ಐಪಿಎಲ್ ಜಾಕ್‌ಪಾಟ್ ಬೆನ್ನಲ್ಲೇ ಶ್ರೇಯಸ್ ಅಯ್ಯರ್‌ಗೆ ಒಲಿಯಿತು ಕೆಕೆಆರ್ ಸಾರಥ್ಯ

kkr web
Published on

ಕೋಲ್ಕತ: ಐಪಿಎಲ್ ಆಟಗಾರರ ಹರಾಜಿನಲ್ಲಿ 12.25 ಕೋಟಿ ರೂ.ಗೆ ಖರೀದಿಸಲ್ಪಟ್ಟ ಬ್ಯಾಟರ್ ಶ್ರೇಯಸ್ ಅಯ್ಯರ್ ಅವರನ್ನು ನಿರೀಕ್ಷೆಯಂತೆಯೇ ಕೋಲ್ಕತ ನೈಟ್‌ರೈಡರ್ಸ್‌ ತಂಡದ ಹೊಸ ನಾಯಕರನ್ನಾಗಿ ಬುಧವಾರ ನೇಮಿಸಲಾಗಿದೆ.

2020ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕರಾಗಿ ಫೈನಲ್‌ಗೇರಿಸಿದ್ದ ಶ್ರೇಯಸ್, ಗಾಯದಿಂದಾಗಿ 2021ರ ಟೂರ್ನಿಗೆ ಅಲಭ್ಯರಾದಾಗ ನಾಯಕತ್ವ ಕಳೆದುಕೊಂಡಿದ್ದರು. ಕೆಕೆಆರ್ ತಂಡದಲ್ಲಿ ಇವೊಯಿನ್ ಮಾರ್ಗನ್ ಅವರಿಂದ ತೆರವಾದ ಹುದ್ದೆಯನ್ನು ಶ್ರೇಯಸ್ ತುಂಬಲಿದ್ದಾರೆ. ‘ಕೆಕೆಆರ್ ತಂಡ ಮುನ್ನಡೆಸುವ ಅವಕಾಶ ಲಭಿಸಿದ್ದು ವಿಶೇಷ ಗೌರವವೆನಿಸಿದೆ. ಪ್ರತಿಭಾನ್ವಿತ ತಂಡವನ್ನು ಮುನ್ನಡೆಸಲು ಕಾತರದಿಂದಿದ್ದೇನೆ’ ಎಂದು ಶ್ರೇಯಸ್ ಹೇಳಿದ್ದಾರೆ.

ಶ್ರೇಯಸ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುವ ವಿಶ್ವಾಸವಿದೆ ಎಂದು ಮುಖ್ಯ ಕೋಚ್ ಬ್ರೆಂಡನ್ ಮೆಕ್ಕಲಂ ಮತ್ತು ಫ್ರಾಂಚೈಸಿ ಸಿಇಒ ವೆಂಕಿ ಮೈಸೂರು ಹೇಳಿದ್ದಾರೆ. ಮುಂಬೈ ಆಟಗಾರ ಶ್ರೇಯಸ್ ಕೆಕೆಆರ್ ತಂಡದ 6ನೇ ನಾಯಕರಾಗಿದ್ದಾರೆ. ಸೌರವ್ ಗಂಗೂಲಿ (2008-10), ಬ್ರೆಂಡನ್ ಮೆಕ್ಕಲಂ (2009), ಗೌತಮ್ ಗಂಭೀರ್ (2011-17), ದಿನೇಶ್ ಕಾರ್ತಿಕ್ (2018-20), ಇವೊಯಿನ್ ಮಾರ್ಗನ್ (2020-21) ಹಿಂದಿನ ನಾಯಕರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net