21 ದಿನಗಳ ಬಳಿಕ ಗೆದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ

PUNJAB AND RCB MATCH
Published on

ಶಾರ್ಜಾ: ಕನ್ನಡಿಗರಾದ ಕೆಎಲ್ ರಾಹುಲ್ (61*ರನ್, 49ಎಸೆತ, 1 ಬೌಂಡರಿ, 5 ಸಿಕ್ಸರ್), ಮಯಾಂಕ್ ಅಗರ್ವಾಲ್ (45ರನ್, 25 ಎಸೆತ, 4 ಬೌಂಡರಿ, 3 ಸಿಕ್ಸರ್) ಹಾಗೂ ಟೂರ್ನಿಯಲ್ಲಿ ಮೊದಲ ಪಂದ್ಯವಾಡಿದ ವಿಂಡೀಸ್ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ (53*ರನ್, 45 ಎಸೆತ, 1 ಬೌಂಡರಿ, 5 ಸಿಕ್ಸರ್) ಅಬ್ಬರದ ಬ್ಯಾಟಿಂಗ್‌ಗೆ ನಲುಗಿದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ ಐಪಿಎಲ್-13ರ ತನ್ನ 8ನೇ ಪಂದ್ಯದಲ್ಲಿ ಕಿಂಗ್ಸ್ ಪಂಜಾಬ್ ತಂಡದ ಎದುರು 8 ವಿಕೆಟ್‌ಗಳಿಂದ ಶರಣಾಯಿತು. ಇದರೊಂದಿಗೆ ಸತತ 5 ಸೋಲುಗಳಿಂದ ಕಂಗೆಟ್ಟಿದ್ದ ರಾಹುಲ್ ಪಡೆ ಕೊನೆಗೂ ಗೆಲುವಿನ ನಗೆ ಬೀರಿದರೆ, ಆರ್‌ಸಿಬಿ ಹ್ಯಾಟ್ರಿಕ್ ಗೆಲುವಿನ ಅವಕಾಶ ತಪ್ಪಿಸಿಕೊಂಡಿತು. ಆರ್‌ಸಿಬಿ ಪ್ರಸಕ್ತ ಆವೃತ್ತಿಯಲ್ಲಿ ಪಂಜಾಬ್ ಎದುರಿನ 2 ಮುಖಾಮುಖಿಯಲ್ಲೂ ಸೋಲು ಕಂಡಿತು.

ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ, ಬೌಲರ್‌ಗಳ ಸಂಘಟಿತ ಹೋರಾಟದ ನಡುವೆಯೂ ನಾಯಕ ವಿರಾಟ್ ಕೊಹ್ಲಿ (48 ರನ್, 39 ಎಸೆತ, 3 ಬೌಂಡರಿ) ಸಮಯೋಚಿತ ಬ್ಯಾಟಿಂಗ್ ಹಾಗೂ ಸ್ಲಾಗ್ ಓವರ್‌ಗಳಲ್ಲಿ ಕ್ರಿಸ್ ಮಾರಿಸ್ (25*ರನ್, 8 ಎಸೆತ, 1 ಬೌಂಡರಿ, 3 ಸಿಕ್ಸರ್) ಸ್ಫೋಟಕ ಬ್ಯಾಟಿಂಗ್ ಫಲವಾಗಿ 6 ವಿಕೆಟ್‌ಗೆ 171 ರನ್ ಕಲೆಹಾಕಿತು. ಪ್ರತಿಯಾಗಿ ತ್ರಿಮೂರ್ತಿಗಳ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಪಂಜಾಬ್ ತಂಡ 2 ವಿಕೆಟ್‌ಗೆ 177 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಟೂರ್ನಿಯಲ್ಲಿ 21 ದಿನಗಳ ಬಳಿಕ ಗೆಲುವಿನ ನಗೆ ಬೀರಿತು. ಸೆಪ್ಟೆಂಬರ್ 24ರಂದು ದುಬೈನಲ್ಲಿ ಆರ್‌ಸಿಬಿ ವಿರುದ್ಧವೇ ಕಡೇ ಬಾರಿಗೆ ಜಯ ದಾಖಲಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net