

Kho Kho Champions: ಜ.19ರಂದು ನವದೆಹಲಿಯ ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಚೊಚ್ಚಲ ಖೋ ಖೋ ವಿಶ್ವಕಪ್ ಫೈನಲ್ನಲ್ಲಿ ಭಾರತ ಮಹಿಳಾ ಹಾಗೂ ಪುರುಷ ತಂಡವು ಭರ್ಜರಿ ಜಯ ಸಾಧಿಸಿತು. ರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿದ ಕರ್ನಾಟದಕದ ಪ್ರತಿಭೆಗಳಾದ ಎಂ.ಕೆ. ಗೌತಮ್ ಮತ್ತು ಬಿ.ಚೈತ್ರಾ ಇದೀಗ ರಾಜ್ಯ ಸರ್ಕಾರ ತಮಗೆ ಘೋಷಿಸಿದ ಐದು ಲಕ್ಷ ರೂ. ಬಹುಮಾನ ಹಣವನ್ನು ತಿರಸ್ಕರಿಸುವುದಾಗಿ ಹೇಳಿದ್ದಾರೆ.
ಮಹಿಳಾ ಫೈನಲ್ ಹಣಾಹಣಿಯಲ್ಲಿ ಅತ್ಯುತ್ತಮ ಆಲ್ರೌಂಡ್ ಪ್ರದರ್ಶನ ನೀಡಿದ್ದ ಟಿ.ನರಸೀಪುರದ ಕುರುಬೂರಿನ ಯುವತಿ ಬಿ. ಚೈತ್ರಾಗೆ (B Chaitra) ಮತ್ತು ಮಂಡ್ಯದ ಎಂ.ಕೆ. ಗೌತಮ್, ಸಿಎಂ ಸಿದ್ದರಾಮಯ್ಯ ಘೋಷಿಸಿದ ಐದು ಲಕ್ಷ ರೂ. ಹಣವನ್ನು ಸ್ವೀಕರಿಸುವುದಿಲ್ಲ ಎಂಬ ಅಚ್ಚರಿ ಹೇಳಿಕೆ ನೀಡಿದ್ದಾರೆ. ತಮಗೆ ದೊರೆತ ಮನ್ನಣೆಯ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ ಚಾಂಪಿಯನ್ಗಳು, ಈ ಗೌರವವು ಅಸಮರ್ಪಕ. 5 ಲಕ್ಷ ರೂ. ನಗದು ಬಹುಮಾನ ಕ್ರೀಡೆಯಲ್ಲಿ ಮುಂದುವರಿಯಲು ನಮ್ಮನ್ನು ಪ್ರೋತ್ಸಾಹಿಸುವುದಿಲ್ಲ ಎಂದಿದ್ದಾರೆ.
ಸಿಎಂ ಸಿದ್ದರಾಮಯ್ಯ ಘೋಷಿಸಿದ ಬಹುಮಾನ ಹಣದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಕ್ರೀಡಾಪಟುಗಳು, ನಾವು ಚೊಚ್ಚಲ ಖೋ ಖೋ ವಿಶ್ವಕಪ್ ಗೆದ್ದು ಬಂದಿದ್ದೇವೆ. ನಮ್ಮನ್ನು ಸಿಎಂ ಸನ್ಮಾನಿಸಿ, ಐದು ಲಕ್ಷ ರೂ. ಹಣವನ್ನು ಘೋಷಿಸಿದರು. ಆದರೆ, ನೆರೆಯ ಮಹಾರಾಷ್ಟ್ರ ಸರ್ಕಾರವು ತಮ್ಮ ಕ್ರೀಡಾಪಟುಗಳಿಗೆ 2.25 ಕೋಟಿ ರೂ. ನಗದು ಬಹುಮಾನ ನೀಡುವುದರ ಜತೆಗೆ ಉನ್ನತ ದರ್ಜೆಯ ಸರ್ಕಾರಿ ಉದ್ಯೋಗದ ಭರವಸೆಯನ್ನೂ ಘೋಷಿಸಿದೆ ಎಂದರು.
ಪ್ರಶಸ್ತಿಯನ್ನು ತಿರಸ್ಕರಿಸುವ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿದ ಗೌತಮ್, "ನಾವು ಪ್ರಶಸ್ತಿಯನ್ನು ತಿರಸ್ಕರಿಸುವ ಮೂಲಕ ಸಿಎಂ ಅವರನ್ನು ಅವಮಾನಿಸುತ್ತಿಲ್ಲ. ಆದರೆ ನಮಗೆ ಸಿಗಬೇಕಾದ ಗೌರವ ಇಲ್ಲಿ ಸಿಗಲಿಲ್ಲ. ಆದ ಕಾರಣ ಐದು ಲಕ್ಷ ರೂ. ಬಹುಮಾನ ಹಣವನ್ನು ತಿರಸ್ಕರಿಸುತ್ತಿದ್ದೇವೆ. ರಾಜ್ಯ ಸರ್ಕಾರವು ಈ ವಿಷಯವನ್ನು ಕೂಲಂಕಷವಾಗಿ ಪರಿಶೀಲಿಸಬೇಕು. ಮಹಾರಾಷ್ಟ್ರ, ಉತ್ತರ ಪ್ರದೇಶ ಸೇರಿದಂತೆ ಇತರೆ ರಾಜ್ಯಗಳು ಹೇಗೆ ನೀಡಿತು ಎಂಬುದರ ಬಗ್ಗೆ ಗಮನಿಸಿ, ಆ ನಂತರ ನಿರ್ಧರಿಸಬೇಕು ಎಂದು ಹೇಳಿದ್ದಾರೆ.
ಇನ್ನೂ ಬಿ. ಚೈತ್ರಾ ಮಾತನಾಡಿ, "ಸರ್ಕಾರ ಘೋಷಿಸಿದ ಬಹುಮಾನ ಹಣ ನಮಗೆ ಬೇಸರ ತಂದಿದೆ. ನಾವು ಇತರ ರಾಜ್ಯಗಳ ವಿಶ್ವಕಪ್ ಆಟಗಾರರಿಗೆ ನೀಡಲಾದ ಮೊತ್ತವನ್ನೇ ಇಲ್ಲಿಯೂ ಕೇಳುತ್ತಿದ್ದೇವೆ. ಇತರ ಕ್ರೀಡಾಪಟುಗಳಂತೆಯೇ ನಮಗೂ ಪದಕಗಳು ಲಭಿಸಿವೆ. ಕ್ರಿಕೆಟ್ ಸೇರಿದಂತೆ ವಿವಿಧ ಆಟಗಳ ಕ್ರೀಡಾಪುಟಗಳಿಗೆ ನೀಡುವ ಸೌಲಭ್ಯಗಳಿಂದ ನಾವು ವಂಚಿತರಾಗಿದ್ದೇವೆ" ಎಂದು ಬೇಸರ ಹೊರಹಾಕಿದ್ದಾರೆ,(ಏಜೆನ್ಸೀಸ್).