

ಅಬುಧಾಬಿ: ಕನ್ನಡಿಗರಾದ ನಾಯಕ ಕೆಎಲ್ ರಾಹುಲ್ (74 ರನ್, 58 ಎಸೆತ, 6 ಬೌಂಡರಿ) ಮತ್ತು ಮಯಾಂಕ್ ಅಗರ್ವಾಲ್ (56 ರನ್, 39 ಎಸೆತ, 6 ಬೌಂಡರಿ, 1 ಸಿಕ್ಸರ್) ಹಾಕಿಕೊಟ್ಟ ಭದ್ರಬುನಾದಿಯ ನಡುವೆಯೂ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಐಪಿಎಲ್-13ರಲ್ಲಿ ಸತತ 5ನೇ ಸೋಲು ಕಂಡಿದೆ. ಶನಿವಾರದ ಮೊದಲ ಪಂದ್ಯದಲ್ಲಿ ಪಂಜಾಬ್ ತಂಡ ಕೋಲ್ಕತ ನೈಟ್‌ರೈಡರ್ಸ್ ವಿರುದ್ಧ ಒಂದು ಹಂತದಲ್ಲಿ ಗೆಲುವಿನ ಹಾದಿಯಲ್ಲಿದ್ದರೂ, ಕರ್ನಾಟಕದ ವೇಗಿ ಪ್ರಸಿದ್ಧಕೃಷ್ಣ (29ಕ್ಕೆ 3) ದಾಳಿಗೆ ಕುಸಿದು 2 ರನ್‌ಗಳಿಂದ ಪರಾಭವಗೊಂಡಿತು. ಇದರಿಂದ ಕೆಎಲ್ ರಾಹುಲ್ ಬಳಗದ ಪ್ಲೇಆಫ್ ಹಾದಿ ದುರ್ಗಮಗೊಂಡಿದೆ.
ಶೇಕ್ ಜಯೆದ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ಗೆ ಇಳಿದ ಕೆಕೆಆರ್, 6 ವಿಕೆಟ್‌ಗೆ 164 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತು. ಪ್ರತಿಯಾಗಿ ಕಿಂಗ್ಸ್ ಇಲವೆನ್, ರಾಹುಲ್-ಮಯಾಂಕ್ ಜೋಡಿ ಮೊದಲ ವಿಕೆಟ್‌ಗೆ ಪೇರಿಸಿದ 115 ರನ್ ಜತೆಯಾಟದ ಬಳಿಕ ಕುಸಿದು 5 ವಿಕೆಟ್‌ಗೆ 162 ರನ್ ಕೂಡಿಹಾಕಲಷ್ಟೇ ಶಕ್ತವಾಯಿತು. ಇದರಿಂದ ಕಿಂಗ್ಸ್ ಇಲೆವೆನ್ ಅಂಕಪಟ್ಟಿಯಲ್ಲಿ ಕೊನೇ ಸ್ಥಾನದಲ್ಲೇ ಉಳಿದಿದೆ.
ಕಿಂಗ್ಸ್ ಇಲೆವೆನ್‌ಗೆ ಕೊನೇ 2 ಓವರ್‌ಗಳಲ್ಲಿ 20 ರನ್ ಬೇಕಿದ್ದಾಗ, ಇನಿಂಗ್ಸ್‌ನ 19ನೇ ಓವರ್ ಎಸೆದ ಪ್ರಸಿದ್ಧಕೃಷ್ಣ, ಕೆಎಲ್ ರಾಹುಲ್ ಸಹಿತ 2 ವಿಕೆಟ್ ಕಬಳಿಸಿದರು. ಇದರಿಂದ ಕೊನೇ ಓವರ್‌ನಲ್ಲಿ 14 ರನ್ ಗಳಿಸುವ ಅನಿವಾರ‌್ಯತೆ ಎದುರಿಸಿದ ಕಿಂಗ್ಸ್ ಇಲೆವೆನ್, ಸುನೀಲ್ ನಾರಾಯಣ್ ಓವರ್‌ನಲ್ಲಿ ಮಂದೀಪ್ ಸಿಂಗ್ (0) ವಿಕೆಟ್ ಕಳೆದುಕೊಂಡಿತು. ಕೊನೇ ಎಸೆತದಲ್ಲಿ 7 ರನ್ ಅಗತ್ಯವಿದ್ದಾಗ ಮ್ಯಾಕ್ಸ್‌ವೆಲ್ ಬಾರಿಸಿದ ಚೆಂಡು ಬೌಂಡರಿ ಗೆರೆಗಿಂತ ಸ್ವಲ್ಪ ಹಿಂದೆ ಬಿದ್ದ ಕಾರಣ ಬೌಂಡರಿ ಆಯಿತು. ಇದರಿಂದ ಪಂದ್ಯ ಟೈ ಆಗುವುದೂ ತಪ್ಪಿಹೋಯಿತು.
