ಇಂದು ಕೆಕೆಆರ್-ಸನ್‌ರೈಸರ್ಸ್‌

kkr and srh for web
Published on

ಚೆನ್ನೈ: ಸ್ಥಿರ ನಿರ್ವಹಣೆಗೆ ಹೆಸರಾಗಿರುವ ಸನ್‌ರೈಸರ್ಸ್‌ ಹೈದರಾಬಾದ್ ಹಾಗೂ ಎರಡು ಬಾರಿಯ ಚಾಂಪಿಯನ್ ಕೋಲ್ಕತ ನೈಟ್‌ರೈಡರ್ಸ್‌ ತಂಡಗಳು ಐಪಿಎಲ್-14ರ 3ನೇ ಲೀಗ್ ಪಂದ್ಯದಲ್ಲಿ ಭಾನುವಾರ ಎದುರಾಗಲಿವೆ. ಶುಕ್ರವಾರವಷ್ಟೇ ಆರ್‌ಸಿಬಿ-ಮುಂಬೈ ಇಂಡಿಯನ್ಸ್ ನಡುವೆ ರೋಚಕ ಕಾಳಗಕ್ಕೆ ಸಾಕ್ಷಿಯಾಗಿದ್ದ ಚೆಪಾಕ್‌ನ ಎಂಎ ಚಿದಂಬರಂ ಸ್ಟೇಡಿಯಂ ಮತ್ತೊಂದು ಹಣಾಹಣಿಗೆ ವೇದಿಕೆಯಾಗಲಿದೆ. ಕಳೆದ ಆವೃತ್ತಿಯಲ್ಲಿ ಸನ್‌ರೈಸರ್ಸ್‌ ಹಾಗೂ ಆರ್‌ಸಿಬಿ ಉತ್ತಮ ರನ್‌ರೇಟ್ ಹೊಂದಿದ್ದರಿಂದ ಕೂದಲೆಳೆ ಅಂತರದಲ್ಲಿ ಕೆಕೆಆರ್ ತಂಡ ಪ್ಲೇಆಫ್ ಹಂತಕ್ಕೇರಲು ವಿಫಲವಾಗಿತ್ತು. 2019ರ ಏಕದಿನ ವಿಶ್ವಕಪ್ ವಿಜೇತ ಇಂಗ್ಲೆಂಡ್ ತಂಡದ ನಾಯಕ ಇವೊಯಿನ್ ಮಾರ್ಗನ್ ಸಾರಥ್ಯದ ಕೆಕೆಆರ್, ಗೌತಮ್ ಗಂಭೀರ್ ನಾಯಕತ್ವದಲ್ಲಿ ತೋರಿದ್ದ ಉತ್ತಮ ನಿರ್ವಹಣೆಯನ್ನೇ ಮರುಕಳಿಸುವ ಕನಸಿನಲ್ಲಿದೆ. ಕಳೆದ ವರ್ಷದ ಆವೃತ್ತಿಯಿಂದ ಹೆಚ್ಚಿನ ಬದಲಾವಣೆಯನ್ನೇನೂ ಕಾಣದಿರುವ ಸನ್‌ರೈಸರ್ಸ್‌ ತಂಡ ಡೇವಿಡ್ ವಾರ್ನರ್ ನಾಯಕತ್ವದಲ್ಲಿ 2016ರ ಬಳಿಕ ಮತ್ತೊಮ್ಮೆ ಪ್ರಶಸ್ತಿಗೆ ಮುತ್ತಿಕ್ಕುವ ಹಂಬಲದಲ್ಲಿದೆ.

