

ಕೋಲ್ಕತ: ಪ್ಲೇಆಫ್ ರೇಸ್ನಲ್ಲಿ ಉಳಿಯಲು ಗೆಲುವಿನ ಹಂಬಲದಲ್ಲಿರುವ ಹಾಲಿ ಚಾಂಪಿಯನ್ ಕೋಲ್ಕತ ನೈಟ್ರೈಡರ್ಸ್ ಮತ್ತು ಗೆಲುವಿನ ಹಳಿಗೆ ಮರಳುವ ತವಕದಲ್ಲಿರುವ ಪಂಜಾಬ್ ಕಿಂಗ್ಸ್ ತಂಡಗಳು ಐಪಿಎಲ್ 18ನೇ ಆವೃತ್ತಿಯಲ್ಲಿ ಶನಿವಾರ ಮುಖಾಮುಖಿ ಆಗಲಿವೆ. ಉಭಯ ತಂಡಗಳ ಮೊದಲ ಮುಖಾಮುಖಿಯಲ್ಲಿ ಪಂಜಾಬ್ ಕಿಂಗ್ಸ್ ತಂಡ 111 ರನ್ಗಳನ್ನು ರಸಿಕೊಂಡು ಬೀಗಿತ್ತು. ಇದಕ್ಕೆ ತವರಿನ ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ಸೇಡು ತೀರಿಸಿಕೊಳ್ಳುವುದು ಕೆಕೆಆರ್ ಗುರಿಯಾಗಿದೆ. ಶ್ರೇಯಸ್ ಅಯ್ಯರ್ ತನ್ನ ಮಾಜಿ ತಂಡದ ಎದುರು ಮತ್ತೊಂದು ಗೆಲುವಿನ ಹುರುಪಿನಲ್ಲಿದ್ದಾರೆ.
ಕೆಕೆಆರ್ಗೆ ಕಳೆದ 2 ಪಂದ್ಯಗಳಲ್ಲಿ ಬ್ಯಾಟಿಂಗ್ ವಿಭಾಗವೇ ಕೈಕೊಟ್ಟಿದೆ. ಗುಜರಾತ್ ಎದುರು ತವರಿನಲ್ಲೇ 39 ರನ್ಗಳಿಂದ ಸೋತಿದ್ದ ಅಜಿಂಕ್ಯ ರಹಾನೆ ಪಡೆ ಗೆಲುವಿನ ಹಳಿಗೆ ಮರಳುವ ಒತ್ತಡದಲ್ಲಿದೆ. ವೆಂಕಟೇಶ್ ಅಯ್ಯರ್, ರಿಂಕು ಸಿಂಗ್, ರಮಣ್ದೀಪ್ ಸಿಂಗ್, ಆಂಡ್ರೆ ರಸೆಲ್ ವೈಲ್ಯ ಕೆಕೆಆರ್ಗೆ ದೊಡ್ಡ ಹೊಡೆತ ನೀಡಿದೆ. ಇದರಿಂದ ಕೆರಿಬಿಯನ್ ಆಲ್ರೌಂಡರ್ ರೋವ್ಮನ್ ಪೊವೆಲ್ಗೆ ಕೆಕೆಆರ್ ಈ ಬಾರಿ ಅವಕಾಶ ಕಲ್ಪಿಸುವ ನಿರೀಕ್ಷೆ ಇದೆ. ಅಂಗಕೃಷ್ ರುವಂಶಿಗೆ ಕೆಕೆಆರ್ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಡ್ತಿ ನೀಡಬೇಕಾದ ಅಗತ್ಯವಿದೆ. ಮುಲ್ಲನ್ಪುರದಲ್ಲಿ ಅರ್ಷದೀಪ್, ಯಜುವೇಂದ್ರ ಚಾಹಲ್ ಚಾಹಲ್ ದಾಳಿಗೆ ನಲುಗಿದ್ದ ಕೆಕೆಆರ್ ಈಡನ್ನಲ್ಲಿ ತಿರುಗೇಟು ನೀಡಬೇಕಾಗಿದೆ.
ಈಡನ್ಗೆ ಶ್ರೇಯಸ್ ರಿರ್ಟನ್
ಕಳೆದ ವರ್ಷ ಕೆಕೆಆರ್ ನಾಯಕರಾಗಿ ಪ್ರಶಸ್ತಿ ಗೆದ್ದುಕೊಡುವ ಮೂಲಕ ದಶಕದ ಪ್ರಶಸ್ತಿ ಬರ ನೀಗಿಸಿದ್ದ ಶ್ರೇಯಸ್ ಅಯ್ಯರ್, ಈ ಬಾರಿ ಈಡನ್ ಗಾರ್ಡನ್ಸ್ ಅಂಗಣದಲ್ಲಿ ಪ್ರವಾಸಿ ತಂಡದ ನಾಯಕರಾಗಿ ಕಣಕ್ಕಿಳಿಯಬೆಕಾಗಿದೆ. ಕೆಕೆಆರ್ ತಂಡ ತನ್ನನ್ನು ರಿಟೇನ್ ಮಾಡಿಕೊಳ್ಳದ ಬೇಸರದ ನಡುವೆ ಅವರೀಗ ಪಂಜಾಬ್ ನಾಯಕರಾಗಿ ಯಶಸ್ಸಿನ ಹಾದಿಯಲ್ಲಿ ಮುಂದುವರಿದಿದ್ದಾರೆ. ಕಳೆದ ಪಂದ್ಯದಲ್ಲಿ ಆರ್ಸಿಬಿ ಎದುರು ಬ್ಯಾಟಿಂಗ್ ವಿಭಾಗದ ನೀರಸ ನಿರ್ವಹಣೆಯಿಂದ ಸೋತಿದ್ದ ಪಂಜಾಬ್ ಮತ್ತೆ ಗೆಲುವಿನ ಹಳಿ ಏರುವ ಹಂಬಲದಲ್ಲಿದೆ. ಪ್ರಮುಖವಾಗಿ ವಿದೇಶಿ ಆಟಗಾರರ ನೀರಸ ನಿರ್ವಹಣೆ ಪಂಜಾಬ್ಗೆ ಹಿನ್ನಡೆ ಎನಿಸಿದೆ.
