RCB ವಿರುದ್ಧ ಕನ್ನಡಿಗನ ಸಂಭ್ರಮ; ಬ್ಲಾಕ್​ಬಸ್ಟರ್​ ಕನ್ನಡ ಸಿನಿಮಾದ ದೃಶ್ಯ ನೆನಪಿಸಿದ ಕೆ.ಎಲ್​. ರಾಹುಲ್​ | KL Rahul

ವಿಜಯವಾಣಿ - 2025-04-11T153406.854
Published on

KL Rahul: ಈ ಬಾರಿ ಐಪಿಎಲ್ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುತ್ತಿರುವ ಕನ್ನಡಿಗ ಕೆ.ಎಲ್​. ರಾಹುಲ್​, ನಿನ್ನೆ (ಏ.10) ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್​ಸಿಬಿ ಎದುರು ಅಬ್ಬರಿಸಿದ್ದು, ಅಭಿಮಾನಿಗಳ ಕಣ್ಣಿನಲ್ಲಿ ಈಗಲೂ ಕಟ್ಟಿದಂತಿದೆ. ಆರ್​ಸಿಬಿ ನೀಡಿದ್ದ ಸಾಧಾರಣ ಗುರಿಯನ್ನು ಬಹಳ ಸುಲಭವಾಗಿ ಬೆನ್ನಟ್ಟಿದ ಡಿಸಿ ಪಡೆಗೆ, ಬ್ಯಾಟರ್​ ಕೆ.ಎಲ್​. ರಾಹುಲ್​ ಅವರ ಅಜೇಯ 93 ರನ್​ಗಳ ಸ್ಫೋಟಿಂಗ್ ಬ್ಯಾಟಿಂಗ್​ ತಂಡಕ್ಕೆ ಭರ್ಜರಿ ಜಯ ತಂದುಕೊಟ್ಟಿತು. ಈ ಪಂದ್ಯದಲ್ಲಿ ಸೋಲಿಗೆ ಶರಣಾಗಬೇಕಿದ್ದ ಡಿಸಿಗೆ ಉಸಿರು ಕೊಟ್ಟಿದ್ದೇ ಕನ್ನಡಿಗ ಎಂಬುದು ಕ್ರಿಕೆಟ್​ ಅಭಿಮಾನಿಗಳ ಮೆಚ್ಚುಗೆ, ಸಂತಸ.

ಪಂದ್ಯದ ವಿವರ

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 163 ರನ್ ಗಳಿಸಿತು. ಬೆಂಗಳೂರು ಪರ ಫಿಲ್​ ಸಾಲ್ಟ್​ (37 ರನ್​ 17 ಎಸೆತ 4 ಬೌಂಡರಿ, 3 ಸಿಕ್ಸರ್) ಮತ್ತು ಟಿಮ್ ಡೇವಿಡ್ (ಅಜೇಯ 37 ರನ್​ 20 ಎಸೆತ, 2 ಬೌಂಡರಿ, 4 ಸಿಕ್ಸರ್) ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ವಿರಾಟ್ ಕೊಹ್ಲಿ (22) ಮತ್ತು ರಜತ್ ಪಾಟಿದಾರ್ (25) ಸಾಧಾರಣ ಪ್ರದರ್ಶನ ನೀಡಿದರು. ಪಡಿಕ್ಕಲ್ (1), ಲಿಯಾಮ್ ಲಿವಿಂಗ್‌ಸ್ಟೋನ್ (4), ಮತ್ತು ಜಿತೇಶ್ ಶರ್ಮಾ (3) ವಿಫಲರಾದರು. ದೆಹಲಿ ಬೌಲರ್‌ಗಳ ಪರ ವಿಪ್ರಜ್ ನಿಗಮ್ ಮತ್ತು ಕುಲದೀಪ್ ಯಾದವ್ ತಲಾ ಎರಡು ವಿಕೆಟ್ ಪಡೆದರು. ಮುಖೇಶ್ ಕುಮಾರ್ ಮತ್ತು ಮೋಹಿತ್ ಶರ್ಮಾ ತಲಾ ಒಂದು ವಿಕೆಟ್ ಪಡೆದರು.

