

ಬೆಂಗಳೂರು: ಟೀಮ್ ಇಂಡಿಯಾದ ಸ್ಟಾರ್ ಓಪನಿಂಗ್ ಬ್ಯಾಟ್ಸ್ಮನ್, ವಿಕೆಟ್ ಕೀಪರ್ ಆಗಿರುವ ಕನ್ನಡಿಗ ಕೆ.ಎಲ್. ರಾಹುಲ್, ರೋಹಿತ್ ಶರ್ಮ ನಾಯಕತ್ವದಲ್ಲಿ ಟಿ20 ವಿಶ್ವಕಪ್ ಟೂರ್ನಿ ಹಾಗೂ ಇತ್ತೀಚೆಗಷ್ಟೇ ಮುಕ್ತಾಯಗೊಂಡ ಶ್ರೀಲಂಕಾ ಸರಣಿಯ ಭಾಗವಾಗಿ ತಂಡದಲ್ಲಿ ಪಡೆಯಬೇಕಿದ್ದ ಅವಕಾಶವನ್ನು ಕಳೆದುಕೊಂಡರು. ಇದು ಅವರ ಅಭಿಮಾನಿಗಳು ಹಾಗೂ ಕ್ರಿಕೆಟ್ ಫ್ಯಾನ್ಸ್ಗೆ ಭಾರೀ ಬೇಸರ ತಂದೊಡ್ಡಿತ್ತು. ಈ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪೋಸ್ಟ್ವೊಂದು ದೊಡ್ಡ ಆಘಾತವನ್ನೇ ನೀಡಿದ್ದು, ಕ್ರಿಕೆಟ್ ಲೋಕಕ್ಕೆ ರಾಹುಲ್ ನಿವೃತ್ತಿ ಘೋಷಿಸಲಿದ್ದಾರೆ ಎಂದು ಹೇಳಲಾಗಿದೆ.
"ನಾನು ವೃತ್ತಿಪರ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಲು ನಿರ್ಧರಿಸಿದ್ದೇನೆ. ಈ ನಿರ್ಧಾರವು ಸುಲಭವಲ್ಲ, ಏಕೆಂದರೆ ಕ್ರೀಡೆಯು ನನ್ನ ಜೀವನದಲ್ಲಿ ಅನೇಕ ವರ್ಷಗಳಿಂದ ಮಹತ್ವದ ಭಾಗವಾಗಿದೆ. ನನ್ನ ವೃತ್ತಿಜೀವನದುದ್ದಕ್ಕೂ ನನ್ನ ಕುಟುಂಬ, ಸ್ನೇಹಿತರು, ತಂಡದ ಸಹ ಆಟಗಾರರು ಮತ್ತು ಅಭಿಮಾನಿಗಳಿಂದ ಬೆಂಬಲ ಮತ್ತು ಪ್ರೋತ್ಸಾಹಕ್ಕಾಗಿ ನಾನು ಕೃತಜ್ಞನಾಗಿದ್ದೇನೆ. ಮೈದಾನದಲ್ಲಿ ಮತ್ತು ಹೊರಗೆ ನಾನು ಪಡೆದ ಅನುಭವ ಮತ್ತು ನೆನಪುಗಳು ನಿಜವಾಗಿಯೂ ಅಮೂಲ್ಯ. ಹಲವು ಪ್ರತಿಭಾವಂತ ವ್ಯಕ್ತಿಗಳ ಜತೆಗೆ ಆಡಿ, ನನ್ನ ದೇಶವನ್ನು ಪ್ರತಿನಿಧಿಸಿದ್ದಕ್ಕಾಗಿ ಹೆಮ್ಮೆಯಿದೆ.
"ಮುಂದಿರುವ ಹೊಸ ಅಧ್ಯಾಯದ ಬಗ್ಗೆ ನಾನು ಉತ್ಸುಕನಾಗಿದ್ದರೂ, ಆಟದಲ್ಲಿ ಕಳೆದ ಸಮಯವನ್ನು ನಾನು ಯಾವಾಗಲೂ ಪ್ರೀತಿಸುವೆ ಹಾಗೂ ಜೀವಿಸುವೆ. ಈ ಅದ್ಭುತ ಪ್ರಯಾಣದ ಭಾಗವಾಗಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು" ಎಂದು ಬರೆದುಕೊಂಡಿರುವ ಪೋಸ್ಟ್ ಸದ್ಯ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಈ ವಿಷಯ ವ್ಯಾಪಕವಾಗಿ ಹರಿದಾಡುತ್ತಿದ್ದಂತೆ ಅನೇಕರು ಕೆ.ಎಲ್. ರಾಹುಲ್ಗೆ ತಮ್ಮ ನಿರ್ಧಾರವನ್ನು ಬದಲಿಸುವಂತೆ ಒತ್ತಾಯಿಸಿದ್ದಾರೆ. ಇನ್ನು ಕೆಲವರು ದಯವಿಟ್ಟು ಕ್ರಿಕೆಟ್ ಬಿಡಬೇಡಿ, ನಿಮಗೆ ಒಳ್ಳೆಯ ಅವಕಾಶಗಳು ಸನ್ನಿಹಿತದಲ್ಲಿವೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ಈ ಫೇಕ್ ಸುದ್ದಿಗಳ ನಡುವೆಯೇ ಅಭಿಮಾನಿಗಳಿಗೆ ಅಧಿಕೃತ ಪೋಸ್ಟ್ ಹಂಚಿಕೊಂಡ ಕೆ.ಎಲ್. ರಾಹುಲ್, "ಒಂದು ಮಹತ್ವದ ವಿಷಯವನ್ನು ಘೋಷಿಸಬೇಕಿದೆ. ನಿರೀಕ್ಷಿಸಿರಿ..." ಎಂದು ಬರೆದುಕೊಂಡಿದ್ದಾರೆ. ಸದ್ಯ ರಾಹುಲ್ ಮಾಡಿರುವ ಈ ಪೋಸ್ಟ್ ಕೊಂಚ ಸಮಾಧಾನ ತಂದರೂ ಸಹ ಇಲ್ಲಿಯೂ ಕುತೂಹಲ ಅಡಗಿದೆ. ಅಸಲಿಗೆ ಕನ್ನಡಿಗ ನಿವೃತ್ತಿ ವಿಷಯವನ್ನೇ ದೊಡ್ಡ ಘೋಷಣೆ ಎಂದು ಹೇಳಿದ್ದಾರೆಯೇ? ಎಂಬ ಪ್ರಶ್ನೆ ಸದ್ಯ ನೋಡುಗರಲ್ಲಿ ಬೆಂಬಿಡದಂತೆ ಕಾಡುವಂತೆ ಮಾಡಿದೆ,(ಏಜೆನ್ಸೀಸ್).