ಇಂದು ಕಿಂಗ್ಸ್ ಇಲೆವೆನ್ ಪಂಜಾಬ್- ಕೋಲ್ಕತ ನೈಟ್ ರೈಡರ್ಸ್‌ ಕಾದಾಟ

kkr and kings eleven punjab for web
Published on

ಅಬುಧಾಬಿ: ಸತತ 4 ಸೋಲುಗಳಿಂದ ಕಂಗೆಟ್ಟಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಐಪಿಎಲ್-13ರ ತನ್ನ 7ನೇ ಪಂದ್ಯದಲ್ಲಿ ಕೋಲ್ಕತ ನೈಟ್ ರೈಡರ್ಸ್‌ ತಂಡವನ್ನು ಎದುರಿಸಲಿದೆ. ಶೇಖ್ ಜಯೆದ್ ಸ್ಟೇಡಿಯಂನಲ್ಲಿ ಶನಿವಾರ ನಡೆಯಲಿರುವ ಪಂದ್ಯ ಕನ್ನಡಿಗ ಕೆಎಲ್ ರಾಹುಲ್ ಸಾರಥ್ಯದ ಕಿಂಗ್ಸ್ ಇಲೆವೆನ್ ಪಾಲಿಗೆ ಭಾರಿ ಮಹತ್ವ ಪಡೆದಿದೆ. ಪ್ಲೇಆ್ ಹಂತಕ್ಕೇರಲು ಕೂದಲೆಳೆ ಅವಕಾಶ ಉಳಿಸಿಕೊಂಡಿರುವ ಪಂಜಾಬ್ ತಂಡದ ಸ್ಥಿತಿ ಹಗ್ಗದ ಮೇಲಿನ ನಡಿಗೆಯಂತಾಗಿದೆ. ಮತ್ತೊಂದೆಡೆ, ಸಿಎಸ್‌ಕೆ ಎದುರು ಕಡೇ ಹಂತದಲ್ಲಿ ಗೆಲುವು ಒಲಿಸಿಕೊಂಡ ಕೆಕೆಆರ್ ಆತ್ಮವಿಶ್ವಾಸದಲ್ಲಿದೆ.

ಕಿಂಗ್ಸ್‌ಗೆ ಬೇಕಿದೆ ಗೆಲುವಿನ ಮುಲಾಮು: ಸತತ ಸೋಲುಗಳಿಂದ ಹೀನಾಯ ಸ್ಥಿತಿಯಲ್ಲಿರುವ ಪಂಚ ಕನ್ನಡಿಗರ ಕಿಂಗ್ಸ್ ಇಲೆವೆನ್ ತಂಡಕ್ಕೆ ಗೆಲುವೊಂದೇ ಮಾರ್ಗವಾಗಿದೆ. ಇದುವರೆಗೆ 6 ಪಂದ್ಯಗಳ ಪೈಕಿ ಏಕೈಕ ಜಯ ಕಂಡಿರುವ ಪಂಜಾಬ್, 5 ಸೋಲು ಅನುಭವಿಸಿದೆ. ಪ್ಲೇಆ್ ಹಂತದ ಆಸೆ ಜೀವಂತವಾಗಿರಿಸಿಕೊಳ್ಳಲು ಪಂಜಾಬ್ ತಂಡ ಮಾಡು ಇಲ್ಲವೆ ಮಡಿ ಸ್ಥಿತಿಯಲ್ಲಿದೆ. ಒಂದು ವೇಳೆ ಪಂಜಾಬ್ ಸೋತರೆ, ಮುಂದಿನ ಎಲ್ಲ 7 ಪಂದ್ಯಗಳನ್ನೂ ಗೆಲ್ಲಲೇಬೇಕಾದ ಒತ್ತಡದಲ್ಲಿ ಸಿಲುಕಲಿದೆ. ಸನ್‌ರೈಸರ್ಸ್‌ ಎದುರು ನಿಕೋಲಸ್ ಪೂರನ್ ಹೊರತುಪಡಿಸಿ ಉಳಿದ ಎಲ್ಲ ಬ್ಯಾಟ್ಸ್‌ಮನ್‌ಗಳು ವಿಲರಾಗಿದ್ದರು. ತಂಡಕ್ಕೆ ಸಂಘಟಿತ ನಿರ್ವಹಣೆ ಕೊರತೆ ಕಾಡುತ್ತಿದೆ.

