ಕೊಹ್ಲಿ ದಾಖಲೆ ಸರಿಗಟ್ಟಿ ಲಿಸ್ಟ್ ಎ ಏಕದಿನ ಕ್ರಿಕೆಟ್‌ನಲ್ಲಿ ವಿಶ್ವದಾಖಲೆ ಬರೆದ ಕನ್ನಡಿಗ ಕರುಣ್ ನಾಯರ್

New Project (2)
Published on

ವಿಶಾಖಪಟ್ಟಣ: ವಿದರ್ಭ ತಂಡದ ನಾಯಕ, ಕನ್ನಡಿಗ ಕರುಣ್ ನಾಯರ್ ಲಿಸ್ಟ್ ಎ ಏಕದಿನ ಕ್ರಿಕೆಟ್‌ನಲ್ಲಿ ಔಟಾಗದೆ ಗರಿಷ್ಠ ರನ್ ಗಳಿಸಿದ ವಿಶ್ವದಾಖಲೆ ನಿರ್ಮಿಸಿದ್ದಾರೆ. ವಿಜಯ್ ಹಜಾರೆ ಟ್ರೋಫಿಯಲ್ಲಿ ಸತತ 3ನೇ ಹಾಗೂ ಒಟ್ಟಾರೆ 4ನೇ ಶತಕ ಸಿಡಿಸಿದ 33 ವರ್ಷದ ಕರುಣ್ ನಾಯರ್ ಒಟ್ಟಾರೆ 542 ರನ್ ಗಳಿಸಿದ ನಂತರ ಟೂರ್ನಿಯಲ್ಲಿ ಮೊದಲ ಬಾರಿ ಔಟಾದರು. ಡಿ ಗುಂಪಿನ ಪಂದ್ಯದಲ್ಲಿ ಉತ್ತರ ಪ್ರದೇಶ ವಿರುದ್ಧ ಈ ಸಾಧನೆ ಮಾಡಿದ ಕರುಣ್, 2010ರಲ್ಲಿ ನ್ಯೂಜಿಲೆಂಡ್‌ನ ಜೇಮ್ಸ್ ಫ್ರಾಂಕ್ಲಿನ್ (527) ನಿರ್ಮಿಸಿದ್ದ ದಾಖಲೆಯನ್ನು ಮುರಿದರು.

ಉ.ಪ್ರದೇಶ ನೀಡಿದ 308 ರನ್ ಚೇಸಿಂಗ್‌ನಲ್ಲಿ ವಿದರ್ಭ ಪರ ಯಶ್ ರಾಥೋಡ್ 138 ರನ್‌ಗಳಿಸಿ ಅಜೇಯರಾಗಿ ಉಳಿದರೆ, ಕರುಣ್ ನಾಯರ್ (112 ರನ್, 101 ಎಸೆತ, 11 ಬೌಂಡರಿ, 2 ಸಿಕ್ಸರ್) ಶತಕ ಸಿಡಿಸಿ 4 ಇನಿಂಗ್ಸ್‌ಗಳ ಬಳಿಕ ಔಟಾದರು. ಅಂತಿಮವಾಗಿ 47.2 ಓವರ್‌ಗಳಲ್ಲಿ 2 ವಿಕೆಟ್‌ಗೆ 313 ರನ್‌ಗಳಿಸಿ ವಿದರ್ಭ ಗೆಲುವು ದಾಖಲಿಸಿತು.

ವಿದರ್ಭ ಪರ ಹಾಲಿ ಟೂರ್ನಿಯ ಐದು ಇನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ನಡೆಸಿರುವ ಕರುಣ್ ಕ್ರಮವಾಗಿ ಮೊದಲ 4 ಇನಿಂಗ್ಸ್‌ಗಳಲ್ಲಿ ಅಜೇಯ 112,44, 163,111 ಹಾಗೂ 112 ರನ್‌ಗಳಿಸಿದ್ದಾರೆ. ಕರುಣ್ ನಾಯರ್ ವಿಜಯ್ ಹಜಾರೆ ಟ್ರೋಫಿ ಆವೃತ್ತಿಯೊಂದರಲ್ಲಿ 4 ಅಥವಾ ಅದಕ್ಕಿಂತ ಹೆಚ್ಚು ಶತಕ ಸಿಡಿಸಿದ 6ನೇ ಸಾಧಕ. ತಮಿಳುನಾಡಿನ ಎನ್.ಜಗದೀಶನ್ (2022/23) ಐದು ಶತಕ ಸಿಡಿಸಿ ಅಗ್ರಸ್ಥಾನದಲ್ಲಿದ್ದಾರೆ. ವಿರಾಟ್ ಕೊಹ್ಲಿ (2008/09), ಪೃಥ್ವಿ ಷಾ (2020/21), ದೇವದತ್ ಪಡಿಕ್ಕಲ್ (2020/21), ಋತುರಾಜ್ ಗಾಯಕ್ವಾಡ್ (2021/22 ಮತ್ತು 2022/23) ಹಿಂದಿನ ಸಾಧಕರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net