

ದುಬೈ: ಪ್ಲೇಆಫ್ ಹಂತಕ್ಕೇರಲು ಮಾಡು ಇಲ್ಲವೆ ಮಡಿ ಸ್ಥಿತಿಯಲ್ಲಿ ಸಿಲುಕಿರುವ ಎರಡು ಬಾರಿಯ ಚಾಂಪಿಯನ್ ಕೋಲ್ಕತ ನೈಟ್‌ರೈಡರ್ಸ್ ತಂಡ ಭಾನುವಾರದ 2ನೇ ಹಣಾಹಣಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಪಂಜಾಬ್ ಎದುರು 5 ವಿಕೆಟ್ ಸೋಲಿನಿಂದ ಕಂಗೆಟ್ಟಿರುವ ಕೆಕೆಆರ್ ತಂಡ ಗೆಲುವಿನ ಒತ್ತಡದಲ್ಲಿ ಸಿಲುಕಿದೆ. ಆಡಿರುವ 12 ಪಂದ್ಯಗಳಲ್ಲಿ 5 ಗೆಲುವು, 7 ಸೋಲುಗಳೊಂದಿಗೆ 10 ಪಾಯಿಂಟ್ಸ್ ಹೊಂದಿದ್ದು, ಪ್ಲೇಆಫ್ ಹಂತಕ್ಕೇರಲು ಮುಂದಿನ ಎರಡೂ ಪಂದ್ಯಗಳಲ್ಲೂ ಗೆಲ್ಲಲೇಬೇಕಿದೆ. ಅರಬ್ ನಾಡಿನಲ್ಲಿ ಗೆಲುವಿನ ಲಯದಲ್ಲಿದ್ದ ಕೆಕೆಆರ್ ತಂಡಕ್ಕೆ ಪಂಜಾಬ್ ಎದುರಿನ ಸೋಲು ಹಿನ್ನಡೆ ತಂದಿದೆ. ಮತ್ತೊಂದೆಡೆ, ಸನ್‌ರೈಸರ್ಸ್ ತಂಡ ಆಡಿರುವ 11 ಪಂದ್ಯಗಳಲ್ಲಿ 9 ಸೋಲು ಕಂಡಿದ್ದು, ಕಡೇ ಹಂತದ ಪಂದ್ಯಗಳಲ್ಲಿ ಗೆಲುವು ಸಾಧಿಸಿ ಟೂರ್ನಿಗೆ ವಿದಾಯ ಹೇಳುವ ಲೆಕ್ಕಾಚಾರದಲ್ಲಿದೆ.
ಕೆಕೆಆರ್‌ಗೆ ಮಾರ್ಗನ್ ಚಿಂತೆ
ಇವೊಯಿನ್ ಮಾರ್ಗನ್ ನಾಯಕರಾಗಿ ತಂತ್ರಗಾರಿಕೆಯಲ್ಲಿ ಮಿಂಚಿದ್ದರೂ, ಬ್ಯಾಟ್ಸ್‌ಮನ್ ಆಗಿ ರನ್‌ಬರ ಎದುರಿಸುತ್ತಿರುವುದು ಕೆಕೆಆರ್ ತಂಡಕ್ಕೆ ಚಿಂತೆ ತಂದಿದೆ. ಮಾರ್ಗನ್ ಪ್ರಸಕ್ತ ಲೀಗ್‌ನಲ್ಲಿ 9 ಬಾರಿ ಒಂದಂಕಿ ಮೊತ್ತಕ್ಕೆ ಔಟಾಗಿದ್ದಾರೆ. ಕಳಪೆ ನಿರ್ವಹಣೆಯಿಂದ ತಂಡಕ್ಕೆ ಹೊರೆಯಾಗುತ್ತಿರುವ ಮಾರ್ಗನ್ ನಾಯಕತ್ವಕ್ಕೆ ಕುತ್ತು ಬರುವ ಸಾಧ್ಯತೆಗಳೂ ಇವೆ.
ಮುಖಾಮುಖಿ: 20. ಕೆಕೆಆರ್: 13, ಸನ್‌ರೈಸರ್ಸ್: 7
ಹಿಂದಿನ ಮುಖಾಮುಖಿ: ಕೆಕೆಆರ್ ತಂಡಕ್ಕೆ 10 ರನ್ ಜಯ
ಪಂದ್ಯ ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್