*ಕೆಕೆಆರ್‌ಗೆ ಯುವಕರ ಬಲ

2012 ಹಾಗೂ 2014ರಲ್ಲಿ ಗೌತಮ್ ಗಂಭೀರ್ ನಾಯಕತ್ವದಲ್ಲಿ ಟ್ರೋಫಿ ಜಯಿಸಿರುವ ಕೆಕೆಆರ್, ಇತ್ತೀಚಿನ ಲೀಗ್‌ಗಳಲ್ಲಿ ಉತ್ತಮ ನಿರ್ವಹಣೆ ನೀಡಲು ವಿಲವಾಗುತ್ತಿದೆ. ಇದೀಗ ಮಾರ್ಗನ್ ಪೂರ್ಣಪ್ರಮಾಣದ ನಾಯಕತ್ವದಡಿಯಲ್ಲಿ ಹೊಸ ಹುರುಪಿನೊಂದಿಗೆ ಸಜ್ಜಾಗಿದೆ. ಆರಂಭಿಕ ಶುಭಮಾನ್ ಗಿಲ್, ರಾಹುಲ್ ತ್ರಿಪಾಠಿ, ನಿತೀಶ್ ರಾಣಾ, ಅನುಭವಿ ದಿನೇಶ್ ಕಾರ್ತಿಕ್ ಬ್ಯಾಟಿಂಗ್ ವಿಭಾಗದ ಬಲವಾಗಿದ್ದಾರೆ. ತಂಡದ ಬೆಸ್ಟ್ ಫಿನಿಷರ್ ಎನಿಸಿಕೊಂಡಿದ್ದ ಆಂಡ್ರೆ ರಸೆಲ್ ಕಳೆದ ಆವೃತ್ತಿಯಲ್ಲಿ ನೀರಸ ನಿರ್ವಹಣೆಯಿಂದ ನಿರಾಸೆ ಮೂಡಿಸಿದ್ದರು. ಶಕೀಬ್ ಅಲ್ ಹಸನ್ ಸೇರ್ಪಡೆಯಿಂದ ತಂಡಕ್ಕೆ ಮತ್ತಷ್ಟು ಬಲಬಂದಿದೆ. ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಮಿಂಚಿದ್ದ ಕನ್ನಡಿಗ ಪ್ರಸಿದ್ಧ ಕೃಷ್ಣ, ಪ್ಯಾಟ್ ಕಮ್ಮಿನ್ಸ್ ವೇಗದ ದಾಳಿಯ ನೇತೃತ್ವ ವಹಿಸಿದ್ದರೆ, ಮಿಸ್ಟ್ರಿ ಸ್ಪಿನ್ನರ್ ವರುಣ್ ಚಕ್ರವರ್ತಿ ಆಡುವುದು ಇನ್ನೂ ಖಚಿತವಾಗಿಲ್ಲ. 40 ವರ್ಷದ ಹರ್ಭಜನ್ ಸಿಂಗ್ ಸೇರ್ಪಡೆಯಿಂದ ತಂಡದ ಸ್ಪಿನ್ ವಿಭಾಗದ ಬಲ ಹೆಚ್ಚಿದೆ.

*ಸನ್ ಶುಭಾರಂಭದ ನಿರೀಕ್ಷೆ

ಬಲಿಷ್ಠ ವಿದೇಶಿ ಆಟಗಾರರ ದಂಡನ್ನೇ ಹೊಂದಿರುವ ಸನ್‌ರೈಸರ್ಸ್‌ ಹೈದರಾಬಾದ್ ತಂಡ ಶುಭಾರಂಭದ ನಿರೀಕ್ಷೆಯಲ್ಲಿದೆ. ಕಳೆದ ಬಾರಿ ಭುವನೇಶ್ವರ್ ಗಾಯದ ಸಮಸ್ಯೆಯಿಂದಾಗಿ ಕೇವಲ 4 ಪಂದ್ಯಗಳನ್ನಷ್ಟೇ ಆಡಿದ್ದರು. ನಾಯಕ ಡೇವಿಡ್ ವಾರ್ನರ್, ಕೇನ್ ವಿಲಿಯಮ್ಸನ್, ಜಾನಿ ಬೇರ್‌ಸ್ಟೋ, ಜೇಸನ್ ರಾಯ್, ರಶೀದ್ ಖಾನ್, ಜೇಸನ್ ಹೋಲ್ಡರ್, ಮೊಹಮದ್ ನಬಿಯಂಥ ಸ್ಟಾರ್ ವಿದೇಶಿ ಆಟಗಾರರಿದ್ದಾರೆ. ಆದರೆ, ವಿದೇಶಿ ಕೋಟಾದ 4 ಮಂದಿ ಆಯ್ಕೆಯೇ ತಂಡಕ್ಕೆ ತಲೆನೋವಾಗಿದೆ. ಕನ್ನಡಿಗ ಮನೀಷ್ ಪಾಂಡೆ ಹಾಗೂ ಹೊಸದಾಗಿ ಸೇರ್ಪಡೆಗೊಂಡ ಕೇದಾರ್ ಜಾಧವ್ ಮಧ್ಯಮ ಕ್ರಮಾಂಕದಲ್ಲಿ ಆಸರೆಯಾಗಿದ್ದಾರೆ. ಯಾರ್ಕರ್ ಸ್ಪೆಷಲಿಸ್ಟ್ ಟಿ.ನಟರಾಜನ್, ಸಂದೀಪ್ ಶರ್ಮ, ರಶೀದ್ ಖಾನ್, ಖಲೀಲ್ ಅಹಮದ್ ಹಾಗೂ ಸಿದ್ದಾರ್ಥ್ ಕೌಲ್ ಒಳಗೊಂಡ ಬೌಲಿಂಗ್ ಉತ್ತಮ ಲಯದಲ್ಲಿದೆ.

