

ಪ್ಯಾರಿಸ್: ವರ್ಷದ 2ನೇ ಗ್ರಾಂಡ್ ಸ್ಲಾಂ ಪ್ರಶಸ್ತಿ ಗೆಲುವಿನ ನಿರೀಕ್ಷೆಯಲ್ಲಿರುವ ಅಮೆರಿಕದ ಸೋಫಿಯಾ ಕೆನಿನ್ ಮತ್ತು ವೃತ್ತಿಜೀವನದ ಮೊದಲ ಗ್ರಾಂಡ್ ಸ್ಲಾಂ ಗೆಲುವಿನ ತವಕದಲ್ಲಿರುವ ಪೋಲೆಂಡ್‌ನ ಇಗಾ ಸ್ವಿಯಾಟೆಕ್ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಮಹಿಳಾ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ಶನಿವಾರ ಸೆಣಸಲಿದ್ದಾರೆ.
4 ವರ್ಷಗಳ ಹಿಂದೆ ಕೆನಿನ್-ಸ್ವಿಯಾಟೆಕ್ ಪ್ಯಾರಿಸ್ ಕ್ಲೇಕೋರ್ಟ್‌ನಲ್ಲೇ ಮುಖಾಮುಖಿಯಾಗಿದ್ದರು. ಅದು ಟೂರ್ನಿಯ ಜೂನಿಯರ್ ಬಾಲಕಿಯರ ವಿಭಾಗದ 3ನೇ ಸುತ್ತಿನ ಪಂದ್ಯವಾಗಿತ್ತು. ಅದರಲ್ಲಿ ಸ್ವಿಯಾಟೆಕ್ 6-4, 7-5ರಿಂದ ಕೆನಿನ್‌ಗೆ ಸೋಲಿಸಿದ್ದರು. ಆ ಪಂದ್ಯ ಈಗಲೂ ಇಬ್ಬರು ಆಟಗಾರ್ತಿಯರಿಗೆ ನೆನಪಿದೆ. 21 ವರ್ಷದ ಕೆನಿನ್ ಇದೀಗ ಆ ಸೋಲಿಗೆ ಸೇಡು ತೀರಿಸಿಕೊಳ್ಳಲು ಬಯಸಿದ್ದರೆ, 19 ವರ್ಷದ ಸ್ವಿಯಾಟೆಕ್ ಪ್ರಾಬಲ್ಯ ಉಳಿಸಿಕೊಳ್ಳುವ ಹಂಬಲದಲ್ಲಿದ್ದಾರೆ.
4ನೇ ಶ್ರೇಯಾಂಕಿತೆ ಕೆನಿನ್ ಈಗಾಗಲೆ ವರ್ಷಾರಂಭದ ಆಸ್ಟ್ರೇಲಿಯನ್ ಓಪನ್ ಗೆದ್ದು ಸೀನಿಯರ್ ವಿಭಾಗದಲ್ಲಿ ಗಮನ ಸೆಳೆದಿದ್ದರೆ, ವಿಶ್ವ ನಂ. 54 ಸ್ವಿಯಾಟೆಕ್ ತಾನಾಡುತ್ತಿರುವ 7ನೇ ಗ್ರಾಂಡ್ ಸ್ಲಾಂ ಟೂರ್ನಿಯಲ್ಲಿ ಪ್ರಶಸ್ತಿ ಗೆಲುವಿನ ಸನಿಹ ತಲುಪಿದ್ದಾರೆ.
ಶ್ರೇಯಾಂಕರಹಿತೆಯಾಗಿ ಕಣಕ್ಕಿಳಿದ ಸ್ವಿಯಾಟೆಕ್ ಟೂರ್ನಿಯಲ್ಲಿ ಇದುವರೆಗೆ ಒಂದೂ ಸೆಟ್ ಸೋಲದೆ ಫೈನಲ್‌ಗೇರಿರುವುದು ಗಮನಾರ್ಹ. ಇದುವರೆಗಿನ 6 ಎದುರಾಳಿಗಳಿಗೆ ಒಟ್ಟು 23 ಗೇಮ್ ಮಾತ್ರ ಬಿಟ್ಟುಕೊಟ್ಟಿದ್ದಾರೆ. 2007ರಲ್ಲಿ ಜಸ್ಟಿನ್ ಹೆನಿನ್ ಜಯಿಸಿದ ಬಳಿಕ ಇದುವರೆಗೆ ಪ್ಯಾರಿಸ್‌ನಲ್ಲಿ ಯಾವ ಆಟಗಾರ್ತಿಯೂ ಒಂದೂ ಸೆಟ್ ಸೋಲದೆ ಪ್ರಶಸ್ತಿ ಜಯಿಸಿಲ್ಲ. ಆದರೆ ಶುಕ್ರವಾರ ಡಬಲ್ಸ್ ಸೆಮಿಫೈನಲ್ ಪಂದ್ಯದಲ್ಲಿ ಆಡಿದ ಬಳಲಿಕೆಯೂ ಕಾಡದಂತೆ ಅವರು ಸಿಂಗಲ್ಸ್ ಪ್ರಶಸ್ತಿಗಾಗಿ ಹೋರಾಡಬೇಕಾದ ಸವಾಲು ಹೊಂದಿದ್ದಾರೆ.
ಮತ್ತೊಂದೆಡೆ ಈ ವರ್ಷದ ಗ್ರಾಂಡ್ ಸ್ಲಾಂ ಟೂರ್ನಿಗಳಲ್ಲಿ 16 ಗೆಲುವು, 1 ಸೋಲಿನ (ಯುಎಸ್ ಓಪನ್) ದಾಖಲೆ ಹೊಂದಿರುವ ಕೆನಿನ್, ಈಗಾಗಲೆ ಗ್ರಾಂಡ್ ಸ್ಲಾಂ ಪ್ರಶಸ್ತಿಗೆ ಮುತ್ತಿಟ್ಟ ಅನುಭವ ಹೊಂದಿರುವುದು ಫೈನಲ್‌ನಲ್ಲಿ ಆತ್ಮವಿಶ್ವಾಸ ಹೆಚ್ಚಿಸಲಿದೆ. ಅಲ್ಲದೆ ಸೆಮೀಸ್‌ನಲ್ಲಿ ಅನುಭವಿ ಆಟಗಾರ್ತಿ ಪೆಟ್ರಾ ಕ್ವಿಟೋವಾಗೆ ಸೋಲುಣಿಸಿದ ಬಲವೂ ಇದೆ.
ಸ್ವಿಯಾಟೆಕ್ ಗೆದ್ದರೆ, ಗ್ರಾಂಡ್ ಸ್ಲಾಂ ಪ್ರಶಸ್ತಿ ಜಯಿಸಿದ ಪೋಲೆಂಡ್‌ನ ಮೊದಲ ಆಟಗಾರ್ತಿ ಎನಿಸಲಿದ್ದಾರೆ. ಆಗ್ನೆಸ್ಕಾ ರಾಡ್ವಾಂಸ್ಕಾ 2012ರ ವಿಂಬಲ್ಡನ್ ರನ್ನರ್‌ಅಪ್ ಆಗಿದ್ದು, ಪೋಲೆಂಡ್ ಆಟಗಾರ್ತಿಯ ಇದುವರೆಗಿನ ಶ್ರೇಷ್ಠ ಸಾಧನೆಯಾಗಿದೆ.
*ಪಂದ್ಯ ಆರಂಭ: ಸಂಜೆ 6.30
*ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್2