*ಕೆಕೆಆರ್‌ಗೆ ಯುವ ಪಡೆಯೇ ಆಧಾರ

ಯುವ ಆಟಗಾರರ ಬಲವನ್ನೇ ಹೆಚ್ಚಾಗಿ ನಂಬಿಕೊಂಡಿರುವ ಕೆಕೆಆರ್ ಮತ್ತೊಂದು ಗೆಲುವಿನ ಕನಸಿನಲ್ಲಿದೆ. ಅಗ್ರ ಕ್ರಮಾಂಕದಲ್ಲಿ ರಾಹುಲ್ ತ್ರಿಪಾಠಿ ಸ್ಫೋಟಿಸುತ್ತಿರುವುದು ತಂಡದ ಪಾಲಿಗೆ ಸಂತಸ ತಂದಿದೆ. ಸಿಎಸ್‌ಕೆ ಎದುರು ಸಿಕ್ಕ ಮೊದಲ ಅವಕಾಶವನ್ನೇ ಸೂಕ್ತವಾಗಿ ಬಳಸಿಕೊಂಡಿರುವ ತ್ರಿಪಾಠಿ ಆರಂಭಿಕನ ಸ್ಥಾನವನ್ನು ಗಟ್ಟಿಮಾಡಿಕೊಂಡಿದ್ದಾರೆ. ಆದರೆ, ಮಧ್ಯಮ ಕ್ರಮಾಂಕದಲ್ಲಿ ಸ್ಫೋಟಕ ಬ್ಯಾಟ್ಸ್‌ಮನ್ ಆಂಡ್ರೆ ರಸೆಲ್, ನಾಯಕ ದಿನೇಶ್ ಕಾರ್ತಿಕ್ ಇದುವರೆಗೆ ದೊಡ್ಡ ಮೊತ್ತ ಪೇರಿಸಿಲ್ಲ. ಇವೊಯಿನ್ ಮಾರ್ಗನ್, ನಿತೀಶ್ ರಾಣಾ ಮತ್ತಷ್ಟು ಮಿಂಚಬೇಕಿದೆ. ಶಿವಂ ಮಾವಿ, ಪ್ಯಾಟ್ ಕಮ್ಮಿನ್ಸ್, ಕಮಲೇಶ್ ನಾಗರಕೋಟಿ, ವರುಣ್ ಚಕ್ರವರ್ತಿ ಒಳಗೊಂಡ ಬೌಲಿಂಗ್ ಪಡೆ ಗಮನಸೆಳೆಯುತ್ತಿದೆ. ಬ್ಯಾಟಿಂಗ್‌ನಲ್ಲಿ ವಿಫಲವಾಗುತ್ತಿದ್ದರೂ ಸುನೀಲ್ ನಾರಾಯಣ್ ಹಾಗೂ ರಸೆಲ್ ಜೋಡಿ ಕಳೆದ ಪಂದ್ಯದಲ್ಲಿ ಬೌಲಿಂಗ್ ಮೂಲಕ ತಂಡಕ್ಕೆ ಆಸರೆಯಾಗಿತ್ತು.

ಟೀಮ್ ನ್ಯೂಸ್:

