ಆರ್​ಸಿಬಿ ಸೇರ್ತಾರೆ ಎಂಬ ಸುದ್ದಿ ನಡುವೆಯೇ ಕುತೂಹಲ ಮೂಡಿಸಿದ ಕೆ.ಎಲ್. ರಾಹುಲ್​ ನಡೆ!

KL Rahul
Published on

ಕಲ್ಕತ್ತಾ: ವಿಶ್ವದ ಮಿಲಿಯನ್​ ಡಾಲರ್​ ಟೂರ್ನಿ ಎಂದೇ ಹೆಸರುವಾಸಿಯಾಘಿರುವ ಐಪಿಎಲ್​ ಶುರುವಾಗುವುದಕ್ಕೆ ಹಲವು ತಿಂಗಳುಗಳು ಬಾಕಿ ಉಳಿದಿದ್ದು,  18ನೇ ಆವೃತ್ತಿಯ ಕುರಿತಾದ ಸುದ್ದಿಗಳು ಕ್ರೀಡಾ ವಲಯದಲ್ಲಿ ಸಖತ್​ ಸೌಂಡ್​ ಮಾಡುತ್ತಿವೆ. ಐಪಿಎಲ್​ಗೆ ಸಂಬಂಧಿಸಿದಂತೆ ಕನ್ನಡಿಗೆ ಕೆ.ಎಲ್. ರಾಹುಲ್​ ಕುರಿತಾದ ಸುದ್ದಿಗಳು ಸಖತ್ತಾಗಿ ಹರಿದಾಡುತ್ತಿವೆ. ಏಕೆಂದರೆ ಅವರು ಮುಂಬರುವ ಟೂರ್ನಿಯಲ್ಲಿ ಆರ್​ಸಿಬಿ ಪರ ಆಡಲಿದ್ದಾರೆ ಎಂದು ಹೇಳಲಾಗಿದ್ದು, ಅಭಿಮಾನಿಗಳು ಇದು ನೆರವೇರಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದಾರೆ. ಆದರೆ, ಅಭಿಮಾನಿಗಳ ಕೋರಿಕೆಗೆ ಟ್ವಿಸ್ಟ್​ ಸಿಕ್ಕಿದ್ದು, ಯಾಕೋ ನೆರವೇರುವಂತೆ ಕಾಣುತ್ತಿಲ್ಲ.

ಸದ್ಯ ಕೇಳಿ ಬಂದಿರುವ ಮಾಹಿತಿ ಪ್ರಕಾರ 2025ರಲ್ಲಿ ನಡೆಯುವ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಕನ್ನಡಿಗ, ಲಖನೌ ಸೂಪರ್​ಜೈಂಟ್ಸ್​ ತಂಡದ ನಾಯಕ ಕೆ.ಎಲ್. ರಾಹುಲ್​ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ವ್ಯಾಪಕವಾಗಿ ಹರಿದಾಡುತ್ತಿದೆ. ಈ ಬಗ್ಗೆ ಖಾಸಗಿ ಸುದ್ದಿಸಂಸ್ಥೆಯೊಂದು ವರದಿ ಮಾಡಿದ್ದು, ರಾಹುಲ್​ ಲಖನೌ ತೊರೆದು ಆರ್​ಸಿಬಿ ಸೇರಲಿದ್ದಾರೆ ಎಂದು ಹೇಳಲಾಗಿದೆ. ರಾಹುಲ್​ ತಮ್ಮ ಹೆಸರನ್ನು ಆಕ್ಷನ್​ಗೆ ನೀಡಿದ್ದಾರೆ ಎಂದು ವರದಿ ಮಾಡಿದೆ.

