

ನವದೆಹಲಿ: ಐಪಿಎಲ್ 14ನೇ ಆವೃತ್ತಿಯಲ್ಲಿ ಪಂಜಾಬ್ ಕಿಂಗ್ಸ್ ಪರ ಭರ್ಜರಿ ಬ್ಯಾಟಿಂಗ್ ನಿರ್ವಹಣೆ ತೋರಿರುವ ಕನ್ನಡಿಗ ಕೆಎಲ್ ರಾಹುಲ್ ಮುಂದಿನ ಆವೃತ್ತಿಯಲ್ಲೂ ಇದೇ ತಂಡದಲ್ಲಿರುವುದು ಅನುಮಾನವೆನಿಸಿದೆ. ರಾಹುಲ್‌ಗೆ ಈಗಾಗಲೆ ಕೆಲ ಫ್ರಾಂಚೈಸಿಗಳಿಂದ ಆಹ್ವಾನ ಬರುತ್ತಿದೆ. ಇದರಿಂದಾಗಿ ಅವರು ಪಂಜಾಬ್ ತಂಡವನ್ನು ತೊರೆಯುವ ಬಗ್ಗೆ ಚಿಂತಿಸುತ್ತಿದ್ದಾರೆ ಎನ್ನಲಾಗಿದೆ.
ಮುಂದಿನ ವರ್ಷದ ಐಪಿಎಲ್‌ಗೆ 2 ಹೊಸ ತಂಡಗಳು ಸೇರ್ಪಡೆಯಾಗುತ್ತಿದ್ದು, ಆಟಗಾರರ ರಿಟೇನ್ ನಿಯಮಾವಳಿಯನ್ನು ಬಿಸಿಸಿಐ ಇನ್ನಷ್ಟೇ ಪ್ರಕಟಿಸಬೇಕಾಗಿದೆ. ಅದಕ್ಕೆ ಮೊದಲೇ ರಾಹುಲ್ ಪಂಜಾಬ್ ತಂಡವನ್ನು ತೊರೆದು ಹರಾಜಿನ ಮೂಲಕ ಹೊಸ ತಂಡವನ್ನು ಸೇರಿಕೊಳ್ಳುವ ಬಗ್ಗೆ ಚಿಂತಿಸಿದ್ದಾರೆ.
ರಾಹುಲ್ ಕಳೆದ 2 ಆವೃತ್ತಿಗಳಿಂದ ಪಂಜಾಬ್ ತಂಡದ ಪರ ಬ್ಯಾಟಿಂಗ್‌ನಲ್ಲಿ ಮಿಂಚುತ್ತಿದ್ದರೂ, ನಾಯಕರಾಗಿ ತಂಡವನ್ನು ಪ್ಲೇಆಫ್ ಹಂತಕ್ಕೇರಿಸಲು ವಿಫಲರಾಗಿದ್ದಾರೆ. ಹೀಗಾಗಿ ಅವರು ಹೊರನಡೆಯಲು ಮುಂದಾದರೆ ಪಂಜಾಬ್ ತಂಡವೂ ಸಮ್ಮತಿಸುವ ಸಾಧ್ಯತೆ ಇದೆ.
ಇತ್ತ ವಿರಾಟ್ ಕೊಹ್ಲಿ ಆರ್‌ಸಿಬಿ ತಂಡದ ನಾಯಕತ್ವವನ್ನು ತ್ಯಜಿಸಿದ್ದು, ರಾಹುಲ್ ತವರು ತಂಡದ ನಾಯಕರಾಗಿ ಮರಳುವರೇ ಎಂಬ ಕುತೂಹಲವೂ ಅಭಿಮಾನಿಗಳಲ್ಲಿ ಮೂಡಿದೆ. ಆದರೆ ಹರಾಜಿನಲ್ಲಿ ಪಾಲ್ಗೊಂಡಾಗ ರಾಹುಲ್ ಅವರನ್ನು ಬಾಚಿಕೊಳ್ಳಬೇಕಾದರೆ ದೊಡ್ಡ ಮೊತ್ತದ ಬಿಡ್‌ಅನ್ನೇ ಸಲ್ಲಿಸಬೇಕಾಗುತ್ತದೆ. ಆದರೆ ಕೊಹ್ಲಿ ದೊಡ್ಡ ಮೊತ್ತಕ್ಕೆ ಆರ್‌ಸಿಬಿ ತಂಡದಲ್ಲಿ ಉಳಿದುಕೊಳ್ಳುವ ಕಾರಣ ರಾಹುಲ್ ಅವರನ್ನು ಸೆಳೆಯಲು ಬಜೆಟ್ ಕೊರತೆಯೂ ಎದುರಾಗಬಹುದು. ಹೀಗಾಗಿ ಟೂರ್ನಿಗೆ ಸೇರ್ಪಡೆಯಾಗುವ 2 ಹೊಸ ತಂಡಗಳು ದೊಡ್ಡ ಮೊತ್ತದ ಬಿಡ್ ಮೂಲಕ ರಾಹುಲ್‌ರನ್ನು ಖರೀದಿಸುವ ಸಾಧ್ಯತೆ ಹೆಚ್ಚಿದೆ.