ಕೆಕೆಆರ್‌ಗೆ ಗಿಲ್, ಕಾರ್ತಿಕ್ ಆಸರೆ
ಕಳೆದ ಪಂದ್ಯದ ಹೀರೋ ರಾಹುಲ್ ತ್ರಿಪಾಠಿ (4) ಮತ್ತು ವನ್‌ಡೌನ್ ಬ್ಯಾಟ್ಸ್‌ಮನ್ ನಿತೀಶ್ ರಾಣಾ (2) ವಿಕೆಟ್‌ಗಳನ್ನು ಬೇಗನೆ ಕಳೆದುಕೊಂಡು ಕೆಕೆಆರ್ ಆರಂಭಿಕ ಆಘಾತ ಎದುರಿಸಿತ್ತು. ಇದರಿಂದಾಗಿ ಪವರ್‌ಪ್ಲೇಯಲ್ಲಿ ಕೇವಲ 25 ರನ್ ಗಳಿಸಿತ್ತು. ಆರಂಭಿಕ ಶುಭಮಾನ್ ಗಿಲ್ (57 ರನ್, 47 ಎಸೆತ, 5 ಬೌಂಡರಿ) ಒಂದೆಡೆ ತಂಡಕ್ಕೆ ಆಸರೆಯಾಗಿ ನಿಂತು, ಇವೊಯಿನ್ ಮಾರ್ಗನ್ (24) ಜತೆ 3ನೇ ವಿಕೆಟ್‌ಗೆ 49 ರನ್ ಸೇರಿಸಿ ತಂಡಕ್ಕೆ ಚೇತರಿಕೆ ಒದಗಿಸಿದರು. ಯುವ ಸ್ಪಿನ್ನರ್ ರವಿ ಬಿಷ್ಣೋಯಿ, ಮಾರ್ಗನ್ ವಿಕೆಟ್ ಕಬಳಿಸಿ ಈ ಜತೆಯಾಟ ಬೇರ್ಪಡಿಸಿದರು. ಆಗ ಕಣಕ್ಕಿಳಿದ ನಾಯಕ ದಿನೇಶ್ ಕಾರ್ತಿಕ್ ಕಳೆದ ಕೆಲ ಪಂದ್ಯಗಳ ರನ್‌ಬರವನ್ನು ನೀಗಿಸಿದರಲ್ಲದೆ, ಸ್ಫೋಟಕ ಆಟದ ಮೂಲಕ ತಂಡವನ್ನು ಮೊತ್ತವನ್ನು ಏರಿಸಿದರು. ಗಿಲ್-ಕಾರ್ತಿಕ್ ಜೋಡಿ 4ನೇ ವಿಕೆಟ್‌ಗೆ 43 ಎಸೆತಗಳಲ್ಲೇ 82 ರನ್ ಪೇರಿಸಿತು. ಈ ಪೈಕಿ ಕಾರ್ತಿಕ್ ಅವರೊಬ್ಬರೇ 53 ರನ್ ಪೇರಿಸಿದರು. ಮೊದಲ 10 ಓವರ್‌ಗಳಲ್ಲಿ 60 ರನ್ ಗಳಿಸಿದ್ದ ಕೆಕೆಆರ್, ನಂತರದ 10 ಓವರ್‌ಗಳಲ್ಲಿ 104 ರನ್ ಕಸಿಯಿತು. ಕಾರ್ತಿಕ್ ಅವರ ಬಿರುಸಿನ ಆಟ ಇದಕ್ಕೆ ನೆರವಾಯಿತು. ಕೊನೆಯಲ್ಲಿ ಆಲ್ರೌಂಡರ್ ಆಂಡ್ರೆ ರಸೆಲ್ (5) ಮತ್ತೊಮ್ಮೆ ಸ್ಫೋಟಕ ಆಟವಾಡಲು ವಿಲರಾಗಿ ನಿರಾಸೆ ಮೂಡಿಸಿದರು.
ಗೇಲ್ ಈ ಸಲವೂ ಆಡಲಿಲ್ಲ
ಫುಡ್ ಪಾಯ್ಸನ್‌ನಿಂದಾಗಿ ಕಳೆದ ಪಂದ್ಯದ ವೇಳೆ ಕೊನೇಕ್ಷಣದಲ್ಲಿ ತಂಡದಿಂದ ಹೊರಗುಳಿದಿದ್ದ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಈ ಸಲವೂ ಕಿಂಗ್ಸ್ ಪರ ಕಣಕ್ಕಿಳಿಯಲಿಲ್ಲ. ಉಭಯ ತಂಡಗಳು ತಲಾ 1 ಬದಲಾವಣೆಯೊಂದಿಗೆ ಕಣಕ್ಕಿಳಿದವು. ಗಾಯಾಳು ಶೆಲ್ಡನ್ ಕಾಟ್ರೆಲ್ ಬದಲಿಗೆ ಕ್ರಿಸ್ ಜೋರ್ಡನ್ ಸ್ಥಾನ ಪಡೆದರು. ಅತ್ತ ಕೆಕೆಆರ್ ಪರ ಕನ್ನಡಿಗ ಪ್ರಸಿದ್ಧಕೃಷ್ಣ ಟೂರ್ನಿಯ ಮೊದಲ ಪಂದ್ಯವಾಡಿದರೆ, ಶಿವಂ ಮಾವಿ ಹೊರಗುಳಿದರು.