ಕೊನೇ ಎಸೆತದಲ್ಲಿ ಸಿಡಿದ ಸಿಕ್ಸರ್​; ಡಬ್ಲ್ಯುಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್​ ಶುಭಾರಂಭ

mi web
Published on

ಬೆಂಗಳೂರು: ನಾಯಕಿ ಹರ್ಮಾನ್​ಪ್ರೀತ್​ ಕೌರ್​ (55 ರನ್​, 34 ಎಸೆತ, 7 ಬೌಂಡರಿ, 1 ಸಿಕ್ಸರ್​) ಅರ್ಧಶತಕ ಹಾಗೂ ಅಂತಿಮ ಎಸೆತದಲ್ಲಿ ಸಜೀವನ್​ ಸಜನ (6*) ಸಿಡಿಸಿದ ಸಿಕ್ಸರ್​ ನೆರವಿನಿಂದ ಹಾಲಿ ಚಾಂಪಿಯನ್​ ಮುಂಬೈ ಇಂಡಿಯನ್ಸ್​ ತಂಡ ವುಮೆನ್ಸ್​ ಪ್ರಿಮೀಯರ್​ ಲೀಗ್​ (ಡಬ್ಲುಪಿಎಲ್​) 2ನೇ ಆವೃತ್ತಿಯಲ್ಲಿ ಶುಭಾರಂಭ ಕಂಡಿದೆ. ಶುಕ್ರವಾರ ನಡೆದ ಉದ್ಘಾಟನಾ ಪಂದ್ಯದಲ್ಲಿ ಹರ್ಮಾನ್​ಪ್ರೀತ್​ ಕೌರ್​ ಬಳಗ ಡೆಲ್ಲಿ ಕ್ಯಾಪಿಟಲ್ಸ್​ ಎದುರು 4 ವಿಕೆಟ್​ಗಳಿಂದ ರೋಚಕ ಗೆಲುವು ದಾಖಲಿಸಿತು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದ ಸೋತು ಬ್ಯಾಟಿಂಗ್​ಗೆ ಇಳಿದ ಡೆಲ್ಲಿ ತಂಡ ಆರಂಭಿಕ ಆಘಾತದ ಬಳಿಕ ಯುವ ಬ್ಯಾಟುಗಾರ್ತಿ ಆಲಿಸ್​ ಕ್ಯಾಪ್ಸಿ (75 ರನ್​, 53 ಎಸೆತ, 8 ಬೌಂಡರಿ, 3 ಸಿಕ್ಸರ್​) ಹೋರಾಟದಿಂದ 5 ವಿಕೆಟ್​ಗೆ 171 ರನ್​ ಪೇರಿಸಿತು. ಪ್ರತಿಯಾಗಿ ಹರ್ಮಾನ್​ಪ್ರೀತ್​ ಹಾಗೂ ವಿಕೆಟ್​ ಕೀಪರ್​-ಬ್ಯಾಟರ್​ ಯಸ್ತಿಕಾ ಭಾಟಿಯಾ (57 ರನ್​, 45 ಎಸೆತ, 8 ಬೌಂಡರಿ, 2 ಸಿಕ್ಸರ್​) ಅರ್ಧಶತಕದಿಂದ ಮುಂಬೈ ಭರ್ತಿ 20 ಓವರ್​ಗಳಲ್ಲಿ 6 ವಿಕೆಟ್​ಗೆ 173 ರನ್​ಗಳಿಸಿ ಗೆದ್ದು ಬೀಗಿತು.

ಕ್ಯಾಪ್ಸಿ ಎಸೆದ ಅಂತಿಮ ಓವರ್​ನಲ್ಲಿ 3 ಎಸೆತದಲ್ಲಿ 9 ರನ್​ ಅಗತ್ಯವಿದ್ದಾಗ ಬೌಂಡರಿ ಸಿಡಿಸಿದ ಕೌರ್​, ಮರುಎಸೆತದಲ್ಲಿ ವಿಕೆಟ್​ ಕೈ ಚೆಲ್ಲಿದರು. ಅಂತಿಮ ಎಸೆತದಲ್ಲಿ 5 ರನ್​ ಬೇಕಿದ್ದಾಗ ಸಜೀವನ್​ ಸಜನ ಸಿಕ್ಸರ್​ ಬಾರಿಸಿ ಗೆಲುವಿನ ರೂವಾರಿ ಎನಿಸಿದರು.

ಡೆಲ್ಲಿ ಕ್ಯಾಪಿಟಲ್ಸ್​: 5 ವಿಕೆಟ್​ಗೆ 171 (ಶೆಫಾಲಿ 1, ಲ್ಯಾನಿಂಗ್​ 31, ಕ್ಯಾಪ್ಸಿ 75, ರೋಡ್ರಿಗಸ್​ 42, ಸೀವರ್​ 33ಕ್ಕೆ2, ಕೆರ್​ 43ಕ್ಕೆ 2). ಮುಂಬೈ ಇಂಡಿಯನ್ಸ್​: 6 ವಿಕೆಟ್​ಗೆ 173 (ಮ್ಯಾಥ್ಯೂಸ್​ 0, ಯಸ್ತಿಕಾ 57, ಸೀವರ್​ 19, ಹರ್ಮಾನ್​ಪ್ರೀತ್​ 55 , ಕೆರ್​ 24, ಆರುಂಧತಿ 27ಕ್ಕೆ2, ಕ್ಯಾಪ್ಸಿ 23ಕ್ಕೆ 2).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net