

ಬ್ರಿಸ್ಬೇನ್: ಕನ್ನಡಿಗ ಕೆಎಲ್ ರಾಹುಲ್ (84 ರನ್, 139 ಎಸೆತ, 8 ಬೌಂಡರಿ), ಆಲ್ರೌಂಡರ್ ರವೀಂದ್‌ರ ಜಡೇಜಾ (77 ರನ್, 123 ಎಸೆತ, 7 ಬೌಂಡರಿ, 1 ಸಿಕ್ಸರ್) ಮತ್ತು ಬಾಲಂಗೋಚಿಗಳಾದ ಆಕಾಶ್‌ದೀಪ್ (27*ರನ್, 31 ಎಸೆತ, 2 ಬೌಂಡರಿ, 1 ಸಿಕ್ಸರ್), ಉಪನಾಯಕ ಜಸ್‌ಪ್ರೀತ್ ಬುಮ್ರಾ (10*ರನ್, 27 ಎಸೆತ, 1 ಸಿಕ್ಸರ್) ಸಾಹಸದಿಂದ ಭಾರತ ತಂಡ ಗಾಬಾದಲ್ಲಿ ಮಂಗಳವಾರ ಫಾಲೋಆನ್‌ನಿಂದ ಪಾರಾಯಿತು. ಇದರೊಂದಿಗೆ ಬಾರ್ಡರ್-ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮಳೆಬಾಧಿತ 3ನೇ ಪಂದ್ಯ ಡ್ರಾದತ್ತ ಮುಖಮಾಡಿದೆ.
ನಾಲ್ಕನೇ ದಿನ ಬೆಳಗ್ಗೆ 4 ವಿಕೆಟ್‌ಗೆ 51 ರನ್‌ಗಳಿಂದ ಆಟ ಆರಂಭಿಸಿದ ಭಾರತ ತಂಡ, ಮತ್ತೆ ಎದುರಾದ ಮಳೆ ಅಡಚಣೆಗಳ ನಡುವೆ ಮಂದಬೆಳಕಿನಿಂದಾಗಿ ದಿನದಾಟ ಬೇಗನೆ ಮುಕ್ತಾಯಗೊಂಡಾಗ 9 ವಿಕೆಟ್‌ಗೆ 252 ರನ್ ಪೇರಿಸಿದ್ದು, ಇನ್ನೂ 193 ರನ್ ಹಿನ್ನಡೆಯಲ್ಲಿದೆ. ಆದರೆ ಭಾರತ ತಂಡವೀಗ ಫಾಲೋಆನ್‌ನಿಂದ ಪಾರಾಗಿರುವುದರಿಂದ ಕೊನೇ ದಿನದಾಟದಲ್ಲಿ ಸೋಲು ಭೀತಿ ಇಲ್ಲದಂತಾಗಿದೆ. ಆಸೀಸ್ ಮತ್ತೆ ಬ್ಯಾಟಿಂಗ್‌ಗೆ ಇಳಿಯಬೇಕಿರುವುದರಿಂದ ಮತ್ತು ಪಂದ್ಯದ ಕೊನೇ ದಿನವೂ ಮಳೆ ಭೀತಿ ಇರುವುದರಿಂದ ಪಂದ್ಯ ಬಹುತೇಕ ಡ್ರಾಗೊಳ್ಳುವುದೇ ಖಚಿತವೆನಿಸಿದೆ. ಹ್ಯಾಸಲ್‌ವುಡ್ ಗಾಯದಿಂದಾಗಿ ಓರ್ವ ಬೌಲರ್ ಕೊರತೆ ಹೊಂದಿರುವ ಆಸೀಸ್, ಪಂದ್ಯದಲ್ಲಿ ಭಾರತಕ್ಕೆ 350ಕ್ಕಿಂತ ಕಡಿಮೆ ಮೊತ್ತದ ಸವಾಲು ನೀಡುವ ರಿಸ್ಕ್ ತೆಗೆದುಕೊಳ್ಳುವ ಸಾಧ್ಯತೆ ಇಲ್ಲ.
ಆಕಾಶ್‌ದೀಪ್-ಬುಮ್ರಾ ಕೊನೇ ವಿಕೆಟ್‌ಗೆ ರೋಚಕ ಹೋರಾಟ: ಭಾರತದ 9ನೇ ವಿಕೆಟ್ ರೂಪದಲ್ಲಿ ರವೀಂದ್ರ ಜಡೇಜಾ ಔಟ್ ಆದಾಗ ಫಾಲೋಆನ್‌ನಿಂದ ಪಾರಾಗಲು ಇನ್ನೂ 33 ರನ್ ಅಗತ್ಯವಿತ್ತು. ಆಗ ಜತೆಗೂಡಿದ ನಂ. 10 ಮತ್ತು ನಂ. 11 ಬ್ಯಾಟರ್‌ಗಳಾದ ಬುಮ್ರಾ-ಆಕಾಶ್‌ದೀಪ್ ಆಸೀಸ್ ದಾಳಿಯನ್ನು ದಿಟ್ಟವಾಗಿ ಎದುರಿಸಿ ನಿಂತು ಮುರಿಯದ ಕೊನೇ ವಿಕೆಟ್‌ಗೆ 54 ಎಸೆತಗಳಲ್ಲಿ 39 ರನ್ ಸೇರಿಸಿ ಫಾಲೋಆನ್ ತಪ್ಪಿಸಿದರು.
ಈ ಜತೆಯಾಟದ ವೇಳೆ ಭಾರತದ ತಂಡದ ಡ್ರೆಸ್ಸಿಂಗ್ ರೂಮ್ ಮತ್ತು ಪ್ರೇಕ್ಷಕರ ಗ್ಯಾಲರಿಯಲ್ಲಿ ರೋಚಕ ಕಾದಾಟದ ವಾತಾವರಣ ಸೃಷ್ಟಿಯಾಗಿತ್ತು. ಕಮ್ಮಿನ್ಸ್ ಎಸೆತದಲ್ಲಿ ಆಕಾಶ್‌ದೀಪ್ ಗಲ್ಲಿ ಫೀಲ್ಡರ್ ತಲೆಮೇಲಿನಿಂದ ಬೌಂಡರಿ ಬಾರಿಸಿದಾಗ ಭಾರತ 246 ರನ್ ಗಳಿಸಿ ಫಾಲೋಆನ್ ತಪ್ಪಿಸಿಕೊಂಡಿತು. ಕಳೆದ 13 ವರ್ಷಗಳಿಂದ ಫಾಲೋಆನ್‌ಗೆ ಸಿಲುಕದ ದಾಖಲೆಯನ್ನು ಭಾರತ ಕಾಯ್ದುಕೊಂಡಿತು. ಆಗ ಡ್ರೆಸ್ಸಿಂಗ್ ರೂಮ್‌ನಲ್ಲಿ ವಿರಾಟ್ ಕೊಹ್ಲಿ ಕೋಚ್ ಗೌತಮ್ ಗಂಭೀರ್ ಮತ್ತು ನಾಯಕ ರೋಹಿತ್ ಶರ್ಮಗೆ ಹೈೈವ್ ನೀಡಿ ಸಂಭ್ರಮಿಸಿದರು. ನಂತರದಲ್ಲಿ ಆಕಾಶ್‌ದೀಪ್ ಮಿಡ್‌ವಿಕೆಟ್ ಕಡೆಯಿಂದ ಆಕರ್ಷಕ ಸಿಕ್ಸರ್ ಬಾರಿಸಿ ಗಮನಸೆಳೆದರು.