ದುಲೀಪ್ ಟ್ರೋಫಿಯಲ್ಲಿ ಕನ್ನಡಿಗ ರಾಹುಲ್ ಹೋರಾಟ ವ್ಯರ್ಥ: ಮಿಂಚಿದ ಆರ್‌ಸಿಬಿ ವೇಗಿಗಳು

New-Project-3-1
Published on

ಬೆಂಗಳೂರು: ಕನ್ನಡಿಗ ಕೆಎಲ್ ರಾಹುಲ್ (57 ರನ್, 121 ಎಸೆತ, 7 ಬೌಂಡರಿ) ಅರ್ಧಶತಕ ಹಾಗೂ ಆಕಾಶ್ ದೀಪ್ (43 ರನ್, 42 ಎಸೆತ, 3 ಬೌಂಡರಿ, 4 ಸಿಕ್ಸರ್) ಪ್ರತಿರೋಧದ ನಡುವೆಯೂ ಶುಭಮಾನ್ ಗಿಲ್ ಸಾರಥ್ಯದ ಭಾರತ ಎ ತಂಡ ಪ್ರತಿಷ್ಠಿತ ದುಲೀಪ್ ಟ್ರೋಫಿ ದೇಶೀಯ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ಬಿ ತಂಡ ಎದುರು 74 ರನ್‌ಗಳಿಂದ ಸೋಲು ಅನುಭವಿಸಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಸಂಘಟಿತ ನಿರ್ವಹಣೆ ತೋರಿದ ಅಭಿಮನ್ಯು ಈಶ್ವರನ್ ಪಡೆ ಗೆಲುವಿನೊಂದಿಗೆ ಆರು ಅಂಕ ಕಲೆಹಾಕಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ಮುಕ್ತಾಯಗೊಂಡ ಪಂದ್ಯದಲ್ಲಿ 6 ವಿಕೆಟ್‌ಗೆ 150 ರನ್‌ಗಳಿಂದ ದ್ವಿತೀಯ ಇನಿಂಗ್ಸ್ ಮುಂದುವರಿಸಿದ ಭಾರತ ಬಿ, ವೇಗಿ ಆಕಾಶ್ ದೀಪ್ (56ಕ್ಕೆ 5) ದಾಳಿಗೆ ಕುಸಿದು 42 ಓವರ್‌ಗಳಲ್ಲಿ 184 ರನ್‌ಗಳಿಗೆ ಆಲೌಟ್ ಆಯಿತು. 274 ರನ್ ಸವಾಲಿಗೆ ಪ್ರತಿಯಾಗಿ 2ನೇ ಸರದಿ ಆರಂಭಿಸಿದ ಭಾರತ ಎ, ಬ್ಯಾಟರ್‌ಗಳ ವೈಲ್ಯದಿಂದಾಗಿ 53 ಓವರ್‌ಗಳಲ್ಲಿ 198 ರನ್‌ಗಳಿಗೆ ಸರ್ವಪತನ ಕಂಡಿತು. ಆರ್‌ಸಿಬಿ ವೇಗಿಗಳಾದ ಯಶ್ ದಯಾಳ್ 3 ವಿಕೆಟ್ ಹಾಗೂ ಆಕಾಶ್ ದೀಪ್ ಐದು ವಿಕೆಟ್ ಕಬಳಿಸಿಮಿಂಚಿದರು.

ಭಾರತ ಬಿ: 231 ಹಾಗೂ 184 (ವಾಷಿಂಗ್ಟನ್ 9, ನವದೀಪ್ 13, ಯಶ್ ದಯಾಳ್ 16, ಆಕಾಶ್ ದೀಪ್ 56ಕ್ಕೆ 5, ಖಲೀಲ್ 69ಕ್ಕೆ 3). ಭಾರತ ಎ: 231 ಹಾಗೂ 53 ಓವರ್‌ಗಳಲ್ಲಿ 198 (ಮಯಾಂಕ್ 3, ಗಿಲ್ 21, ರಿಯಾನ್ 31, ರಾಹುಲ್ 57, ದುಬೆ 14, ಕುಲದೀಪ್ 14, ಆಕಾಶ್ ದೀಪ್ 43,ಯಶ್ ದಯಾಳ್ 50ಕ್ಕೆ 3, ನವದೀಪ್ 41ಕ್ಕೆ 2). ಪಂದ್ಯಶ್ರೇಷ್ಠ: ಮುಶೀರ್ ಖಾನ್.

ರಾಹುಲ್ ಆಟ ವ್ಯರ್ಥ: ದಿನದ ಮೊದಲ ಅವಧಿಯಲ್ಲಿ ಭಾರತ ಬಿ ತಂಡವನ್ನು ಕಟ್ಟಿಹಾಕಿದ ಶುಭಮಾನ್ ಪಡೆ ಅಂತಿಮ ದಿನ ಗೆಲುವಿಗೆ 274 ರನ್‌ಗಳ ಗುರಿ ಪಡೆಯಿತು. ಚೇಸಿಂಗ್‌ಗೆ ಇಳಿದ ಭಾರತ ಎ ಕನ್ನಡಿಗ ಮಯಾಂಕ್ ಅವರ್ಗಾಲ್‌ರನ್ನು (3) ಬೇಗನೆ ಕಳೆದುಕೊಂಡಿತು. ಗಿಲ್ ಹಾಗೂ ರಿಯಾನ್ ಪರಾಗ್ 2ನೇ ವಿಕೆಟ್‌ಗೆ 48 ರನ್ ಪೇರಿಸಿ ಬಲ ತುಂಬಿದರು. ಭೋಜನ ವಿರಾಮದ ವೇಳೆ 75 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡ ಎ ತಂಡ ಸಂಕಷ್ಟಕ್ಕೆ ಸಿಲುಕಿತು. ವಿರಾಮದ ಬಳಿಕ ಮೊದಲ ಎಸೆತದಲ್ಲಿ ತನುಷ್ ಕೋಟ್ಯಾನ್ (0) ಔಟಾದರು.

ಆಗ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದ ಕೆಎಲ್ ರಾಹುಲ್ ಮೂರು ಗಂಟೆಗಳ ಕಾಲ ಕ್ರೀಸ್‌ನಲ್ಲಿ ನಿಂತು ಏಕಾಂಗಿ ಹೋರಾಟ ನಡೆಸಿದರು. 55 ಎಸೆತಗಳಲ್ಲಿ ಒಂದು ಬೌಂಡರಿಗಳಿಸದ ರಾಹುಲ್, 99 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಪ್ರತಿರೋಧ ತೋರಿದರು. ರಾಹುಲ್ ನಿರ್ಗಮನ ಬಳಿಕ ಕೆಳಕ್ರಮಾಂಕ ಕುಸಿತ ಕಂಡಿತು. ಕೊನೆಯಲ್ಲಿ ಆಕಾದೀಪ್ ಸಿಂಗ್ ಬಿರುಸಿನ ಆಟ ಸೋಲಿನ ಅಂತರ ತಗ್ಗಿಸಲಷ್ಟೇ ಶಕ್ತವಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net