

ಶಾರ್ಜಾ: ಎರಡು ಬಾರಿಯ ಚಾಂಪಿಯನ್ ಕೋಲ್ಕತ ನೈಟ್‌ರೈಡರ್ಸ್ ತಂಡ ಐಪಿಎಲ್-14ರ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಎದುರು ಗೆದ್ದು ಪ್ಲೇಆಫ್ ಹಂತಕ್ಕೇರುವ ಹಂಬಲದಲ್ಲಿದೆ. ಶಾರ್ಜಾ ಸ್ಟೇಡಿಯಮ್‌ನಲ್ಲಿ ಗುರುವಾರ ನಡೆಯಲಿರುವ ನಿರ್ಣಾಯಕ ಹಣಾಹಣಿಯಲ್ಲಿ ಕೆಕೆಆರ್‌ಗೆ ಗೆಲುವು ಅನಿವಾರ‌್ಯವಾಗಿದೆ. ಇದುವರೆಗೆ ಆಡಿರುವ 13 ಪಂದ್ಯಗಳಲ್ಲಿ 12 ಅಂಕ ಗಳಿಸಿರುವ ಕೆಕೆಆರ್ ತಂಡ, ಪ್ಲೇಆಫ್ ಹಂತದ ರೇಸ್‌ನಲ್ಲಿರುವ ಮತ್ತೊಂದು ತಂಡವಾದ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್‌ಗಿಂತ ಉತ್ತಮ ರನ್‌ರೇಟ್ ಹೊಂದಿದೆ. ಇದರಿಂದಾಗಿ ಈ ಪಂದ್ಯದಲ್ಲಿ ಕೆಕೆಆರ್ ತಂಡ ಕೇವಲ ಗೆಲುವಿಗಾಗಿ ಹೋರಾಡದೆ, ರನ್‌ರೇಟ್ ಸುಧಾರಿಸುವತ್ತ ಕೂಡ ಗಮನಹರಿಸಲಿದೆ. ಮುಂಬೈ ಕೊನೇ ಪಂದ್ಯದಲ್ಲಿ ಬೃಹತ್ ಅಂತರದಿಂದ ಗೆದ್ದು ರನ್‌ರೇಟ್‌ನಲ್ಲೂ ಹಿಂದಿಕ್ಕಿದರೆ ಆಗ ಕೆಕೆಆರ್ ಈ ಪಂದ್ಯವನ್ನು ಗೆದ್ದರೂ ಹೊರಬೀಳಲಿದೆ. ಇನ್ನು ಕೆಕೆಆರ್ ಈ ಪಂದ್ಯ ಸೋತರೂ ಪ್ಲೇಆಫ್ ಆಸೆ ಜೀವಂತವಿಡಲಿದೆ. ಮುಂಬೈ ತಂಡವೂ ತನ್ನ ಕೊನೇ ಲೀಗ್ ಪಂದ್ಯದಲ್ಲಿ ಸೋತರೆ ಆಗ ಕೆಕೆಆರ್ ಪ್ಲೇಆಫ್ ಹಂತಕ್ಕೇರಬಹುದಾಗಿದೆ. ಮತ್ತೊಂದೆಡೆ ಮುಂಬೈ ಎದುರು ಸರ್ವಾಂಗೀಣ ವೈಫಲ್ಯದಿಂದ ತತ್ತರಿಸಿದ್ದ ರಾಯಲ್ಸ್, ಲೀಗ್‌ನಿಂದ ಅಧಿಕೃತವಾಗಿ ಹೊರಬಿದ್ದಿದ್ದರೂ ಗೆಲುವಿನ ವಿದಾಯ ಹೇಳುವ ಲೆಕ್ಕಾಚಾರದಲ್ಲಿದೆ.
* ಕೆಕೆಆರ್‌ಗೆ ರನ್‌ರೇಟ್ ಸವಾಲು
ಎರಡನೇ ಚರಣದ ಹಣಾಹಣಿಯಲ್ಲಿ 4 ಜಯ, 2 ಸೋಲು ಕಂಡಿರುವ ಕೆಕೆಆರ್, ಪ್ಲೇಆಫ್ ಹಂತಕ್ಕೇರುವ ಅವಕಾಶ ಹೆಚ್ಚಿಸಿಕೊಂಡಿದೆ. ಭಾರತದಲ್ಲಿ ನಡೆದ ಮೊದಲ ಚರಣದಲ್ಲಿ ಸಾಧಾರಣ ನಿರ್ವಹಣೆ ತೋರಿದ್ದ ಕೆಕೆಆರ್‌ಗೆ ಅರಬ್ ನಾಡು ಅದೃಷ್ಟ ತಂದುಕೊಟ್ಟಿದೆ. ಯುವ ಆಟಗಾರರಾದ ಶುಭಮಾನ್ ಗಿಲ್, ವೆಂಕಟೇಶ್ ಅಯ್ಯರ್ ಮಿಂಚುತ್ತಿದ್ದರೆ, ನಾಯಕ ಇವೊಯಿನ್ ಮಾರ್ಗನ್ ಕಳಪೆ ಫಾರ್ಮ್ ತಂಡಕ್ಕೆ ದುಬಾರಿಯಾಗಿದೆ. ಬೌಲಿಂಗ್‌ನಲ್ಲಿ ಮಿಸ್ಟ್ರಿ ಸ್ಪಿನ್ನರ್ ವರುಣ್ ಚಕ್ರವರ್ತಿ, ಸುನೀಲ್ ನಾರಾಯಣ್ ಮಿಂಚುತ್ತಿದ್ದರೆ, ವೇಗಿಗಳಾದ ಟಿಮ್ ಸೌಥಿ ಹಾಗೂ ಶಿವಂ ಮಾವಿ ಎದುರಾಳಿಗೆ ಕಂಟಕವಾಗಬಲ್ಲರು.
*ಗೆಲುವಿನ ವಿದಾಯದ ತವಕ
13 ಪಂದ್ಯಗಳಿಂದ 10 ಅಂಕ ಹೊಂದಿರುವ ರಾಯಲ್ಸ್ ತಂಡ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ಮಂಗಳವಾರ ಮುಂಬೈ ಎದುರು ಹೀನಾಯವಾಗಿ ಸೋಲನುಭವಿಸುವ ಮೂಲಕ ಪ್ಲೇಆಫ್ ರೇಸ್‌ನಿಂದ ಹೊರಬಿದ್ದಿತು. ಸರ್ವಾಂಗೀಣ ವೈಫಲ್ಯದಿಂದ ತತ್ತರಿಸಿದ ರಾಯಲ್ಸ್, ಮುಂಬೈ ಅಬ್ಬರದ ಎದುರು ಸಂಪೂರ್ಣ ಮಂಕಾಯಿತು. ಲೀಗ್‌ನಿಂದ ಅಧಿಕೃತವಾಗಿ ಹೊರಬಿದ್ದಿದ್ದರೂ ಗೆಲುವಿನ ವಿದಾಯ ಹೇಳುವ ಲೆಕ್ಕಾಚಾರದಲ್ಲಿದೆ.
ಮುಖಾಮುಖಿ: 23, ಕೆಕೆಆರ್: 12, ರಾಜಸ್ಥಾನ ರಾಯಲ್ಸ್: 11
ಹಿಂದಿನ ಮುಖಾಮುಖಿ: ರಾಜಸ್ಥಾನ ರಾಯಲ್ಸ್‌ಗೆ 6 ವಿಕೆಟ್ ಜಯ
ಪಂದ್ಯ ಆರಂಭ: ರಾತ್ರಿ 7.30, ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್