ಡೆಲ್ಲಿ ಕ್ಯಾಪಿಟಲ್ಸ್​ ಕ್ಯಾಪ್ಟನ್ ಕೆ.ಎಲ್​. ರಾಹುಲ್​​ ಅಲ್ಲ! ಅವರ ಜಾಗಕ್ಕೆ ಇವರೇ... ರಹಸ್ಯ ಬಿಚ್ಚಿಟ್ಟ ದಿನೇಶ್ ಕಾರ್ತಿಕ್​ | IPL 2025

ವಿಜಯವಾಣಿ - 2025-01-18T215936.815
Published on

IPL 2025: ಇದೇ ಮಾರ್ಚ್​ 21ರಿಂದ ಐಪಿಎಲ್ 2025ರ 18ನೇ ಆವೃತ್ತಿ ಆರಂಭವಾಗಲಿದ್ದು, ಮೇ 23ರಂದು ಫೈನಲ್ ಪಂದ್ಯ ನಡೆಯಲಿದೆ ಎಂದು ಬಿಸಿಸಿಐ ಅಧಿಕೃತವಾಗಿ ಘೋಷಿಸಿದೆ. ಇಂಡಿಯನ್ ಪ್ರೀಮಿಯರ್​ ಲೀಗ್ ಶುರುವಿನ ಮುನ್ಸೂಚನೆ ಸಿಕ್ಕಿದ್ದೇ ತಡ ಕ್ರಿಕೆಟ್ ಪ್ರೇಮಿಗಳಲ್ಲಿ ಉತ್ಸಾಹ ಹೆಚ್ಚಾಗಿದೆ. ತಮ್ಮ ನೆಚ್ಚಿನ ತಂಡವನ್ನು ಮೈದಾನದಲ್ಲಿ ಹುರಿದುಂಬಿಸಲು ತೀವ್ರ ಕಾತರ ವ್ಯಕ್ತಪಡಿಸುತ್ತಿರುವ ಫ್ರಾಂಚೈಸಿಯ ಅಭಿಮಾನಿಗಳಿಗೆ ಈಗ ಯಾರು 10 ಬಲಿಷ್ಠ ತಂಡಗಳ ಕ್ಯಾಪ್ಟನ್ ಆಗಿ ಟೀಮ್​ನ ಮುನ್ನಡೆಸಲಿದ್ದಾರೆ ಎಂಬ ಕುತೂಹಲ ಕೆರಳಿದೆ.

ಆಯ್ಕೆಯಲ್ಲಿ ಬದಲಾವಣೆ

ಸಿಎಸ್​ಕೆ, ಮುಂಬೈ ಇಂಡಿಯನ್ಸ್​, ಸನ್​ರೈಸರ್ಸ್​ ಹೈದರಾಬಾದ್​, ಪಂಜಾಬ್ ಕಿಂಗ್ಸ್​, ಗುಜರಾತ್ ಟೈಟನ್ಸ್, ಕೋಲ್ಕತ ನೈಟ್ ರೈಡರ್ಸ್​, ರಾಜಸ್ಥಾನ ರಾಯಲ್ಸ್​ ತಂಡಗಳಿಗೆ ಈಗಾಗಲೇ ಕ್ಯಾಪ್ಟನ್​ಗಳ ಹೆಸರು ಖಚಿತವಾಗಿವೆ. ಆದರೆ, ರಾಯಲ್ ಚಾಲೆಂಜರ್ಸ್​ ಬೆಂಗಳೂರು, ಲಖನೌ ಸೂಪರ್ ಜೈಂಟ್ಸ್​ ಮತ್ತು ಡೆಲ್ಲಿ ಕ್ಯಾಪಿಟಲ್ಸ್​ ಟೀಮ್​ಗಳ ನಾಯಕ ಆಯ್ಕೆಯಲ್ಲಿ ಬದಲಾವಣೆಯಿದೆ. ಅದರಲ್ಲೂ ಡೆಲ್ಲಿ ಪಡೆಗೆ ಕನ್ನಡಿಗೆ ಕೆ.ಎಲ್​. ರಾಹುಲ್ ಮತ್ತು ಆಲ್​ರೌಂಡರ್​ ಅಕ್ಸರ್​ ಪಟೇಲ್ ಕ್ಯಾಪ್ಟನ್​ ರೇಸ್​ನಲ್ಲಿದ್ದಾರೆ. ಇವರಿಬ್ಬರಲ್ಲಿ ಯಾರಿಗೆ ನಾಯಕ ಜವಾಬ್ದಾರಿಯನ್ನು ಮ್ಯಾನೇಜ್​ಮೆಂಟ್​ ಹಸ್ತಾಂತರಿಸಲಿದೆ ಎಂಬುದು ಗೊಂದಲ. ಈ ಕುರಿತು ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ದಿನೇಶ್​ ಕಾರ್ತಿಕ್​ ಪ್ರತಿಕ್ರಿಯಿಸಿದ್ದಾರೆ.

