ಲಖನೌ ಐಪಿಎಲ್ ತಂಡಕ್ಕೆ ಕನ್ನಡಿಗ ಕೆಎಲ್ ರಾಹುಲ್ ಸಾರಥ್ಯ?

kl rahul for web
Published on

ನವದೆಹಲಿ: ಕನ್ನಡಿಗ ಕೆಎಲ್ ರಾಹುಲ್, ಆಸ್ಟ್ರೇಲಿಯಾದ ಆಲ್ರೌಂಡರ್ ಮಾರ್ಕಸ್ ಸ್ಟೋಯಿನಿಸ್ ಮತ್ತು ಯುವ ಲೆಗ್ ಸ್ಪಿನ್ನರ್ ರವಿ ಬಿಷ್ಣೋಯಿ ಐಪಿಎಲ್ ಟೂರ್ನಿಗೆ ಹೊಸದಾಗಿ ಸೇರ್ಪಡೆಗೊಂಡಿರುವ ಲಖನೌ ತಂಡವನ್ನು ಕೂಡಿಕೊಂಡಿದ್ದಾರೆ. ಈ ಪೈಕಿ ಸ್ಟಾರ್ ಬ್ಯಾಟರ್ ರಾಹುಲ್, ತಂಡಕ್ಕೆ ನಾಯಕರಾಗಿ ನೇಮಕಗೊಳ್ಳುವ ನಿರೀಕ್ಷೆ ಇದೆ. ಫೆಬ್ರವರಿ 12 ಮತ್ತು 13ರಂದು ಬೆಂಗಳೂರಿನಲ್ಲಿ ನಡೆಯಲಿರುವ ಆಟಗಾರರ ಮೆಗಾ ಹರಾಜಿಗೂ ಮುನ್ನವೇ ಜನವರಿ 22ರೊಳಗೆ ಮೂವರು ಆಟಗಾರರನ್ನು ಆಯ್ದುಕೊಳ್ಳುವಂತೆ ಎರಡು ಹೊಸ ಫ್ರಾಂಚೈಸಿಗಳಿಗೆ ಬಿಸಿಸಿಐ ಸೂಚಿಸಿತ್ತು. ಇದರನ್ವಯ 29 ವರ್ಷದ ಕೆಎಲ್ ರಾಹುಲ್ 15 ಕೋಟಿ ರೂಪಾಯಿ, ಸ್ಟೋಯಿನಿಸ್ 11 ಕೋಟಿ ರೂ. ಹಾಗೂ ರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡದ ರವಿ ಬಿಷ್ಣೋಯಿ 4 ಕೋಟಿ ರೂ.ಗೆ ಲಖನೌ ತಂಡ ಸೇರಿದ್ದಾರೆ. ಕಳೆದ ಎರಡೂ ಅವಧಿಯಲ್ಲಿ ರಾಹುಲ್ ಪಂಜಾಬ್ ಕಿಂಗ್ಸ್ ತಂಡವನ್ನು ಮುನ್ನಡೆಸಿದ್ದರು. ಸ್ಟೋಯಿನಿಸ್, ಬಿಷ್ಣೋಯಿ ಕೂಡ ಈ ಹಿಂದೆ ಪಂಜಾಬ್ ಕಿಂಗ್ಸ್ ಆಟಗಾರರಾಗಿದ್ದರು.

ಪಂಜಾಬ್ ಫ್ರಾಂಚೈಸಿಯಲ್ಲಿ ಮುಂದುವರಿಯಲು ರಾಹುಲ್ ನಿರಾಸಕ್ತಿ ತೋರಿದ ಹಿನ್ನೆಲೆಯಲ್ಲಿ ಅವರನ್ನು ಬಿಡುಗಡೆ ಮಾಡಲಾಗಿತ್ತು. ಸ್ಟೋಯಿನಿಸ್ ಕಳೆದ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿದ್ದರು. ಸೋಮವಾರವಷ್ಟೇ ಅಹಮದಾಬಾದ್ ತಂಡ ಹಾರ್ದಿಕ್ ಪಾಂಡ್ಯ, ರಶೀದ್ ಖಾನ್ ಹಾಗೂ ಶುಭಮಾನ್ ಗಿಲ್‌ರನ್ನು ಅಂತಿಮಗೊಳಿಸಿತ್ತು.

ಕೆಎಲ್ ರಾಹುಲ್ ಐಪಿಎಲ್ ಜರ್ನಿ: 2013ರಲ್ಲಿ ಆರ್‌ಸಿಬಿ ಪರ ಐಪಿಎಲ್‌ಗೆ ಪದಾರ್ಪಣೆ ಮಾಡಿದ್ದ ರಾಹುಲ್, 2014ರಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ತಂಡಕ್ಕೆ ಸೇರ್ಪಡೆಗೊಂಡಿದ್ದರು. 2016ರಲ್ಲಿ ಮತ್ತೆ ರಾಹುಲ್ ಅವರನ್ನು ಆರ್‌ಸಿಬಿ ಖರೀದಿಸಿತ್ತು. ಎರಡು ವರ್ಷಗಳ ಬಳಿಕ 2018ರಲ್ಲಿ 11 ಕೋಟಿ ರೂ.ಗೆ ಪಂಜಾಬ್‌ಗೆ ಸೇರ್ಪಡೆಗೊಂಡಿದ್ದರು. ಕಳೆದ ಎರಡು ಆವೃತ್ತಿಗಳಿಂದ ತಂಡದ ನಾಯಕನಾಗಿದ್ದರು. 2020 ಹಾಗೂ 2021ರಲ್ಲಿ 600ಕ್ಕೂ ಹೆಚ್ಚು ರನ್ ಪೇರಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net