

KL Rahul: ಈ ಬಾರಿ ಐಪಿಎಲ್ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುತ್ತಿರುವ ಕನ್ನಡಿಗ ಕೆ.ಎಲ್. ರಾಹುಲ್, ನಿನ್ನೆ (ಏ.10) ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ಸಿಬಿ ಎದುರು ಅಬ್ಬರಿಸಿದ್ದು, ಅಭಿಮಾನಿಗಳ ಕಣ್ಣಿನಲ್ಲಿ ಈಗಲೂ ಕಟ್ಟಿದಂತಿದೆ. ಆರ್ಸಿಬಿ ನೀಡಿದ್ದ ಸಾಧಾರಣ ಗುರಿಯನ್ನು ಬಹಳ ಸುಲಭವಾಗಿ ಬೆನ್ನಟ್ಟಿದ ಡಿಸಿ ಪಡೆಗೆ, ಬ್ಯಾಟರ್ ಕೆ.ಎಲ್. ರಾಹುಲ್ ಅವರ ಅಜೇಯ 93 ರನ್ಗಳ ಸ್ಫೋಟಿಂಗ್ ಬ್ಯಾಟಿಂಗ್ ತಂಡಕ್ಕೆ ಭರ್ಜರಿ ಜಯ ತಂದುಕೊಟ್ಟಿತು. ಈ ಪಂದ್ಯದಲ್ಲಿ ಸೋಲಿಗೆ ಶರಣಾಗಬೇಕಿದ್ದ ಡಿಸಿಗೆ ಉಸಿರು ಕೊಟ್ಟಿದ್ದೇ ಕನ್ನಡಿಗ ಎಂಬುದು ಕ್ರಿಕೆಟ್ ಅಭಿಮಾನಿಗಳ ಮೆಚ್ಚುಗೆ.
ಆರ್ಸಿಬಿ ನೀಡಿದ್ದ 164 ರನ್ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ಗೆ ಆರಂಭಿಕರಾದ ಫಾಫ್ ಡು ಪ್ಲೆಸಿಸ್ ಮತ್ತು ಜೇಕ್ ಫ್ರೆಸರ್ ಉತ್ತಮ ಓಪನಿಂಗ್ ಕೊಡುಗೆ ನೀಡುವಲ್ಲಿ ವಿಫಲರಾದರು. ಇವರಿಬ್ಬರ ನಂತರದಲ್ಲಿ ಬಂದ ಅಭಿಷೇಕ್ ಪೋರೆಲ್ ಕೂಡ 7 ರನ್ಗೆ ಪೆವಿಲಿಯನ್ನತ್ತ ಮುಖ ಮಾಡಿದರು. ಇನ್ನೇನು ಪಂದ್ಯ ವಶಪಡಿಸಿಕೊಂಡೆವು ಎಂಬ ಸಂಭ್ರಮದ ಛಾಯೆ ಆರ್ಸಿಬಿ ಆಟಗಾರರ ಮುಖದಲ್ಲಿ ಮೂಡುವ ಮೊದಲೇ ಕೆ.ಎಲ್. ರಾಹುಲ್ ಅವರ ಸ್ಫೋಟಕ ಬ್ಯಾಟಿಂಗ್ ಅದೆನ್ನೆಲ ಅಳಿಸಿ ಹಾಕಿತು. ತವರಿನಲ್ಲೇ ಅಬ್ಬರಿಸುವ ಮೂಲಕ ಕನ್ನಡಿಗ ಮಿಂಚಿದ ರೀತಿಗೆ ಕನ್ನಡಿಗರು ಫಿದಾ ಆದರು.
ಇನ್ನು ಪಂದ್ಯವನ್ನು ರೋಚಕವಾಗಿ ಗೆದ್ದು ಬೀಗಿದ ರಾಹುಲ್, ತಮ್ಮ ಬ್ಯಾಟ್ನಿಂದ ಇದು ನನ್ನ ನೆಲ. ನನ್ನ ತವರೂರು ಎಂಬುದನ್ನು ಸಾರಿದರು. ಬೆಂಗಳೂರಿನ ಹುಡುಗ ಆಡಿದ ರೀತಿಗೆ ಸಂತಸಪಟ್ಟ ಕನ್ನಡಿಗರು, ಕೆ.ಎಲ್. ರಾಹುಲ್ ಗೆಲುವಿನ ಸಂಭ್ರಮದಲ್ಲಿ ಜತೆಯಾದರು. ಆರ್ಸಿಬಿ ಸೋತರೂ ಗೆದ್ದಿದ್ದು ಅಲ್ಲೊಬ್ಬ ಕನ್ನಡಿಗನೇ ಎಂಬ ಸಾರ್ಥಕತೆ ಫ್ರಾಂಚೈಸಿಯ ಅಭಿಮಾನಿಗಳಲ್ಲಿ ಮೂಡಿತು. ಮಗಳು ಹುಟ್ಟಿದ್ದೇ ತಡ ರಾಹುಲ್ ಅವರ ಅದೃಷ್ಟವೇ ಬದಲಾಗಿದೆ. ಅಥಿಯಾ ಶೆಟ್ಟಿ ಮತ್ತು ರಾಹುಲ್ ದಂಪತಿಗೆ ಹೆಣ್ಣುಮಗು ಜನನ ಅವರಿಗೆ ಅದೃಷ್ಟದ ಭಂಡಾರವನ್ನು ಹೊತ್ತು ತಂದಿದೆ ಎಂದೇ ಹೇಳಬಹುದು.