ಕ್ಯಾಪ್ಟನ್​ ಕೆ.ಎಲ್​. ರಾಹುಲ್

14 ಕೋಟಿ ರೂ.ಗೆ ಕೆ.ಎಲ್. ರಾಹುಲ್​ರನ್ನು ಹರಾಜಿನಲ್ಲಿ ಖರೀದಿಸಿದ ಡೆಲ್ಲಿ ಕ್ಯಾಪಿಟಲ್ಸ್​, ರಾಹುಲ್​ಗೆ ನಾಯಕನ ಜವಾಬ್ದಾರಿ ಕೊಡುವುದರ ಬಗ್ಗೆ ಗೊಂದಲವನ್ನು ಹೊಂದಿದೆ. ಈ ಕುರಿತಂತೆ ಮ್ಯಾನೇಜ್​ಮೆಂಟ್​ ಚರ್ಚೆಯಲ್ಲಿದೆ ಎಂದು ವರದಿಯಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ರಾಹುಲ್​ ನಾಯಕರಾಗಿ ಆಯ್ಕೆ ಆಗುವುದಿಲ್ಲ ಎಂದು ಡಿಕೆ ಹೇಳಿರುವುದು ಸದ್ಯ ಹಲವರಲ್ಲಿ ಅಚ್ಚರಿ ಮೂಡಿಸಿದೆ. 2025ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ಗೆ ಕೆ.ಎಲ್​. ರಾಹುಲ್​ ಬದಲಿಗೆ ಅಕ್ಸರ್​ ಪಟೇಲ್​ ಕ್ಯಾಪ್ಟನ್​ ಜವಾಬ್ದಾರಿ ಹೊರಲಿದ್ದಾರೆ ಎಂದು ದಿನೇಶ್​ ಕಾರ್ತಿಕ್​ ತಿಳಿಸಿದ್ದಾರೆ.

"ಇಂಗ್ಲೆಂಡ್​ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಗೆ ಭಾರತ ತಂಡದ ಉಪನಾಯಕರಾಗಿ ಆಯ್ಕೆ ಆಗಿರುವ ಅಕ್ಸರ್​ ಪಟೇಲ್​ಗೆ ಒಳ್ಳೆಯದಾಗಲಿ. ಇದು ಅವರಿಗೆ ಅತ್ಯುತ್ತಮ ಅವಕಾಶ. ನನಗೆ ಬಂದ ಮಾಹಿತಿಯ ಪ್ರಕಾರ, ನಾಯಕರಾಗಿ ಅಕ್ಸರ್​ ಪಟೇಲ್​ ಡೆಲ್ಲಿ ಕ್ಯಾಪಿಟಲ್ಸ್​ ತಂಡವನ್ನು ಮುನ್ನಡೆಸಲಿದ್ದಾರೆ. ಗುಜರಾತ್​ ತಂಡದಲ್ಲಿ ಇದ್ದಾಗಿನಿಂದಲೂ ಅವರು ತಮ್ಮ ಉತ್ತಮ ಪ್ರದರ್ಶನವನ್ನು ತೋರುತ್ತ ಬಂದಿದ್ದಾರೆ. ಶುಭವಾಗಲಿ ಅವರಿಗೆ" ಎಂದು ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net