*ಸಂಭಾವ್ಯ ತಂಡಗಳು

ಕೆಕೆಆರ್: ಇವೊಯಿನ್ ಮಾರ್ಗನ್ (ನಾಯಕ), ಶುಭಮಾನ್ ಗಿಲ್, ರಾಹುಲ್ ತ್ರಿಪಾಠಿ, ನಿತೀಶ್ ರಾಣಾ, ದಿನೇಶ್ ಕಾರ್ತಿಕ್ (ವಿಕೀ), ಆಂಡ್ರೆ ರಸೆಲ್, ಶಕೀಬ್ ಅಲ್ ಹಸನ್, ಪ್ಯಾಟ್ ಕಮ್ಮಿನ್ಸ್/ಲಾಕಿ ರ್ಗ್ಯುಸನ್, ಹರ್ಭಜನ್ ಸಿಂಗ್, ಪ್ರಸಿದ್ಧಕೃಷ್ಣ, ವರುಣ್ ಚಕ್ರವರ್ತಿ.

ಸನ್‌ರೈಸರ್ಸ್‌: ಡೇವಿಡ್ ವಾರ್ನರ್ (ನಾಯಕ), ವೃದ್ಧಿಮಾನ್ ಸಾಹ, ಮನೀಷ್ ಪಾಂಡೆ, ಕೇನ್ ವಿಲಿಯಮ್ಸನ್, ವಿಜಯ್ ಶಂಕರ್/ಕೇದಾರ್ ಜಾಧವ್, ಜೇಸನ್ ಹೋಲ್ಡರ್/ಮೊಹಮದ್ ನಬಿ, ಅಬ್ದುಲ್ ಸಮಾದ್, ರಶೀದ್ ಖಾನ್, ಭುವನೇಶ್ವರ್, ಸಂದೀಪ್ ಶರ್ಮ, ಟಿ.ನಟರಾಜನ್.

* ಪಿಚ್ ರಿಪೋರ್ಟ್: ಪಿಚ್ ಸ್ಪರ್ಧಾತ್ಮಕವಾಗಿದ್ದು, ಬೌಲಿಂಗ್ ಸ್ನೇಹಿಯಾಗಿಯೂ ಇದೆ. ಆರ್‌ಸಿಬಿ-ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದಲ್ಲಿ ಬ್ಯಾಟ್ಸ್‌ಮ್‌ಗಳಿಗೆ ಹೋಲಿಸಿದರೆ ಬೌಲರ್‌ಗಳೇ ಮೇಲುಗೈ ಸಾಧಿಸಿದ್ದನ್ನು ನೋಡಬಹುದು.

ಮುಖಾಮುಖಿ: 19, ಸನ್‌ರೈಸರ್ಸ್‌: 7, ಕೆಕೆಆರ್: 12

ಪಂದ್ಯ ಆರಂಭ: ರಾತ್ರಿ 7.30ಕ್ಕೆ

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net