ಪ್ಲೇಆಫ್ ಲೆಕ್ಕಾಚಾರ...
ಕೆಕೆಆರ್ ತಂಡ ಇದುವರೆಗೆ ಆಡಿರುವ 8 ಪಂದ್ಯಗಳಲ್ಲಿ 3ರಲ್ಲಷ್ಟೇ ಗೆದ್ದು, 5ರಲ್ಲಿ ಸೋತಿದೆ. ಇದರಿಂದ 6 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ಪ್ಲೇಆಫ್ಗೇರಲು ರಹಾನೆ ಪಡೆಗೆ ಉಳಿದ 6 ಪಂದ್ಯಗಳಲ್ಲಿ ಕನಿಷ್ಠ 5 ಗೆಲುವಿನ ಅಗತ್ಯವಿದೆ. ಕೊನೇ 5 ಪಂದ್ಯಗಳಲ್ಲಿ ಡಿಸಿ, ಆರ್ಆರ್, ಸಿಎಸ್ಕೆ, ಎಸ್ಆರ್ಎಚ್, ಆರ್ಸಿಬಿ ಸವಾಲು ಎದುರಾಗಲಿದೆ. ಮತ್ತೊಂದೆಡೆ ಪಂಜಾಬ್ ಇದುವರೆಗೆ ಆಡಿರುವ 8 ಪಂದ್ಯಗಳಲ್ಲಿ 5ರಲ್ಲಿ ಗೆದ್ದು, 3 ಸೋಲಿನೊಂದಿಗೆ ಕೆಕೆಆರ್ಗೆ ವ್ಯತಿರಿಕ್ತವಾದ ಫಲಿತಾಂಶವನ್ನು ಕಂಡಿದೆ. ಅಂಕಪಟ್ಟಿಯಲ್ಲಿ ಸದ್ಯ 5ನೇ ಸ್ಥಾನದಲ್ಲಿರುವ ಶ್ರೇಯಸ್ ಪಡೆ ಈ ಪಂದ್ಯ ಗೆದ್ದರೆ ಅಗ್ರ 4ರೊಳಗೆ ಪ್ರವೇಶಿಸುವ ಅವಕಾಶ ಹೊಂದಿದೆ. ಪ್ಲೇಆಫ್ಗೇರಲು ಪಂಜಾಬ್ಗೆ ಕೊನೇ 6 ಪಂದ್ಯಗಳಲ್ಲಿ 3 ಗೆಲುವಿನ ಅಗತ್ಯವಿದೆ. ಜತೆಗೆ ರನ್ರೇಟ್ ಸುಧಾರಿಸಿಕೊಂಡರೆ ಉತ್ತಮ. ಕೊನೇ 5 ಪಂದ್ಯಗಳಲ್ಲಿ ಸಿಎಸ್ಕೆ, ಎಲ್ಎಸ್ಜಿ, ಡಿಸಿ, ಎಂಐ ಮತ್ತು ಆರ್ಆರ್ ಎದುರು ಆಡಲಿದೆ.
ಮುಖಾಮುಖಿ: 34
ಕೆಕೆಆರ್: 21
ಪಂಜಾಬ್ 13:
ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್ಸ್ಟಾರ್.
ಕೆಕೆಆರ್ಗೆ ಪಿಚ್ ಹಿನ್ನಡೆ
ಆರ್ಸಿಬಿ ತಂಡದಂತೆ ಕೆಕೆಆರ್ ಕೂಡ ಈ ಬಾರಿ ತವರಿನ ಪಿಚ್ಅನ್ನೇ ಅರ್ಥಮಾಡಿಕೊಳ್ಳುವಲ್ಲಿ ಎಡವುತ್ತಿದೆ. ಈಡನ್ ಪಿಚ್ ಕ್ಯುರೇಟರ್ ಸುಜನ್ ಮುಖರ್ಜಿ ಬಳಿ ಸ್ಪಿನ್ ಸ್ನೇಹಿ ಪಿಚ್ಗೆ ಕೆಕೆಆರ್ ಬೇಡಿಕೆ ಇಟ್ಟಿದ್ದರೂ, ಅದಕ್ಕೆ ಅವರು ಸೂಕ್ತವಾಗಿ ಸ್ಪಂದಿಸಿಲ್ಲ. ಹೀಗಾಗಿ ಕೆಕೆಆರ್ ತವರಿನಲ್ಲಿ ಆಡಿದ ಮೊದಲ 4 ಪಂದ್ಯಗಳಲ್ಲಿ 1ರಲ್ಲಿ ಮಾತ್ರ ಗೆದ್ದು, 3ರಲ್ಲಿ ಸೋತಿದೆ. ಸುನೀಲ್ ನಾರಾಯಣ್ ಈಡನ್ನಲ್ಲಿ ಈ ಬಾರಿ 2 ವಿಕೆಟ್ ಮಾತ್ರ ಪಡೆದಿದ್ದರೆ, ವರುಣ್ ಚಕ್ರವರ್ತಿ 4 ವಿಕೆಟ್ ಗಳಿಸಿದ್ದಾರೆ. ಮೊಯಿನ್ ಅಲಿ ಒಂದೂ ವಿಕೆಟ್ ಪಡೆದಿಲ್ಲ.