ಆರ್​ಸಿಬಿ ನೀಡಿದ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್​, ಕೆ.ಎಲ್. ರಾಹುಲ್ ( ಅಜೇಯ 93 ರನ್​, 53 ಎಸೆತ, 7 ಬೌಂಡರಿ, 6 ಸಿಕ್ಸರ್) ಸ್ಫೋಟಕ ಬ್ಯಾಟಿಂಗ್​ ಪ್ರದರ್ಶನದಿಂದಾಗಿ 17.5 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ ಗುರಿಯನ್ನು ತಲುಪಿತು. ರಾಹುಲ್ ಜತೆಗೆ, ಟ್ರಿಸ್ಟಾನ್ ಸ್ಟಬ್ಸ್ (ಅಜೇಯ 38 ರನ್​, 23 ಎಸೆತ 4 ಬೌಂಡರಿ, 1 ಸಿಕ್ಸರ್) ಕೂಡ ಉತ್ತಮ ಪ್ರದರ್ಶನ ನೀಡಿದರು. ಇನ್ನು ಆರ್​ಸಿಬಿ ವಿರುದ್ಧ ತನ್ನ ತವರಿನಲ್ಲೇ ಪಂದ್ಯ ಗೆದ್ದ ಕನ್ನಡಿಗ, ವೃತ್ತಾಕಾರ ಬರೆಯುವ ಮೂಲಕ ಇದು ನನ್ನ ಜಾಗ ಎಂಬುದನ್ನು ಸಂಭ್ರಮದಲ್ಲಿ ಸಾರಿದರು. ಬಹುತೇಕರಿಗೆ ಇದು ಅವರ ಖುಷಿಯನ್ನು ವ್ಯಕ್ತಪಡಿಸುತ್ತಿರುವ ರೀತಿ ಎಂದೆನಿಸಿತು. ಆದರೆ, ಇದರ ಹಿಂದೆ ಅವರ ಇಷ್ಟದ ಸಿನಿಮಾ ಕಥೆಯಿದೆ ಎಂಬುದು ಗೊತ್ತಿರಲಿಲ್ಲ.

'ಕಾಂತಾರ' ಕ್ಲೈಮ್ಯಾಕ್ಸ್​

ಪಂದ್ಯವನ್ನು ಬಹಳ ಸ್ಟೈಲಿಶಿಂಗ್ ಆಗಿ ಮುಗಿಸಿದ ಕೆ.ಎಲ್​. ರಾಹುಲ್​, ಗೆದ್ದ ಖುಷಿಯಲ್ಲಿ ಕ್ರೀಸ್​ ಬಳಿ ನಿಂತು ತಮ್ಮ ಬ್ಯಾಟ್​ನಿಂದ ವೃತ್ತಾಕಾರದಲ್ಲಿ ಬರೆದು, ಇದು ನನ್ನ ತವರು, ನನ್ನೂರು, ನನ್ನದು ಎಂಬುದನ್ನು ಒತ್ತಿ ಹೇಳಿದರು. ಆರಂಭದಲ್ಲಿ ರಾಹುಲ್​ ಮಾಡಿದ್ದು ಒಂದು ಸಂಭ್ರಮದ ರೂಪ ಎನ್ನಲಾಗಿತ್ತು. ಆದರೆ, ಗೆಲುವಿನ ಬಗ್ಗೆ ಅವರನ್ನೇ ಮಾತನಾಡಿಸಿದಾಗ ಇದು ಕಾಂತಾರ ಚಿತ್ರದ ಕ್ಲೈಮ್ಯಾಕ್ಸ್​ ಎಂಬುದು ತಿಳಿಯಿತು.

'ಕಾಂತಾರ' ಬಗ್ಗೆ ಕನ್ನಡಿಗನ ಮಾತು

"ಈ ಜಾಗ ನನಗೆ ಬಹಳ ಅಚ್ಚುಮೆಚ್ಚು. ಬಹಳ ವಿಶೇಷವಾದ ಸ್ಥಾನವಿದೆ. ಹೌದು, ಆ ಸಂಭ್ರಮ ನನ್ನ ನೆಚ್ಚಿನ ಕಾಂತಾರ ಚಿತ್ರದ್ದು. ಈ ಊರು ನಾನು ಆಡಿ, ಬೆಳೆದ ಜಾಗ. ಅವರಿಗೆ ನೆನಪಿಸಿದೆ, ಇದು ನನ್ನ ಸ್ಥಳ ಅಂತ" ಎಂದು ಹೇಳಿದರು. ಈ ವಿಡಿಯೋ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net