ಆ ನೋವಿಗೆ ಪ್ರತ್ಯುತ್ತರ... LSG ಮಾಲೀಕ ಮಾತನಾಡಲು ಪ್ರಯತ್ನಿಸಿದಾಗ ರಾಹುಲ್ ಏನ್​ ಮಾಡಿದ್ರೂ ನೋಡಿ! KL Rahul ​

KL Rahul
Published on

KL Rahul : ಡೆಲ್ಲಿ ಕ್ಯಾಪಿಟಲ್ಸ್​ ತಂಡವು ಪ್ರಸಕ್ತ 18ನೇ ಐಪಿಎಲ್ ಆವೃತ್ತಿಯಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದೆ. ಸತತ ಗೆಲುವುಗಳೊಂದಿಗೆ ಪ್ಲೇಆಫ್‌ಗೆ ಹತ್ತಿರವಾಗುತ್ತಿದೆ. ಅಷ್ಟೇ ಅಲ್ಲ ಬಹುತೇಕ ಖಚಿತವಾದಂತಿದೆ. ಮಂಗಳವಾರ (ಏಪ್ರಿಲ್​ 22) ಲಖನೌದ ಏಕಾನಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡವನ್ನು 8 ವಿಕೆಟ್‌ಗಳಿಂದ ಡೆಲ್ಲಿ ಕ್ಯಾಪಿಟಲ್ಸ್​​ ಸೋಲಿಸಿತು.

ಡೆಲ್ಲಿ ಕ್ಯಾಪಿಟಲ್ಸ್ ಗೆಲುವಿನಲ್ಲಿ ಕೆ.ಎಲ್. ರಾಹುಲ್ ಪ್ರಮುಖ ಪಾತ್ರ ವಹಿಸಿದರು. 160 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ಪರ, 42 ಎಸೆತಗಳಲ್ಲಿ 3 ಬೌಂಡರಿ ಮತ್ತು 3 ಸಿಕ್ಸರ್‌ಗಳೊಂದಿಗೆ 57 ರನ್ ಗಳಿಸಿ ರಾಹುಲ್​ ಅಜೇಯರಾಗಿ ಉಳಿದರು. ಈ ಪಂದ್ಯವನ್ನು ಗೆದ್ದ ನಂತರ ಲಖನೌ ಮಾಲೀಕ ಸಂಜೀವ್ ಗೋಯೆಂಕಾ ಅವರೊಂದಿಗೆ ಕೆ.ಎಲ್. ರಾಹುಲ್ ನಡೆದುಕೊಂಡ ರೀತಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ಕಳೆದ ಐಪಿಎಲ್ ಸೀಸನ್​ವರೆಗೆ ಕೆಎಲ್ ರಾಹುಲ್ ಲಖನೌ ಸೂಪರ್ ಜೈಂಟ್ಸ್ ಪರ ಆಡಿದ್ದರು ಎಂಬುದು ಎಲ್ಲರಿಗೂ ತಿಳಿದಿದೆ. ಅವರ ನಾಯಕತ್ವದಲ್ಲಿ ಲಖನೌ ಉತ್ತಮ ಪ್ರದರ್ಶನ ಸಹ ನೀಡಿತು. ಆದರೆ, ಕಳೆದ ಸೀಸನ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಲಖನೌ ತಂಡ ಭಾರೀ ಸೋಲನ್ನು ಅನುಭವಿಸಿತು. ಆಗ ನಾಯಕರಾಗಿದ್ದ ಕೆಎಲ್ ರಾಹುಲ್ ವಿರುದ್ಧ ಲಖನೌ ಮಾಲೀಕ ಸಂಜೀವ್ ಗೋಯೆಂಕಾ ಮೈದಾನದಲ್ಲಿ ತಮ್ಮ ಕೋಪವನ್ನು ವ್ಯಕ್ತಪಡಿಸಿದ್ದರು. ಇದಕ್ಕೆ ಸಂಬಂಧಿಸಿದ ಫೋಟೋಗಳು ಮತ್ತು ವಿಡಿಯೋಗಳು ವೈರಲ್ ಆಗುತ್ತಿದ್ದಂತೆ, ಗೋಯೆಂಕಾ ಅವರನ್ನು ಟೀಕಿಸಲಾಯಿತು.

