

ಮುಂಬೈ: ರನ್‌ಮಳೆಗೆ ಸಾಕ್ಷಿಯಾದ ಕದನದಲ್ಲಿ ಪ್ಯಾಟ್ ಕಮ್ಮಿನ್ಸ್ (65*ರನ್, 33 ಎಸೆತ, 4 ಬೌಂಡರಿ, 6 ಸಿಕ್ಸರ್) ಹಾಗೂ ಆಂಡ್ರೆ ರಸೆಲ್ (54ರನ್, 22 ಎಸೆತ, 3 ಬೌಂಡರಿ, 6 ಸಿಕ್ಸರ್) ಪ್ರತಿಹೋರಾಟದ ನಡುವೆಯೂ ಕೋಲ್ಕತ ನೈಟ್‌ರೈಡರ್ಸ್ ತಂಡ ಐಪಿಎಲ್-14ರ ತನ್ನ 4ನೇ ಪಂದ್ಯದಲ್ಲಿ ಚೆನ್ನೈ ಸೂಪರ್‌ಕಿಂಗ್ಸ್ ಎದುರು 18 ರನ್‌ಗಳಿಂದ ವೀರೋಚಿತ ಸೋಲು ಕಂಡಿತು. ಇವೊಯಿನ್ ಮಾರ್ಗನ್ ಬಳಗ ಲೀಗ್‌ನಲ್ಲಿ ಹ್ಯಾಟ್ರಿಕ್ ಸೋಲು ಕಂಡರೆ, ಎಂಎಸ್ ಧೋನಿ ಬಳಗ ಹ್ಯಾಟ್ರಿಕ್ ಜಯ ದಾಖಲಿಸಿದ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.
ವಾಂಖೆಡೆ ಸ್ಟೇಡಿಯಂನಲ್ಲಿ ಬುಧವಾರ ರಾತ್ರಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್‌ಕೆ, ಫಾಫ್ ಡು ಪ್ಲೆಸಿಸ್ (95*ರನ್, 60ಎಸೆತ, 9 ಬೌಂಡರಿ, 4 ಸಿಕ್ಸರ್) ಹಾಗೂ ಋತುರಾಜ್ ಗಾಯಕ್ವಾಡ್ (64ರನ್, 42 ಎಸೆತ, 6 ಬೌಂಡರಿ, 4 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ಫಲವಾಗಿ 3 ವಿಕೆಟ್‌ಗೆ 220 ರನ್ ಪೇರಿಸಿತು. ಪ್ರತಿಯಾಗಿ ಕೆಕೆಆರ್ ತಂಡ ವೇಗಿ ದೀಪಕ್ ಚಹರ್ (29ಕ್ಕೆ 4) ಮಾರಕ ದಾಳಿ ನಲುಗಿ ಒಂದು ಹಂತದಲ್ಲಿ 31 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಹೀನಾಯ ಸ್ಥಿತಿ ತಲುಪಿತು. ಬಳಿಕ ಆಂಡ್ರೆ ರಸೆಲ್ ಹಾಗೂ ಪ್ಯಾಟ್ ಕಮ್ಮಿನ್ಸ್ ಪ್ರತಿಹೋರಾಟದ ನಡುವೆಯೂ 19.1 ಓವರ್‌ಗಳಲ್ಲಿ 202 ರನ್‌ಗಳಿಗೆ ಸರ್ವಪತನ ಕಂಡಿತು. ಕಡೇ ಹಂತದವರೆಗೂ ಕಮ್ಮಿನ್ಸ್ ಏಕಾಂಗಿ ಹೋರಾಟ ನಡೆಸಿದರೂ ಕೆಳಕ್ರಮಾಂಕದ ಬ್ಯಾಟ್ಸ್‌ಮನ್‌ಗಳಿಂದ ಸೂಕ್ತ ಬೆಂಬಲ ದಕ್ಕಲಿಲ್ಲ.
ಚೆನ್ನೈ ಸೂಪರ್ ಕಿಂಗ್ಸ್: 3 ವಿಕೆಟ್‌ಗೆ 220 (ಋತುರಾಜ್ ಗಾಯಕ್ವಾಡ್ 64, ಫಾಫ್ ಡು ಪ್ಲೆಸಿಸ್ 96*, ಮೊಯಿನ್ ಅಲಿ 25, ವರುಣ್ ಚಕ್ರವರ್ತಿ 27ಕ್ಕೆ 1, ಸುನೀಲ್ ನಾರಾಯಣ್ 34ಕ್ಕೆ 1, ಆಂಡ್ರೆ ರಸೆಲ್ 27ಕ್ಕೆ 1), ಕೋಲ್ಕತ ನೈಟ್ ರೈಡರ್ಸ್: 19.1 ಓವರ್‌ಗಳಲ್ಲಿ 202 (ಆಂಡ್ರೆ ರಸೆಲ್ 54, ಪ್ಯಾಟ್ ಕಮ್ಮಿನ್ಸ್ 66*, ದಿನೇಶ್ ಕಾರ್ತಿಕ್ 40, ದೀಪಕ್ ಚಹರ್ 29ಕ್ಕೆ 4, ಲುಂಗಿ ಎನ್‌ಗಿಡಿ 28ಕ್ಕೆ 3, ಸ್ಯಾಮ್ ಕರ‌್ರನ್ 58ಕ್ಕೆ 1).