

ಕೋಲ್ಕತ: ‘ಯಾವುದೇ ರಿಸ್ಕ್ ತೆಗೆದುಕೊಳ್ಳದಿರುವುದು ಅತಿದೊಡ್ಡ ರಿಸ್ಕ್’ ಎಂಬುದು ಮಾರ್ಕ್ ಜುಕರ್‌ಬರ್ಗ್ ಅವರ ಜನಪ್ರಿಯ ಹೇಳಿಕೆ. ಈ ಮಾತು ಕೆಎಲ್ ರಾಹುಲ್‌ಗೆ ಬುಧವಾರ ಹೆಚ್ಚು ಅನ್ವಯಿಸುವಂತಿತ್ತು. ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ 19ನೇ ಓವರ್ ತನಕ ಕ್ರೀಸ್‌ನಲ್ಲಿದ್ದ ರಾಹುಲ್ 58 ಎಸೆತಗಳಲ್ಲಿ 3 ಬೌಂಡರಿ, 5 ಸಿಕ್ಸರ್ ಸಹಿತ 79 ರನ್ ಗಳಿಸಿದರು. ಅಂದರೆ 136.2 ಸ್ಟ್ರೈಕ್‌ರೇಟ್‌ನಲ್ಲಿ ರನ್ ಗಳಿಸಿದ್ದರು. 208 ರನ್ ಮೊತ್ತದ ಚೇಸಿಂಗ್ ವೇಳೆ ಇದು ಅತ್ಯಂತ ನಿಧಾನಗತಿಯ ಆಟವಾಗಿದೆ ಎಂದು ಕ್ರಿಕೆಟ್ ಪ್ರೇಮಿಗಳು ಸಾಮಾಜಿಕ ಜಾಲತಾಣದಲ್ಲಿ ಟೀಕಿಸಿದ್ದಾರೆ.
ಪವರ್‌ಪ್ಲೇ ನಂತರದ 7 ಓವರ್‌ಗಳಲ್ಲಿ ರಾಹುಲ್ ಕೇವಲ 1 ಬೌಂಡರಿ ಬಾರಿಸಿದ್ದರು. ‘ರಾಹುಲ್ ತಂಡಕ್ಕಿಂತ ತಮಗಾಗಿ ಆಡಿದಂತಿತ್ತು’ ಎಂದು ದೂರಿದ್ದಾರೆ. ಕ್ರಿಕೆಟ್ ವಿಶ್ಲೇಷಕ ಸಂಜಯ್ ಮಂಜ್ರೇಕರ್ ಕೂಡ ರಾಹುಲ್ ಆಟವನ್ನು ಟೀಕಿಸಿದ್ದು, ‘ದೀರ್ಘಕಾಲ ಆಡುವುದಕ್ಕಿಂತ ವೇಗವಾಗಿ ಆಡುವುದು ಅಗತ್ಯವಾಗಿತ್ತು’ ಎಂದಿದ್ದಾರೆ. ‘ಪಂಜಾಬ್ ಕಿಂಗ್ಸ್ ತಂಡದಲ್ಲೂ ರಾಹುಲ್ ಇದೇ ರೀತಿ ಆಡುತ್ತಿದ್ದರು. ಆಗಲೂ ರನ್ ಚೇಸಿಂಗ್ ವೇಳೆ ತಂಡ ಕೆಲ ರನ್ ಕೊರತೆ ಎದುರಿಸುತ್ತಿತ್ತು. ಕೊಹ್ಲಿ, ಧೋನಿ ಅವರಂತಲ್ಲ. ರಾಹುಲ್ ನಾಯಕತ್ವದ ಜವಾಬ್ದಾರಿಯಿಂದ ಒತ್ತಡಕ್ಕೆ ಸಿಲುಕುತ್ತಾರೆ. ಸಹಜ ಆಟವಾಡುವುದನ್ನು ಮರೆಯುತ್ತಾರೆ’ ಎಂದು ಮಂಜ್ರೇಕರ್ ಹೇಳಿದ್ದಾರೆ.
ರಾಹುಲ್ ಟೂರ್ನಿಯಲ್ಲಿ ಮೊದಲು ಬ್ಯಾಟಿಂಗ್ ಮಾಡಿದ 8 ಇನಿಂಗ್ಸ್‌ಗಳಲ್ಲಿ 148.60ರ ಸ್ಟ್ರೈಕ್‌ರೇಟ್‌ನಲ್ಲಿ 425 ರನ್ ಗಳಿಸಿದ್ದರೆ, ಚೇಸಿಂಗ್ ಮಾಡಿದ 7 ಇನಿಂಗ್ಸ್‌ಗಳಲ್ಲಿ 113.01ರ ಸ್ಟ್ರೈಕ್‌ರೇಟ್‌ನಲ್ಲಿ 191 ರನ್‌ಗಳಷ್ಟೇ ಗಳಿಸಿದ್ದಾರೆ.
ಮೊದಲ ಓವರ್‌ನಲ್ಲೇ ಡಿಕಾಕ್ (6) ವಿಕೆಟ್ ಕಳೆದುಕೊಂಡ ಲಖನೌಗೆ ಕೆಎಲ್ ರಾಹುಲ್ (79) ಮತ್ತು ದೀಪಕ್ ಹೂಡಾ (45) 3ನೇ ವಿಕೆಟ್‌ಗೆ 61 ಎಸೆತಗಳಲ್ಲಿ 96 ರನ್ ಸೇರಿಸಿ ಚೇತರಿಕೆ ಒದಗಿಸಿದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಮಾರ್ಕಸ್ ಸ್ಟೋಯಿನಿಸ್ (9) ಮತ್ತು ಕೃನಾಲ್ ಪಾಂಡ್ಯ (0) ಕೈಕೊಟ್ಟರು. ಕೊನೇ 9 ಎಸೆತಗಳಲ್ಲಿ 28 ರನ್ ಬೇಕಿದ್ದಾಗ ರಾಹುಲ್ ಕೂಡ ಔಟ್ ಆಗುವುದರೊಂದಿಗೆ ಲಖನೌ ಸೋಲು ಖಚಿತಗೊಂಡಿತು.