ರಾಹುಲ್​ ಅವರ ಈ ನಿರ್ಧಾರಕ್ಕೆ ಮುಖ್ಯ ಕಾರಣ ಲಖನೌ ಸೂಪರ್​ಜೈಂಟ್ಸ್​ ತಂಡದ ಮಾಲೀಕ ಸಂಜೀವ್​ ಗೋಯೆಂಕಾ ಎಂದು ಹೇಳಲಾಗಿದೆ. ಏಕೆಂದರೆ ಸನ್​ರೈಸರ್ಸ್​ ವಿರುದ್ಧದ ಪಂದ್ಯದಲ್ಲಿ ಲಖನೌ ಹೀನಾಯವಾಗಿ ಸೋಲುಂಡಿತ್ತು. ಪಂದ್ಯದ ಬಳಿಕ ರಾಹುಲ್​ ಅವರನ್ನು ತಂಡದ ಮಾಲೀಕ ಸಂಜೀವ್​ ಮೈದಾನದಲ್ಲೇ ತರಾಟೆಗೆ ತೆಗೆದುಕೊಂಡಿದ್ದು. ಈ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿ ಸಖತ್ ವೈರಲ್ ಆಗಿತ್ತು. ಇದೀಗ ಈ ಸುದ್ದಿ ಮತ್ತೆ ಮುನ್ನೆಲೆಗೆ ಬಂದಿದ್ದು, ರಾಹುಲ್​ ಲಖನೌ ತೊರೆದು ಆರ್​ಸಿಬಿ ಸೇರಲಿದ್ದಾರೆ ಎಂಬ ಸುದ್ದಿ ಕ್ರೀಡಾ ವಲಯದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ಇದೀಗ ಈ ಸುದ್ದಿಗೆ ಹೊಸ ಟ್ವಿಸ್ಟ್​ ಸಿಕ್ಕಿದ್ದು, ರಾಹುಲ್​ ಎಲ್​ಎಸ್​ಜಿಯಲ್ಲೇ ಉಳಿಯಲಿದ್ದಾರೆ ಎಂದು ಹೇಳಲಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಎಲ್​ಎಸ್​ಜಿ ಮಾಲೀಕ ಸಂಜೀವ್​ ಗೋಯೆಂಕಾ ರಾಹುಲ್​ರನ್ನು ತಮ್ಮ ಕವೇರಿಗೆ ಕರೆಸಿ ಮಾತುಕತೆ ನಡೆಸಿರುವುದು. ಕಲ್ಕತ್ತಾದ ಅಲಿಪುರ್‌ನ ತಮ್ಮ ಕಚೇರಿಯಲ್ಲಿ ಮೂರು ಗಂಟೆಗಳ ಕಾಲ ಮಾತುಕತೆ ನಡೆಸಿದ ಅವರು ರಾಹುಲ್ ಅವರನ್ನು ಲಕ್ನೋ ತಂಡದಲ್ಲಿಯೇ ಮುಂದುವರೆಯುವಂತೆ ಕೇಳಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಈ ಮಾತುಕತೆಯ ಬೆನ್ನಲ್ಲೇ ಕೆಎಲ್ ರಾಹುಲ್ ಅವರ ಮುಂದಿನ ನಡೆಯೇನು ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಏಕೆಂದರೆ ಸಂಜೀವ್ ಗೊಯೆಂಕಾ ರಾಹುಲ್ ಅವರನ್ನು ಕರೆಸಿಕೊಂಡು ಮಾತನಾಡಬೇಕಿದ್ದರೆ, ಇಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಸ್ಪಷ್ಟ. ಅದರಲ್ಲೂ ಕೆಎಲ್​ಆರ್​ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ತೊರೆಯಲು ಮುಂದಾಗಿದ್ದು, ಇದೇ ಕಾರಣದಿಂದಾಗಿ ಅವರ ಮನವೊಲಿಸಲು ಇದೀಗ ಎಲ್​ಎಸ್​ಜಿ ಮಾಲೀಕರು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಇನ್ನು ಭೇಟಿಯ ವೇಳೆ ತಮ್ಮನ್ನು ತಂಡದಲ್ಲೇ ಉಳಿಸಿಕೊಳ್ಳಲು ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿ ಬಯಸುತ್ತಿರುವುದಾಗಿ ಸಂಜೀವ್ ಗೊಯೆಂಕಾ ತಿಳಿಸಿದ್ದಾರೆ. ಇದಾಗ್ಯೂ ಕೆಎಲ್ ರಾಹುಲ್ ಅಂತಿಮ ನಿರ್ಧಾರವನ್ನು ತಿಳಿಸಿಲ್ಲ. ಹೀಗಾಗಿ ರಾಹುಲ್​​ ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲೇ ಉಳಿಯಲಿದ್ದಾರಾ ಅಥವಾ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರಾ ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net