ಕಿಂಗ್ಸ್ ಇಲೆವೆನ್ ಪಂಜಾಬ್: ಪ್ರತಿ ಪಂದ್ಯದಲ್ಲೂ ಒಂದಿಲ್ಲೊಂದು ಬದಲಾವಣೆಯೊಂದಿಗೆ ಕಣಕ್ಕಿಳಿಯುತ್ತಿರುವ ರಾಹುಲ್‌ಗೆ ತಂಡದ ಸಂಯೋಜನೆಯೇ ದೊಡ್ಡ ಸವಾಲಾಗಿದೆ. ಕಲುಷಿತ ಆಹಾರ ಸೇವನೆಯಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಕ್ರಿಸ್ ಗೇಲ್ ಸುಧಾರಿಸಿಕೊಂಡರೆ ಮ್ಯಾಕ್ಸ್‌ವೆಲ್ ಹೊರಗುಳಿಯಲಿದ್ದಾರೆ. ವಿಕೆಟ್ ಕೀಪರ್ ಸಿಮ್ರಾನ್ ಸಿಂಗ್ ಬದಲಿಗೆ ಅನುಭವಿ ದೀಪಕ್ ಹೂಡಾಗೆ ಅವಕಾಶ ನೀಡಬಹುದು. ಗೇಲ್ ತಂಡಕ್ಕೆ ವಾಪಸಾದರೆ ರಾಹುಲ್ ಜತೆಗೂಡಿ ಇನಿಂಗ್ಸ್ ಆರಂಭಿಸಲಿದ್ದಾರೆ.

ಸಂಭಾವ್ಯ ತಂಡ: ಕೆಎಲ್ ರಾಹುಲ್, ಕ್ರಿಸ್ ಗೇಲ್/ಗ್ಲೆನ್ ಮ್ಯಾಕ್ಸ್‌ವೆಲ್, ಮಯಾಂಕ್ ಅಗರ್ವಾಲ್, ಮಂದೀಪ್ ಸಿಂಗ್, ನಿಕೋಲಸ್ ಪೂರನ್ (ವಿಕೀ), ಸಿಮ್ರಾನ್ ಸಿಂಗ್/ದೀಪಕ್ ಹೂಡಾ, ರವಿ ಬಿಷ್ಣೋಯಿ, ಅರ್ಷದೀಪ್ ಸಿಂಗ್, ಮುಜೀಬ್ ಉರ್ ರೆಹಮಾನ್, ಮೊಹಮದ್ ಶಮಿ, ಶೆಲ್ಡನ್ ಕಾಟ್ರೆಲ್.

ಕಳೆದ ಪಂದ್ಯ: ಸನ್‌ರೈಸರ್ಸ್‌ ಎದುರು 69ರನ್ ಸೋಲು

ಕೆಕೆಆರ್: ಸಿಎಸ್‌ಕೆ ಎದುರು ರೋಚಕವಾಗಿ ಗೆಲುವಿನ ದಡ ಸೇರಿದ ಕೆಕೆಆರ್ ತಂಡದಲ್ಲಿ ಬದಲಾವಣೆ ನಿರೀಕ್ಷೆ ಇಲ್ಲ. ಬಹುತೇಕ ಹಿಂದಿನ ಪಂದ್ಯದಲ್ಲಿ ಆಡಿದ ತಂಡವನ್ನೇ ದಿನೇಶ್ ಕಾರ್ತಿಕ್ ಉಳಿಸಿಕೊಳ್ಳಲಿದ್ದಾರೆ.

ಸಂಭಾವ್ಯ ತಂಡ: ಶುಭಮಾನ್ ಗಿಲ್, ರಾಹುಲ್ ತ್ರಿಪಾಠಿ, ಸುನೀಲ್ ನಾರಾಯಣ್, ನಿತೀಶ್ ರಾಣಾ, ದಿನೇಶ್ ಕಾರ್ತಿಕ್ (ನಾಯಕ, ವಿಕೀ), ಇವೊಯಿನ್ ಮಾರ್ಗನ್, ಆಂಡ್ರೆ ರಸೆಲ್, ಪ್ಯಾಟ್ ಕಮ್ಮಿನ್ಸ್, ಶಿವಂ ಮಾವಿ, ವರುಣ್ ಚಕ್ರವರ್ತಿ, ಕಮಲೇಶ್ ನಾಗರಕೋಟಿ.

ಕಳೆದ ಪಂದ್ಯ: ಸಿಎಸ್‌ಕೆ ಎದುರು 10 ರನ್ ಜಯ.

ಪಂದ್ಯ ಆರಂಭ: ಮಧ್ಯಾಹ್ನ 3.30ಕ್ಕೆ

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್

ಮುಖಾಮುಖಿ: 25, ಪಂಜಾಬ್: 8, ಕೆಕೆಆರ್: 17

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net