ಎಂದು ಕೊಹ್ಲಿ ತಿಳಿಸಿದ್ದಾಗಿ ಹೇಳಿದರು.

83ರಲ್ಲಿ ಕಪಿಲ್​ಗೂ ಹೀಗಾಗಿತ್ತು!

ಭಾರತ ಮೊಟ್ಟಮೊದಲ ವಿಶ್ವಕಪ್​ ಗೆಲುವು ಕಂಡ 1983ರ ಆವೃತ್ತಿಯಲ್ಲಿ ಜಿಂಬಾಬ್ವೆ ವಿರುದ್ಧದ ಪಂದ್ಯದ ವೇಳೆ ಟಾಸ್​ ಮುಗಿಸಿ ಬ್ಯಾಟಿಂಗ್​ ಆಯ್ದುಕೊಂಡ ಬಳಿಕ ನಾಯಕ ಕಪಿಲ್​ ದೇವ್​ ಸ್ನಾನ ಮಾಡಲು ತೆರಳಿದ್ದರು. ಆದರೆ ಭಾರತ ಕೇವಲ 9 ರನ್​ಗಳಿಗೆ 4 ವಿಕೆಟ್​ ಕಳೆದುಕೊಂಡಿದ್ದರಿಂದ ಕಪಿಲ್​ ದೇವ್​ ಅವಸರದಿಂದ ಸ್ನಾನ ಮುಗಿಸಿ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಇಳಿದಿದ್ದರು. ಬಳಿಕ 17 ರನ್​ಗಳಿಗೆ 5 ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದರೂ ಕುಗ್ಗದೆ ಅಜೇಯ 175 ರನ್​ (138 ಎಸೆತ, 16 ಬೌಂಡರಿ, 6 ಸಿಕ್ಸರ್​) ಸಿಡಿಸುವ ಮೂಲಕ ಭಾರತ 266 ರನ್​ ಪೇರಿಸಲು ನೆರವಾಗಿದ್ದರು. ಜಿಂಬಾಬ್ವೆಯನ್ನು 235 ರನ್​ಗಳಿಗೆ ನಿಯಂತ್ರಿಸಿ ಭಾರತ ಗೆದ್ದಿದ್ದರಿಂದ ವಿಶ್ವಕಪ್​ ಗೆಲುವಿನ ಆಸೆ ಜೀವಂತ ಉಳಿದಿತ್ತು. ಇದು ಏಕದಿನ ಕ್ರಿಕೆಟ್​ನಲ್ಲಿ ಭಾರತ ಪರ ದಾಖಲಾದ ಮೊಟ್ಟಮೊದಲ ಶತಕವೂ ಆಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net