ಟೀಕಿಸಿದ ಬಳಿಕವೂ ಗೋಯೆಂಕಾ ಅವರ ನಡವಳಿಕೆ ಬದಲಾಗಲಿಲ್ಲ. ಈ ಘಟನೆಗಳಿಂದ ತೀವ್ರವಾಗಿ ಬೇಸರಗೊಂಡಿದ್ದ ಕೆ.ಎಲ್. ರಾಹುಲ್​, ಲಕನೌ ತಂಡವನ್ನು ತೊರೆದರು. ಬಳಿಕ ಐಪಿಎಲ್​ ಮೆಗಾ ಹರಾಜಿನಲ್ಲಿ ಬರೋಬ್ಬರಿ 27 ಕೋಟಿ ರೂ. ಕೊಟ್ಟು ರಿಷಭ್​ ಪಂತ್ ಅವರನ್ನು ಲಖನೌ ಫ್ರಾಂಚೈಸಿ ಖರೀದಿ ಮಾಡಿತು. ಇತ್ತ ಕೆ.ಎಲ್​. ರಾಹುಲ್​ ಅವರನ್ನು 14 ಕೋಟಿಗೆ ಡೆಲ್ಲಿ ಕ್ಯಾಪಿಟಲ್ಸ್ ಖರೀದಿಸಿತು.

ಪ್ರಸಕ್ತ ಐಪಿಎಲ್​ ಸೀಸನ್​ನಲ್ಲಿ ಪಂತ್ ನಾಯಕತ್ವದಲ್ಲಿ ಲಖನೌ ತಂಡದ ಪ್ರದರ್ಶನ ತೀರಾ ಕಳಪೆಯಾಗಿದೆ. ಪಂತ್ ಬ್ಯಾಟ್ಸ್‌ಮನ್ ಆಗಿ ಶೋಚನೀಯವಾಗಿ ವಿಫಲರಾಗುತ್ತಿದ್ದಾರೆ. ಮತ್ತೊಂದೆಡೆ, ರಾಹುಲ್ ತಮ್ಮ ಅದ್ಭುತ ಇನ್ನಿಂಗ್ಸ್‌ನೊಂದಿಗೆ ದೆಹಲಿಯ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಲಖನೌ ವಿರುದ್ಧದ ಗೆಲುವಿನ ನಂತರ ಆಟಗಾರರ ಕೈಕುಲುಕಿ ಸಂವಹನ ನಡೆಸುವಾಗ, ಸಂಜೀವ್ ಗೋಯೆಂಕಾ ಮತ್ತು ಅವರ ಮಗ ಶಾಶ್ವತ್ ಗೋಯೆಂಕಾ ಸಹ ಮೈದಾನದಲ್ಲಿದ್ದರು. ರಾಹುಲ್ ಅವರಿಬ್ಬರ ಕೈಕುಲುಕಿ ಅಲ್ಲಿಂದ ಹೋಗುತ್ತಿದ್ದರು. ಆದರೆ, ಸಂಜೀವ್​ ಗೋಯೆಂಕಾ, ರಾಹುಲ್ ಅವರನ್ನು ತಡೆದು ಮಾತನಾಡಲು ಪ್ರಯತ್ನಿಸಿದರು. ಆದರೆ, ರಾಹುಲ್ ಅವರೊಂದಿಗೆ ಮಾತನಾಡಲು ಆಸಕ್ತಿ ತೋರಿಸಲಿಲ್ಲ. ಇದರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಕಳೆದ ವರ್ಷ ನಡೆದ ಘಟನೆಯನ್ನು ರಾಹುಲ್​ ಇನ್ನು ಮರೆತಿಲ್ಲ, ಸೇಡು ತೀರಿಸಿಕೊಂಡಿದ್ದಾರೆ ಎಂದು ವಿಡಿಯೋ ನೋಡಿದ ನೆಟ್ಟಿಗರು ಕಾಮೆಂಟ್​ ಮಾಡುತ್ತಿದ್ದಾರೆ. ರಾಹುಲ್ ಸರಿಯಾದ ಪಾಠ ಕಲಿಸಿದ್ದಾರೆ ಎಂದು ಹೇಳುತ್ತಿದ್ದಾರೆ. ಈ ವಿಡಿಯೋ ನೋಡಿ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್​ ಮೂಲಕ ನಮಗೆ ತಿಳಿಸಿ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net